ಹುಬ್ಬಳ್ಳಿ ಧಾರವಾಡ ಬೈಪಾಸ್ ರಸ್ತೆ ಅಗಲೀಕರಣ ಕಾಮಗಾರಿ ಪರೀಶೀಲಿನೆ
ಧಾರವಾಡ 14: ಕರ್ನಾಟಕ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗಳಾದ ಡಾ. ಶಾಲಿನಿ ರಜನೀಶ ಇಂದು ಬೆಳಿಗ್ಗೆ, ನರೇಂದ್ರ ಕ್ರಾಸ್ ದಿಂದ ಗಬ್ಬೂರ ವರೆಗಿನ ಬೈಪಾಸ್ ರಸ್ತೆ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ, ಪರೀಶೀಲಿಸಿದರು. ರಾಷ್ಷ್ರೀಯ ಹೆದ್ದಾರಿ 48 ರಲ್ಲಿ ಧಾರವಾಡದ ನರೇಂದ್ರ ಕ್ರಾಸ್ ದಿಂದ ಹುಬ್ಬಳ್ಳಿಯ ಗಬ್ಬೂರ ವರೆಗೆ ಬರುವ ಹುಬ್ಬಳ್ಳಿ ಧಾರವಾಡ ಬೈಪಾಸ್ ರಸ್ತೆ ಅಗಲೀಕರಣದ ಕಾಮಗಾರಿಗೆ ಮೊದಲ ಹಂತದಲ್ಲಿ ಅಗತ್ಯವಿರುವ ಭೂಮಿ ಸ್ವಾದೀನಪಡಿಸಿಕೊಂಡು ನೀಡಿದರೂ, ಗುತ್ತಿಗೆದಾರ ಕಾಮಗಾರಿ ವಿಳಂಬ ಮಾಡುತ್ತಿರುವುದು ಕಂಡುಬರುತ್ತಿದೆ. ಯಾವುದೇ ವಿಳಂಬವಿಲ್ಲದೆ ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ ಗುತ್ತಿಗೆದಾರರಿಗೆ ಮತ್ತು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಮುಂದಿನ 15 ದಿನಗಳಲ್ಲಿ ಬಾಕಿ ಇರುವ ಕಾಮಗಾರಿ ಪೂರ್ತಿಗೊಳಿಸಿ, ತಮಗೆ ದಾಖಲೆ ಸಲ್ಲಿಸುವಂತೆ ಮತ್ತು ಸಂಬಂಧಿಸಿದ ಅಧಿಕಾರಿಗಳು ನಿಗಾವಹಿಸಿ, ವರದಿ ನೀಡುವಂತೆ ಸೂಚಿಸಿದರು. ಕಾಮಗಾರಿ ಗುಣಮಟ್ಟದಾಗಿರಬೇಕು. ಕಳಪೆ ಕಾಮಗಾರಿ ಆಗಲು ಅವಕಾಶವಾಗದಂತೆ ಪ್ರತಿ ಹಂತದಲ್ಲಿ ಸಂಬಂಧಿಸಿದ ಅಧಿಕಾರಿಗಳು ಮೇಲುಸ್ತುವಾರಿ, ನೀಗಾ ವಹಿಸಬೇಕಾಗುತ್ತದೆ ಎಂದು ಅವರು ತಿಳಿಸಿದರು. ಗುತ್ತಿಗೆದಾರರು ಒಪ್ಪಂದದಂತೆ 2025 ರ ಡಿಸೆಂಬರ್ ದೊಳಗೆ ಈ ರಸ್ತೆ ಕಾಮಗಾರಿಯನ್ನು ಪೂರ್ಣವಾಗಿಸಿ, ಸಾರ್ವಜನಿಕರ ಸಂಚಾರಕ್ಕೆ ಷಟ್ಪಥದ ರಸ್ತೆಗಳನ್ನು ಮುಕ್ತವಾಗಿಸಬೇಕು. ಈ ನಿಟ್ಟಿನಲ್ಲಿ ಗುತ್ತಿಗೆದಾರ ಕಾಮಗಾರಿಯನ್ನು ನಿರಂತರವಾಗಿ ಕೈಗೊಂಡು ಆದಷ್ಟು ಬೇಗನೆ ಕಾಮಗಾರಿ ಮುಕ್ತಾಯಗೊಳಿಸಬೇಕು ಮತ್ತು ಸಾರ್ವಜನಿಕರ ಸಂಚಾರಕ್ಕೆ ಅನುಕೂಲ ಮಾಡಬೇಕು ಎಂದರು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಭೂಸ್ವಾದೀನ ಪ್ರಕ್ರಿಯೆಗಳಿಗೆ ಸಂಬಂಧಿಸಿದ ಕಡತಗಳನ್ನು ತಕ್ಷಣ ಕ್ಲಿಯರ್ ಮಾಡಬೇಕು. ಪ್ರಸ್ತಾವನೆಗಳಿಗೆ ಅನುಮೋದನೆ ನೀಡಿ, ಅಗತ್ಯ ಹಣ ಬಿಡುಗಡೆ ಮಾಡಬೇಕು ಎಂದು ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ ಅವರು ಅಧಿಕಾರಿಗಳಿಗೆ ಸೂಚಿಸಿದರು. ಕೆಲಗೇರಿ ಬಳಿಯ ರೈಲ್ವೆ ಮೇಲಸೇತುವೆ ಹತ್ತಿರ ಪರೀಶೀಲಿಸಿ, ಇಲ್ಲಿನ ಕಾಮಗಾರಿ ಬೇಗ ಪ್ರಾರಂಭಿಸಬೇಕು. ಸಾರ್ವಜನಿಕರ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ ಮಾಡಬೇಕು. ಸೇತುವೇ ಅಗಲೀಕರಣ ಕಾಮಗಾರಿ ಆದಷ್ಟು ಬೇಗ ಮಾಡಬೇಕು ಎಂದು ಸೂಚಿಸಿದರು. ನರೇಂದ್ರ ಟೋಲ್ ಪ್ಲಾಜಾ, ಕೆಲಗೇರಿ ರೈಲ್ವೆ ಮೇಲಸೇತುವೆ ಹತ್ತಿರ, ತಾರಿಹಾಳ ಸೇತುವೆ ಸೇರಿದಂತೆ ಬೈಪಾಸ್ ರಸ್ತೆಯುದ್ದಕ್ಕೂ ವಿವಿದೆಡೆಗಳಲ್ಲಿ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ ಕಾಮಗಾರಿಯನ್ನು ಪರೀಶೀಲಿಸಿದರು. ಜಿಲ್ಲಾಧಿಕಾರಿ ದಿವ್ಯ ಪ್ರಭು ಮಾತನಾಡಿ, ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ಬರುವ ಹುಬ್ಬಳ್ಳಿ ಧಾರವಾಡ ಬೈಪಾಸ್ ರಸ್ತೆಯನ್ನು ಅಗಲೀಕರಣ ಮಾಡಿ, ಆರು ಪಥದ ರಸ್ತೆ ಕಾಮಗಾರಿ ಮಾಡಲು ಧಾರವಾಡದ ನರೇಂದ್ರ ಕ್ರಾಸ್ ದಿಂದ ಹುಬ್ಬಳ್ಳಿ ಗಬ್ಬೂರ ವರೆಗಿನ 30 ಕೀ.ಮೀ. ರಸ್ತೆ ಗುರುತಿಸಲಾಗಿದೆ. ಇದಕ್ಕಾಗಿ ಅಗತ್ಯವಿರುವ ಭೂ ಸ್ವಾದೀನ ಪ್ರಕ್ರಿಯೆ ಕೈಗೊಳ್ಳಲಾಗುತ್ತಿದೆ. ಮೊದಲ ಹಂತವಾಗಿ 14.26 ಹೆಕ್ಟೇರ್ ಭೂಮಿಯನ್ನು ಸ್ವಾದೀನ ಪಡಿಸಿಕೊಳ್ಳಲಾಗಿದೆ. ಇದಕ್ಕೆ ಸಂಭಂದಿಸಿದ 98 ಕೋಟಿ ರೂ. ಭೂ ಪರಿಹಾರ ಸರಕಾರದಿಂದ ಬಿಡುಗಡೆ ಆಗಿದ್ದು, ಇದರಲ್ಲಿ ಸುಮಾರು 27 ಕೋಟಿ ರೂ.ಗಳ ಭೂ ಪರಿಹಾರವನ್ನು ಈಗಾಗಲೇ ರೈತರಿಗೆ, ಭೂಮಾಲಿಕರಿಗೆ ವಿತರಿಸಲಾಗಿದೆ. ಉಳಿದ ಪರಿಹಾರವನ್ನು ವಿತರಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ಹೇಳಿದರು. ಎರಡನೇಯ ಹಂತದಲ್ಲಿ 10 ಹೆಕ್ಟೇರ್ ಭೂ ಪ್ರದೇಶದ ಭೂಸ್ವಾದೀನ ಪ್ರಕ್ರಿಯೆಯು ಹಂತಿಮ ಹಂತದಲ್ಲಿದೆ. ಈಗಾಗಲೇ ಇದರ ಅನುಮೋದನೆಗಾಗಿ ಪ್ರಸ್ತಾವನೆಯನ್ನು ಎನ್.ಎಚ್.ಐ ದ ಕೇಂದ್ರ ಕಚೇರಿಯ ಮೇಲಾಧಿಕಾರಿಗಳಿಗೆ ಸಲ್ಲಿಸಲಾಗಿದೆ. ಅನುಮತಿ ಬಂದ ತಕ್ಷಣ ಕ್ರಮ ಜರುಗಿಸಲಾಗುವುದು. ಮತ್ತು ಮೂರನೇಯ ಹಂತದಲ್ಲಿ 14 ಹೆಕ್ಟರ್ ಭೂಮಿ ಭೂಸ್ವಾದೀನಕ್ಕೆ ಪ್ರಸ್ತಾವನೆಯನ್ನು ಸಿದ್ದಗೊಳಿಸಲಾಗಿದೆ ಎಂದು ಅವರು ತಿಳಿಸಿದರು. ಕಾಮಗಾರಿಯನ್ನು ಗುತ್ತಿಗೆದಾರ ಮಾರ್ಚ 2023 ರಿಂದ ಡಿಸೆಂಬರ್ 2025 ರೊಳಗೆ ಪೂರ್ತಿಗೊಳಿಸಿ ಕೊಡುವ ಒಪ್ಪಂದವಾಗಿದೆ. ಆದರೆ ಸಾರ್ವಜನಿಕರ ಸಂಚಾರದ ಹಿತದೃಷ್ಟಿಯಿಂದ ಕೊನೆಯ ದಿನಾಂಕಕ್ಕಿಂತ ಮುಂಚಿತವಾಗಿ ಕಾಮಗಾರಿ ಪೂರ್ಣಗೊಳಿಸಿ, ಸಂಚಾರಕ್ಕೆ ಮುಕ್ತಗೊಳಿಸಬೇಕು. ಗುತ್ತಿಗೆದಾರ ಕಾಮಗಾರಿ ಅನುಷ್ಠಾನದಲ್ಲಿ ನಿಧಾನಗತಿ ಅನುಸರಿಸುತ್ತಿದ್ದು, ಈಗಾಗಲೇ ಈ ಕುರಿತು ಎಚ್ಚರಿಕೆ ನೀಡಲಾಗಿದೆ ಮತ್ತು ಗುಣಮಟ್ಟದ ಕಾಮಗಾರಿ ನಿರ್ವಹಿಸಲು ನಿರಂತರ ನಿಗಾವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದರು. ರಾಷ್ಟ್ರೀಯ ಹೆದ್ದಾರಿ 48 ರ ವಿಶೇಷ ಭೂಸ್ವಾದೀನ ಅಧಿಕಾರಿ ದೇವರಾಜ ಆರ್. ಅವರು ಕಾಮಗಾರಿ, ಭೂಸ್ವಾಧಿನ ಪ್ರದೇಶಗಳ ಪ್ರಗತಿ ಬಗ್ಗೆ ಸ್ಥಳದಲ್ಲಿ ವಿವರಿಸಿದರು. ಈ ಭೇಟಿ ಸಂದರ್ಭದಲ್ಲಿ ಪೊಲೀಸ್ ಆಯುಕ್ತ ಎನ್.ಶಶಿಕುಮಾರ, ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಗೋಪಾಲ ಬ್ಯಾಕೋಡ್, ಉಪ ಪೊಲೀಸ್ ಆಯುಕ್ತ ಮಾನಿಂಗ ನಂದಗಾಂವಿ, ಭೂಸ್ವಾದೀನ ವಿಭಾಗದಯೋಜನಾನಿರ್ದೇಶಕ ಭುವನೇಶ್ ಕುಮಾರ, ಉಪವಿಭಾಗಾಧಿಕಾರಿ ಶಾಲಂ ಹುಸೇನ್, ಧಾರವಾಡ ತಹಶಿಲ್ದಾರ ಡಿ.ಎಚ್.ಹೂಗಾರ, ಗುತ್ತಿಗೆದಾರರು ಸೇರಿದಂತೆ ಇತರರು ಇದ್ದರು.