ಹೂವ ತಂದವರು ಪ್ರಶಸ್ತಿ ಪ್ರದಾನ ಹಾಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ನೆನಪಿನಂಗಳ ಪುಸ್ತಕ ಬಿಡುಗಡೆ

ಪ್ರಶಸ್ತಿ ಪ್ರದಾನ ಹಾಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮ

ಹೂವ ತಂದವರು ಪ್ರಶಸ್ತಿ ಪ್ರದಾನ ಹಾಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ನೆನಪಿನಂಗಳ ಪುಸ್ತಕ ಬಿಡುಗಡೆ 

ಧಾರವಾಡ 27 : ಹುಟ್ಟಿನಿಂದ ಸಾಯುವವರೆಗೆ ಮನುಷ್ಯನಿಗೆ ಒಂದಿಲ್ಲ ಒಂದು ಪ್ರತಿಭೆ ಇದ್ದೆ ಇರುತ್ತದೆ. ಒಂದು ವೃತ್ತಿ ಇರುತ್ತದೆ. ವೃತ್ತಿಯೊಂದಿಗೆ ಹವ್ಯಾಸವೂ ಕೂಡ ಇರುತ್ತದೆ. ಜೀವನದ ಅನುಭವದಲ್ಲಿ ಹೊಸದನ್ನು ಕಂಡಾಂಗ ಅದನ್ನು ಮಾತಿನ ಮೂಲಕ ಇಲ್ಲವೇ ಬರವಣಿಗೆಯ ಮೂಲಕ ಹೊರಹಾಕುವ ಪ್ರಕ್ರಿಯೆ ಇರುತ್ತದೆ. ಬರವಣಿಗೆಯ ಮೂಲಕ ಹೊರಹಾಕುವ ಈ ಕ್ರಿಯೆಯನ್ನೇ ಸಾಹಿತ್ಯವೆಂದು ಗುರುತಿಸಲಾಗಿದೆ ಎಂದು ಧಾರವಾಡ ಉಪ ಪೊಲೀಸ್ ವರಿಷ್ಠಾಧಿಕಾರಿ ಶಿವಾನಂದ ಕಟಗಿ ಹೇಳಿದರು.  

ಕರ್ನಾಟಕ ವಿದ್ಯಾವರ್ಧಕ ಸಂಘವು ಶ್ರೀ ಯಲ್ಲಪ್ಪ ರಾಮಪ್ಪ ತಂಬೂರ ಸ್ಮರಣಾರ್ಥ ದತ್ತಿ ಅಂಗವಾಗಿ ಆಯೋಜಿಸಿದ್ದ ‘ಹೂವ ತಂದವರು’ ಪ್ರಶಸ್ತಿ ಪ್ರದಾನ-2024 ಹಾಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ‘ನೆನಪಿನಂಗಳ’ ಪುಸ್ತಕ ಬಿಡುಗಡೆ ಮಾಡಿ ಮಾತನಾಡುತ್ತಿದ್ದರು.  

ಮುಂದುವರೆದು ಮಾತನಾಡಿದ, ಇವತ್ತಿನ ಕಾಲಘಟ್ಟದಲ್ಲಿ ಸಂಬಂಧಗಳು, ಮಾನವೀಯ ಮೌಲ್ಯಗಳು, ಪರಸ್ಪರ ಅನೋನ್ಯತೆ ಕಡಿಮೆಯಾಗುತ್ತಿರುವುದು ದುರಂತದ ಸಂಗತಿಯಾಗಿದೆ. ಶ್ರಮವಹಿಸಿ ದುಡಿದ ಹಣವನ್ನು ಕಳೆದುಕೊಂಡಾಗ ನೋವಾಗುವುದು ಸಹಜ. ಇವತ್ತು ಸೈಬರ್ ಕ್ರೈಂ ಮೂಲಕ ಲಕ್ಷಗಟ್ಟಲೇ ಹಣ ಕಳೆದುಕೊಳ್ಳುತ್ತಿರುವುದನ್ನು ಕಾಣುತ್ತೇವೆ. ಸುಶಿಕ್ಷಿತರೇ ಮೋಸ ಮಾಡುತ್ತಿರುವುದು ಖೇದದ ಸಂಗತಿಯಾಗಿದೆ. ಇದರಿಂದ ಜಾಗೃತರಾಗಬೇಕಾದದ್ದು ಅಗತ್ಯವಾಗಿದೆ ಎಂದರು.  

ಮುಖ್ಯಅತಿಥಿಗಳಾಗಿ ಧಾರವಾಡದ ಹಿರಿಯ ಸಂಗೀತಗಾರ ಮೃತ್ಯುಂಜಯ ಶೆಟ್ಟರ ಮಾತನಾಡಿ, ಕನ್ನಡ ನಾಡು ನುಡಿಯ ಬಗ್ಗೆ ಅಪಾರವಾದ ಆಸಕ್ತಿಯನ್ನು ಹೊಂದಿದ್ದ ಶ್ರೀ ಯಲ್ಲಪ್ಪ ತಂಬೂರ ಸ್ವಚ್ಛವಾಗಿ, ಪರಿಶುದ್ಧರಾಗಿ ಶರಣರಂತೆ ಬಾಳಿ ಬದುಕಿದವರು. ಶೇಷವನ್ನು ಇಟ್ಟುಕೊಂಡು ವಿಶೇಷವನ್ನು ಹೊರ ಜಗತ್ತಿಗೆ ಕಾಣಿಕೆಯಾಗಿ ಕೊಟ್ಟವರು. ರಾಗವಿಲ್ಲದೆ ಅನುರಾಗವನ್ನು ಹೊಂದಿದವರಾಗಿದ್ದ ಶ್ರೀಯುತರು ಎಲ್ಲರನ್ನು ಕರೆದುಕೊಂಡು  ಎತ್ತರಕ್ಕೆ ತಾವು ಏರಿದವರು. ಪ್ರಾರ್ಥನೆ ಮಾಡುವ ತುಟಿಗಳಿಗಿಂತ ಸಹಾಯ ಮಾಡುವ ಹಸ್ತಗಳೇ ಶ್ರೇಷ್ಠ ಎಂಬ ಮಾತಿಗೆ ಬದ್ಧರಾದವರು. ಸ್ಮರಣೆಯಲ್ಲಿ ಸಂಘವು ನಡೆಸುತ್ತಿರುವ ದತ್ತಿ ಕಾರ್ಯಕ್ರಮ ಶ್ಲಾಘನೀಯವಾದದ್ದು ಎಂಬ ಅಭಿಪ್ರಾಯವ್ಯಕ್ತಪಡಿಸಿದರು.  

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ನಿಂಗಣ್ಣ ಕುಂಟಿ(ಇಟಗಿ) ಶ್ರದ್ಧೆ ಇದ್ದಲ್ಲಿ ಸಿದ್ಧಿ ಇದೆ. ಮನುಷ್ಯ ಎಷ್ಟು ವರ್ಷ ಬದುಕಿದಾ ಅನ್ನುವುದಕ್ಕಿಂತ ಹೇಗೆ ಬದುಕಿದ ಅನ್ನುವುದು ಮುಖ್ಯವಾಗುತ್ತದೆ. ಪರೋಪಕಾರಕ್ಕಾಗಿಯೇ ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದ  ಯಲ್ಲಪ್ಪ ಅವರು ತಮ್ಮ ಪತ್ನಿ ಶೈಕ್ಷಣಿವಾಗಿ ಮುಂದುವರೆದು ನೀಡಿದ ಸಹಕಾರ ಅಮೋಘವಾದದ್ದು ಎಂದರು.  

ದತ್ತಿದಾನಿಗಳ ಪರವಾಗಿ ಡಾ. ಯಶೋಧಾ ನಿಂಬಣ್ಣವರ, ಬಸಪ್ಪ ತಂಬೂರ ಮಾತನಾಡಿದರು.  

ಹುಬ್ಬಳ್ಳಿಯ ನಗರ ಸಾರಿಗೆ 1 ನೇ ಘಟಕದ ನಿರ್ವಾಹಕಿ ರತ್ನಮ್ಮ ಕುನ್ನೂರ ಅವರಿಗೆ ‘ಹೂವ ತಂದವರು ಪ್ರಶಸ್ತಿ’ಯನ್ನು ನೀಡಿ, ಸನ್ಮಾನಿಸಿ, ಗೌರವಿಸಲಾಯಿತು.  

ದೂಳಪ್ಪ ದುಂದೂರ ಪ್ರಾರ್ಥಿಸಿದರು. ಶಂಕರ ಕುಂಬಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಜಿನದತ್ತ ಹಡಗಲಿ ನಿರೂಪಿಸಿದರು. ಶಂಕರ ಹಲಗತ್ತಿ ವಂದಿಸಿದರು. ತಿಪ್ಪೇಶ್ವರ ಅಣಜಿ ಪ್ರಶಸ್ತಿ ಫಲಕ ವಾಚಿಸಿದರು.  

ಕಾರ್ಯಕ್ರಮದಲ್ಲಿ ಬಿ.ಜಿ. ಬಾರ್ಕಿ, ಗೀರೀಶ ಸುಣಗಾರ, ಹನುಮಂತಪ್ಪ ಇಟಗಿ, ರುದ್ರೇಶ ಬಾರಕೇರ, ತಾಯಣ್ಣಾ ಕಬ್ಬೇರ, ಶ್ರೀಕಾಂತ ದೇವಗೇರಿ, ಅಣ್ಣಪ್ಪ ಶಿರಸಿ, ಚಂದ್ರಶೇಖರ ರೊಟ್ಟಿಗವಾಡ, ರಫಿಕಅಹ್ಮದ ನಾಗನೂರ, ಅಪ್ಪಾಸಾಹೇಬ ನದಾಫ್ ಸೇರಿದಂತೆ ತಂಬೂರ ಕುಟುಂಬಸ್ಥರು, ಅಭಿಮಾನಿಗಳು ಇದ್ದರು.