ಸವದತ್ತಿ ಪಟ್ಟಣದಲ್ಲಿ ಬೃಹತ್ ಆರೋಗ್ಯ ಮೇಳ -ಖಾಸಗಿ ಮಾದರಿ ವೈದ್ಯಕೀಯ ಸೇವೆ: ಸಚಿವ ದಿನೇಶ್ ಗುಂಡೂರಾವ
ಬೆಳಗಾವಿ, ಮಾ.23 : ಬೃಹತ್ ಆರೋಗ್ಯ ಮೇಳದಲ್ಲಿ ಜಿಲ್ಲೆಯ ಎಲ್ಲಾ ಸರ್ಕಾರಿ ಆಸ್ಪತ್ರೆ, ಖಾಸಗಿ ಆಸ್ಪತ್ರೆಗಳು ಭಾಗವಹಿಸಿವೆ. ರಾಜ್ಯದ ವಿವಿಧೆಡೆಯಿಂದ ಚಿಕಿತ್ಸೆ ಮಳಿಗೆಗಳನ್ನು ಸ್ಥಾಪಿಸಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಶಿಕ್ಷಣ ಆರೋಗ್ಯ ಕ್ಷೇತ್ರಕ್ಕೆ ಸರ್ಕಾರ ಹೆಚ್ಚು ಒತ್ತು ನೀಡುತ್ತಿದೆ. ಜನರಿಗೆ ಖಾಸಗಿ ಆಸ್ಪತ್ರೆಗಳ ಮಾದರಿಯಲ್ಲಿ ವೈದ್ಯಕೀಯ ಸೇವೆ ಒದಗಿಸುವ ನಿಟ್ಟಿನಲ್ಲಿ ಆರೋಗ್ಯ ಮೇಳ ಆಯೋಜನೆ ಮಾಡಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಅವರು ತಿಳಿಸಿದರು. ರಾಷ್ಟ್ರೀಯ ಆರೋಗ್ಯ ಅಭಿಯಾನ, ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವೈದ್ಯಕೀಯ ವಿಜ್ಞಾನ ಸಂಸ್ಥೆ ಬೆಳಗಾವಿ, ವಿವಿಧ ಸಂಘ ಸಂಸ್ಥೆಗಳು, ವಿವಿಧ ಆಸ್ಪತ್ರೆಗಳು ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಸವದತ್ತಿ ತಾಲೂಕು ಕ್ರೀಡಾಂಗಣದಲ್ಲಿ ರವಿವಾರ (ಮಾ.23) ನಡೆದ ಬೃಹತ್ ಆರೋಗ್ಯ ಮೇಳ-2025ರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಜಿಲ್ಲೆಯಲ್ಲಿ ಇಂತಹ ಆರೋಗ್ಯ ಮೇಳ ಈ ಹಿಂದೆ ಆಯೋಜನೆ ಮಾಡಿರಲಿಲ್ಲ. ಸವದತ್ತಿ ಭಾಗದ ಜನರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಮೇಳ ಹಮ್ಮಿಕೊಳ್ಳಲಾಗಿದೆ. ನಮ್ಮ ನೀರೀಕ್ಷೆಗಿಂತಲೂ ಹೆಚ್ಚು ಜನರು ಆರೋಗ್ಯ ಮೇಳದಲ್ಲಿ ಪಾಲ್ಗೊಂಡಿದ್ದಾರೆ ಎಂದರು.ಸವದತ್ತಿಯಲ್ಲಿ ಬಹಳ ಯಶಸ್ವಿಯಾಗಿ ಆರೋಗ್ಯ ಮೇಳ ನಡೆಯುತ್ತಿದೆ. ತಮ್ಮ ಆರೋಗ್ಯದ ಸಮಸ್ಯೆಗೆ ಚಿಕಿತ್ಸೆ ಪಡೆದುಕೊಳ್ಳಲು ಬಹಳಷ್ಟು ದೂರದಿಂದ ಸಾರ್ವಜನಿಕರು ಆಗಮಿಸುತ್ತಿದ್ದಾರೆ. ಅಧಿಕಾರಿಗಳ ಪರಿಶ್ರಮದಿಂದ ಆರೋಗ್ಯ ಮೇಳ ಯಶಸ್ವಿಗೊಳಿಸಿದ್ದಾರೆ. ಚಿಕಿತ್ಸೆ ಒದಗಿಸಲು ಜಿಲ್ಲೆಯ ಎಲ್ಲಾ ಸರ್ಕಾರಿ ಆಸ್ಪತ್ರೆಯ ವೈದ್ಯರು, ಖಾಸಗಿ ಆಸ್ಪತ್ರೆಗಳು ಬಂದಿವೆ. ಅನೇಕ ರೋಗಗಳಿಗೆ ರೋಗದ ಕಾರಣ ಗೊತ್ತಿರುವುದಿಲ್ಲ. ತಮ್ಮ ಕಾಯಿಲೆಗಳಿಗೆ ನಿರ್ಲಕ್ಷ್ಯ ತೋರಿಸಬಾರದು. ಸಕ್ಕರೆ ಕಾಯಿಲೆ, ರಕ್ತದೊತ್ತಡ ಪರೀಕ್ಷೆಗಳನ್ನು ಮಾಡಿಸಿ ನಿಯಂತ್ರಣಕ್ಕೆ ತರುವ ಮೂಲಕ ಜೀವನ ಶೈಲಿ ಬದಲಾಯಿಸಿ ಆರೋಗ್ಯಯುತ ಜೀವನ ನಡೆಸಬೇಕು ಎಂದು ತಿಳಿಸಿದರು.ಆರೋಗ್ಯಯುತ ಜೀವನ ನಡೆಸಲು ದಿನನಿತ್ಯ ವ್ಯಾಯಮ ಉತ್ತಮ ಆಹಾರ ಪದ್ಧತಿ ಅಳವಡಿಸಿಕೊಳ್ಳಬೇಕು. ಸರ್ಕಾರದ ಇನ್ನೂ ಅನೇಕ ಆರೋಗ್ಯ ಸೇವೆಗಳು ಸಾರ್ವಜನಿಕರಿಗೆ ಉಚಿತವಾಗಿ ಒದಗಿಸಲಾಗುವುದು. ಸರ್ಕಾರದಿಂದ ಖಾಸಗಿ ಮಾದರಿಯಲ್ಲಿ ಉಚಿತ ಆರೋಗ್ಯ ಸೇವೆ ಒದಗಿಸಲು ಸರ್ಕಾರ ನಿರಂತರ ಶ್ರಮಿಸುತ್ತಿದೆ.ಸವದತ್ತಿಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ:ಸುಮಾರು 46 ಕೋಟಿ ವೆಚ್ಚದಲ್ಲಿ ಸವದತ್ತಿಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಲಾಗುವುದು. ಅದೇ ರೀತಿಯಲ್ಲಿ ರಾಮದುರ್ಗ, ಕಿತ್ತೂರು ತಾಲೂಕುಗಳಲ್ಲಿ ಸಹ ನೂತನ ಸುಸಜ್ಜಿತ ಆಸ್ಪತ್ರೆ ನಿರ್ಮಾಣಕ್ಕೆ ಕ್ರಮ ವಹಿಸಲಾಗಿದೆ ಎಂದು ಸಚಿವ ಗುಂಡೂರಾವ್ ತಿಳಿಸಿದರು.ಖಾನಾಪೂರ ತಾಲೂಕಿನ ಈಗಾಗಲೇ ತಾಯಿ ಮಕ್ಕಳ ಆಸ್ಪತ್ರೆ ಹಾಗೂ ನೂತನ ಜಿಲ್ಲಾ ಆಸ್ಪತ್ರೆ ಉದ್ಘಾಟನೆ ಮಾಡಲಾಗಿದೆ. ಇನ್ನೂ ಗೋಕಾಕಿನಲ್ಲಿ ಜಿಲ್ಲಾ ಆಸ್ಪತ್ರೆ ಮಾದರಿಯ ಆಸ್ಪತ್ರೆ ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು.ಜಿಲ್ಲೆಯಲ್ಲಿ ಅಂಧತ್ವ ನಿವಾರಣಾ 38 ಸಾವಿರ ರೋಗಿಗಳಿಗೆ ನೇತ್ರ ಚಿಕಿತ್ಸ ಮಾಡಲಾಗಿದೆ. ಬರುವ ದಿನಗಳಲ್ಲಿ ಗೃಹ ಆರೋಗ್ಯ ಯೋಜನೆಯಡಿ ಪ್ರತಿ ಕುಟುಂಬ, ಪ್ರತಿ ವ್ಯಕ್ತಿಯ ತಪಾಸಣೆ ಕಾರ್ಯಕ್ರಮ ಹಮ್ಮಿಕೊಂಡು ಮನೆಗಳಿಗೆ ಓಷಧಿಗಳನ್ನು ಒದಗಿಸಲು ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ಸವದತ್ತಿ ಭಾಗದ ವಿಶೇಷ ಅಭಿವೃದ್ಧಿ ಅನುದಾನ ಬಿಡುಗಡೆ:ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಮಾತನಾಡಿ ಸವದತ್ತಿಯಲ್ಲಿ ಇದು ಐತಿಹಾಸಿಕ ಕಾರ್ಯಕ್ರಮವಾಗಿದೆ. ಈ ಹಿಂದೆ ಎಂದಿಗೂ ಇಷ್ಟು ದೊಡ್ಡ ಕಾರ್ಯಕ್ರಮವಾದ ಉದಾಹರಣೆಯಿಲ್ಲ. ಈ ಭಾಗದ ಶಾಸಕರ ಹಿತ ಶಕ್ತಿಯಿಂದ ಈ ಬಜೆಟ್ ನಲ್ಲಿ ನೂತನ ಸಾರ್ವಜನಿಕರ ಆಸ್ಪತ್ರೆ ಕಟ್ಟಣ ನಿರ್ಮಾಣಕ್ಕೆ ಈಗಾಗಲೇ ಅನುದಾನ ನೀಡಲಾಗಿದೆ ಎಂದರು.ಬಡವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಬೃಹತ್ ಆರೋಗ್ಯ ಮೇಳ ಆಯೋಜನೆ ಮಾಡಲಾಗಿದೆ. ವೈದ್ಯರ ಸಲಹೆಯಂತೆ ಸಾರ್ವಜನಿಕರು ಚಿಕಿತ್ಸೆ ಪಡೆದುಕೊಳ್ಳಬೇಕು. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದಲ್ಲಿ ಸ್ಥಳೀಯ ಆಸ್ಪತ್ರೆಗೆ ಕಳುಹಿಸಲಾಗುವುದು.ಈ ಭಾಗದ ಅಭಿವೃಧ್ದಿ ಕಾಮಗಾರಿಗಳನ್ನು ಹಮ್ಮಿಕೊಳ್ಳುವ ಮೂಲಕ ಸರ್ಕಾರ ದಾಪುಗಾಲು ಹಾಕುತ್ತಿದೆ. ಸವದತ್ತಿಯ ಭಾಗದ ಅಭಿವೃದ್ಧಿಗೆ 200 ಕೋಟಿ ಅನುದಾನ ಸರ್ಕಾರದಿಂದ ಒದಗಿಲಾಗುತ್ತಿದೆ ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದರು.ಐತಿಹಾಸಿಕ ಆರೋಗ್ಯ ಮೇಳ; ಹೆಚ್ಚಿನ ಪ್ರಮಾಣದಲ್ಲಿ ನೋಂದಣಿ:ತಾಲ್ಲೂಕಿನಲ್ಲಿ ಮೊದಲ ಬಾರಿ ಆಯೋಜನೆ ಮಾಡಿದ ಐತಿಹಾಸಿಕ ಕಾರ್ಯಕ್ರಮ ಇದಾಗಿದೆ. ಸುಮಾರು 8 ಸಾವಿರಕ್ಕೂ ಅಧಿಕ ರೋಗಿಗಳು ಆರೋಗ್ಯ ಮೇಳದಲ್ಲಿ ಚಿಕಿತ್ಸೆಗೆ ನೋಂದಣಿ ಮಾಡಿಕೊಂಡಿದ್ದಾರೆ ಎಂದು ಸವದತ್ತಿ ಯಲ್ಲಮ್ಮ ವಿಧಾನಸಭಾ ಕ್ಷೇತ್ರದ ಶಾಸಕ ವಿಶ್ವಾಸ್ ವೈದ್ಯ ಹೇಳಿದರು.ಬಡವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸವದತ್ತಿಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಈಗಾಗಲೇ ಆರೋಗ್ಯ ಸಚಿವರೊಂದಿಗೆ ಮಾತನಾಡಲಾಗಿದೆ. ನೂತನ ಸಾರ್ವಜನಿಕರ ಆಸ್ಪತ್ರೆ ಕಟ್ಟಡಕ್ಕೆ ಅನುದಾನ ಒದಗಿಸಲಾಗುವುದು ಎಂದು ಭವರಸೆ ಕೊಟ್ಟಿದ್ದರು, ಅದರಂತೆ ಕಳೆದ ಬಜೆಟ್ ನಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ಅನುದಾನ ಒದಗಿಸಿದ್ದಾರೆ. ಇದೇ ರೀತಿಯಲ್ಲಿ ಮುನ್ನೊಳ್ಳಿ ಕೂಡ 25 ಗ್ರಾಮಗಳು ಹಾಗೂ 40 ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಪಟ್ಟಣವಾಗಿದೆ. ಹಾಗಾಗಿ ಸಾರ್ವಜನಿಕರ ಆರೋಗ್ಯದ ಹಿತ ದೃಷ್ಟಿಯಿಂದ ಮುನ್ನೊಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೆರಿಸಬೇಕು ಎಂದು ಆರೋಗ್ಯ ಸಚಿವರಲ್ಲಿ ಮನವಿ ಮಾಡಿಕೊಂಡರು.ಶಾಲಾ ಕಟ್ಟಡ, ರಸ್ತೆ ನಿರ್ಮಾಣ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಅಗತ್ಯ ಅನುದಾನ ಸವದತ್ತಿ ತಾಲೂಕಿಗೆ ಒದಗಿಸಿದ್ದಾರೆ. ಸುಮಾರು 300 ಕ್ಕೂ ಅಧಿಕ ವೈದ್ಯರು ಆರೋಗ್ಯ ಮೇಳದಲ್ಲಿ ಚಿಕಿತ್ಸೆ ಒದಗಿಸುತ್ತಿದ್ದಾರೆ ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.ಆರೋಗ್ಯ ಇಲಾಖೆ ಸೌಲಭ್ಯಗಳು ಕೆಳ ವರ್ಗದ ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಆರೋಗ್ಯ ಮೇಳ ಆಯೋಜನೆ ಮಾಡಲಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕಿತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಬಾಬಾಸಾಹೇಬ್ ಪಾಟೀಲ ತಿಳಿಸಿದರು.ಟಿಬಿ ಮುಕ್ತ ಗ್ರಾಮ- ಪಂಚಾಯತ ಅಧ್ಯಕ್ಷರುಗಳಿಗೆ ಸನ್ಮಾನ:2024 ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಒಟ್ಟು 172 ಗ್ರಾಮ ಪಂಚಾಯತಿಗಳು ಟಿಬಿ ಮುಕ್ತ ಗ್ರಾಮ ಪಂಚಾಯತಿಗಳೆಂದು ಪ್ರಶಸ್ತಿಗೆ ಬಾಜನವಾಗಿದ್ದು, ಅವುಗಳಲ್ಲಿ ಸವದತ್ತಿ ತಾಲೂಕಾ ವ್ಯಾಪ್ತಿಯ 11 ಬಿಬಿ ಮುಕ್ತ ಗ್ರಾಮ ಪಂಚಾಯತಿಗಳ ಅಧ್ಯಕ್ಷರುಗಳನ್ನು ಸಾಂಕೇತಿಕವಾಗಿ ಸನ್ಮಾನಿಸಲಾಯಿತು. ಅದೇ ರೀತಿಯಲ್ಲಿ ವಿಶ್ವ ಕ್ಷಯರೋಗ ದಿನಾಚರಣೆ ಅಂಗವಾಗಿ ಸವದತ್ತಿ ತಾಲೂಕಿನ 300 ಫಲಾನುಭವಿಗಳಿಗೆ ಶ್ರೀಶಿವಯೋಗೀಶ್ವರ ಗ್ರಾಮೀಣ ಆಯುರ್ವೇದಿಕ ಮಹಾವಿದ್ಯಾಲಯ ಇಂಚಲ ಇವರಿಂದ ಆಯೂರಕ್ಷಾ ಕಿಟ್ ಹಾಗೂ ಸಾಂಕೇತಿಕವಾಗಿ ಆಯ್ದ 10 ಫಲಾನುಭವಿಗಳಿಗೆ ಆಶಾ ಕಾರ್ಯಕರ್ತೆಯರ ಮುಖಾಂತರ ಕಿಟ್ ವಿತರಣೆ ವಿತರಿಸಲಾಯಿತು.ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತರಾದ ಶಿವಕುಮಾರ ಕೆ. ಬಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಆಯ್. ಪಿ ಗಡಾದ, ಬೆಳಗಾವಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ನಿರ್ದೇಶಕ ಡಾ. ಅಶೋಕಕುಮಾರ ಶೆಟ್ಟಿ, ಅಪರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್.ಎಸ್. ಗಡೇದ, ಸವದತ್ತಿ ತಾಲೂಕಾ ಆರೋಗ್ಯಾಧಿಕಾರಿ ಡಾ. ಶ್ರೀಪಾದ ಸಬನೀಸ, ಸವದತ್ತಿ ತಹಶೀಲ್ದಾರ್ ಮಲ್ಲಿಕಾರ್ಜುನ್ ಹೆಗ್ಗನ್ನವರ, ಸವದತ್ತಿ ಯಲ್ಲಮ್ಮ ಪುರಸಭೆ ಅಧ್ಯಕ್ಷೆ ಚಿನ್ನವ್ವ ಹುಚ್ಚನ್ನವರ, ಸವದತ್ತಿ ಯಲ್ಲಮ್ಮ ಪುರಸಭೆ ಉಪಾಧ್ಯಕ್ಷರು, ಸದಸ್ಯರು, ಆರೋಗ್ಯ ಇಲಾಖೆಯ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು ಕಾರ್ಯಕ್ರದಲ್ಲಿ ಪಾಲ್ಗೊಂಡಿದ್ದರು. ಆರೋಗ್ಯ ಮೇಳದಲ್ಲಿ ಜಾಗೃತಿ ಮತ್ತು ಆರೋಗ್ಯ ಶಿಕ್ಷಣ, ರೋಗನಿರ್ಣಯ ಸೇವೆಗಳು, ಮೂಲಭೂತ ಆರೋಗ್ಯ ಸೇವೆಗಳು, ವ್ಯವಸ್ಥೆಯಿಂದ ರೋಗಿಗಳಿಗೆ, ರೋಗಗಳ ತಪಾಸಣೆ, ವಿಶೇಷ ಆರೋಗ್ಯ ಸೇವೆಗಳು, ವಿವಿಧ ಆರೋಗ್ಯ ಸೇವೆಗಳ ಮಳಿಗೆಗಳನ್ನು ತೆರೆಯಲಾಗಿತ್ತು.ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ ಸಾರ್ವಜನಿಕರು ಆರೋಗ್ಯ ಮೇಳದಲ್ಲಿ ತಪಾಸಣೆ ಮಾಡಿಕೊಂಡು, ಚಿಕಿತ್ಸೆ ಪಡೆದುಕೊಂಡರು.