ಹಾಸ್ಯ ಅಪಹಾಸ್ಯವಾಗಬಾರದು; ಮುಖ್ಯಮಂತ್ರಿ ಚಂದ್ರು

ಕಲಾವಿದ ಮುಖ್ಯಮಂತ್ರಿ ಚಂದ್ರು

ಬೆಂಗಳೂರು, ಡಿ.1- ಹಾಸ್ಯ ಒಂದು ಆರೋಗ್ಯಕರ ಪ್ರವೃತ್ತಿಯಾಗಿದ್ದು, ಅದು ಎಂದಿಗೂ ಅಪಹಾಸ್ಯವಾಗಬಾರದು. ಎಂದೆಂದಿಗೂ ಮತ್ತೊಬ್ಬರಿಗೆ ನೋವುಂಟುಮಾಡಬಾರದು ಎಂದು ರಂಗಭೂಮಿ ಹಾಗೂ ಚಲನಚಿತ್ರ ಕಲಾವಿದ ಮುಖ್ಯಮಂತ್ರಿ ಚಂದ್ರು ಹೇಳಿದ್ದಾರೆ. 

ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಕೃಷ್ಣರಾಜ ಪರಿಷನ್ಮಂದಿರದಲ್ಲಿ ಡಾ.ಎಂ.ಎಸ್ ವಿದ್ಯಾ ರಚಿಸಿರುವ 'ಕನ್ನಡ ರಂಗಭೂಮಿಯಲ್ಲಿ ಹಾಸ್ಯ' ಪುಸ್ತಕ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಮನುಷ್ಯ ಜೀವಂತವಾಗಿರಲು ಹಾಸ್ಯ ಅಗತ್ಯ. ನಾಟಕ ಹುಟ್ಟಿದ್ದೇ ಮನರಂಜನೆಗಾಗಿ, ನಂತರ ಗಂಭೀರ ವಿಷಯಗಳ ನಾಟಕಗಳು ರೂಪುಗೊಂಡವು. ರಂಗಭೂಮಿಯು ಮನುಷ್ಯ ನ ಜೀವನಕ್ಕೆ ಹತ್ತಿರವಾದ ಕಲೆಯಾಗಿದ್ದು, ಕನ್ನಡ ರಂಗಭೂಮಿಯಲ್ಲಿ ಹಾಸ್ಯದ ಪುಸ್ತಕಗಳು ಬಂದಿರುವುದು ಬಹಳ ಕಡಿಮೆ. ಇದನ್ನು ಲೇಖಕಿ ವಿದ್ಯಾ ನೀಗಿಸಲು ಮುಂದಾಗಿದ್ದಾರೆ. ರಂಗಭೂಮಿಯಲ್ಲಿ ಹಾಸ್ಯದಿಂದ ಸಾರ್ವಜನಿಕರಿಗೆ ಅರಿವು ಮೂಡಿಸುವ ಮೂಲಕ ಮನರಂಜನೆ ನೀಡಬೇಕು ಎಂದು ಅವರು ತಿಳಿಸಿದರು.

‌ಹಿರಿಯ ರಂಗಭೂಮಿ ಕಲಾವಿದೆ ಭಾರ್ಗವಿ ನಾರಾಯಣ್  ಮಾತನಾಡಿ, ರಂಗಭೂಮಿಯಲ್ಲಿ ಹಾಸ್ಯ ನಾಟಕಗಳ ಪಾತ್ರ ದೊಡ್ಡದು. ಆದರೆ ಬುದ್ಧಿಜೀವಿಗಳು ಹಾಸ್ಯ ನಾಟಕ ಗಳನ್ನು ಎರಡನೇ ದರ್ಜೆಯಲ್ಲಿ ನೋಡುತ್ತಾರೆ. ‌ಕೇವಲ ಗಂಭೀರವಾದ ಅಂಶಗಳನ್ನು ಹೊಂದಿರುವ ನಾಟಕಗಳು ಪ್ರಥಮ ದರ್ಜೆ ಎಂಬ ದೃಷ್ಠಿಕೋನ ಸಮಂಜಸವಲ್ಲ. ಹಾಸ್ಯ ಆರೋಗ್ಯದ ಕೀಲಿ ಕೈ. ವಿಚಾರ, ವಿಡಂಬನಾತ್ಮಕ ನಾಟಕಗಳು ಬೇಕು. ಆದರೆ  ಹಾಸ್ಯವನ್ನು ಎರಡನೇ ದರ್ಜೆಯಲ್ಲಿ ನೋಡದೆ ಅದನ್ನೂ ಪ್ರೋತ್ಸಾಹಿಸಿ ಬೆಳೆಸಬೇಕು ಎಂದು ಮನವರಿಕೆ ಮಾಡಿಕೊಟ್ಟರು.

‌‌ರಂಭೂಮಿ ಕಲಾವಿದ ಹಾಗೂ ರಂಗಸಂಘಟಕ ಕೆ.ವಿ. ನಾಗರಾಜ ಮೂರ್ತಿ ಮಾತನಾಡಿ, ಹಾಸ್ಯ ನಾಟಕದ ಪ್ರಮುಖ ಅಂಶ. ನಟನೆಗೆ ಸಾಹಿತ್ಯ ಪೂರಕವಾಗಿದ್ದಾಗ ಮಾತ್ರ ಹಾಸ್ಯ ನಾಟಕ ಯಶಸ್ವಿಯಾಗುತ್ತದೆ ಇಲ್ಲದಿದ್ದರೆ ಅಪಹಾಸ್ಯವಾಗುತ್ತದೆ. ಲೇಖಕಿ ವಿದ್ಯಾ ಅವರು ಪುಸ್ತಕದಲ್ಲಿ ಜಾನಪದ ಹಾಗೂ ರಂಗಭೂಮಿಯ ಬಗೆಗೆ ಸೊಗಸಾದ ಚಿತ್ರಣ ನೀಡಿದ್ದಾರೆ ಎಂದು ಅವರು ನುಡಿದರು.‌ಕಾರ್ಯಕ್ರಮದಲ್ಲಿ ಸಹಾಯಕ ಪ್ರಾಧ್ಯಾಪಕ ಡಾ.ಕೆ.ರಾಮಕೃಷ್ಣಯ್ಯ, ಡಾ.ಬಿ.ವಿ.ರಾಜಾರಾಂ ಹಾಗೂ ಪ್ರಮುಖ ರಂಗ ಕಲಾವಿದರು ಉಪಸ್ಥಿತರಿದ್ದರು.