2015ರಿಂದಲೇ ಹನಿಟ್ರ್ಯಾಪ್ ಚಾಲ್ತಿಯಲ್ಲಿತ್ತು !

Honeytrap

ಬೆಂಗಳೂರು, ನ. 3ಶಾಸಕರು, ಜನಪ್ರತಿನಿಧಿಗಳು ಸಿಲುಕಿರುವ ಹನಿಟ್ರ್ಯಾಪ್ ಹೊಸದೇನಲ್ಲ. 2015ರಿಂದಲೇ ಹನಿಟ್ರ್ಯಾಪ್ ಸಕ್ರಿಯವಾಗಿತ್ತು ಎಂಬ ಅಂಶ ಬೆಳಕಿಗೆ ಬಂದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಈಗಾಗಲೇ ಬಂಧಿಸಲಾಗಿದ್ದು, ರಾಕೇಶ್ ನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. 

 ರಾಕೇಶ್ ಬಳಿ ಇದ್ದ ವಿಡಿಯೋವನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಅದು 2015ರಲ್ಲಿ ಸೆರೆ ಹಿಡಿದಿದ್ದ ಮೈಸೂರು ಭಾಗದ ಶಾಸಕರೊಬ್ಬರ ವಿಡಿಯೋ ಆಗಿದೆ ಎಂದು ತಿಳಿದು ಬಂದಿದೆ.   

ಸುಮಾರು 20ಕ್ಕೂ ಹೆಚ್ಚು ಜನರನ್ನು ರಾಘವೇಂದ್ರ ಮತ್ತು ಪುಷ್ಪಾ ತಂಡ ಹನಿಟ್ರ್ಯಾಪ್‌ಗೆ ಕೆಡವಿ, ಅವರಿಂದ ಲಕ್ಷದಿಂದ ಕೋಟ್ಯಾಂತರ ರೂ ವಸೂಲಿ ಮಾಡಿದೆ ಎಂದು ತಿಳಿದು ಬಂದಿದೆ. 

 ಶಾಸಕರೊಬ್ಬರ ವಿಡಿಯೋ ಚಿತ್ರೀಕರಿಸುವಾಗ ರೂಮಿನಲ್ಲಿ ಲೈಟ್ ಆಫ್ ಆಗಿದ್ದರಿಂದ ರೆಕಾರ್ಡ್ ಮಾಡಲು ಸಾಧ್ಯವಾಗಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. 

ಮೊದಲು ನಾಲ್ಕು ಜನರು ಸೇರಿ ಒಂದು ಕುಟುಂಬ ಎಂಬಂತೆ ತಮಗೆ ಸಮಸ್ಯೆ ಇದೆ ಎಂದು ನಾಲ್ಕು ಜನರ ಮುಂದೆ ಹೇಳುತ್ತಿದ್ದರು‌. ನಂತರ ಪುಷ್ಪಾ ಎಂಬ ಯುವತಿ ತುಂಬಾ ಸಮಸ್ಯೆ ಇದೆ ಎಂದು ಶಾಸಕರ ಬಳಿ ಹೇಳಿ ನಂತರ ಹಂತಹಂತವಾಗಿ ವಾಟ್ಸಾಪ್ ನಲ್ಲಿ ಮೆಸೇಜ್ ಹಾಗೂ ರಾತ್ರಿ ಸಮಯದಲ್ಲಿ ಕರೆ ಮಾಡಿ ಉದ್ರೇಕಗೊಳಿಸುವ ಮಾತನಾಡನ್ನಾಡಿ, ಅವರನ್ನು ಮರುಳು ಮಾಡುತ್ತಿದ್ದರು. ಎಲ್ಲವೂ ಈ ಯುವತಿಯ ಮೂಲಕವೇ ಹನಿಟ್ರ್ಯಾಪ್ ನಡೆಯುತ್ತಿತ್ತು ಎಂದು ತಿಳಿದು ಬಂದಿದೆ. 

ಈ ಯುವತಿ ತನ್ನ ದೇಹದ ಖಾಸಗಿ ಭಾಗದಲ್ಲಿ ತೆಗೆಸಿದ ಟ್ಯಾಟು ಚಿತ್ರವನ್ನು ಶಾಸಕರ ಮೊಬೈಲ್ ಗೆ ಕಳುಹಿಸಿ, ನಂತರ ಅವರು ನೋಡಿದ ತಕ್ಷಣ ಡಿಲೀಟ್ ಮಾಡುತ್ತಿದ್ದಳು ಎಂದು ತಿಳಿದು ಬಂದಿದೆ. 

ಶಾಸಕರನ್ನು ಕರೆ ಮಾಡಿ ಮಾತನಾಡುವ ಮೂಲಕ ಅವರ ಚಟಗಳನ್ನು ತಿಳಿದುಕೊಂಡು ಅವರನ್ನು ಬಲೆಗೆ ಬೀಳಿಸುತ್ತಿದ್ದಳಂತೆ. ನಂತರ ಅವರೊಂದಿಗೆ ದೈಹಿಕ ಸಂಪರ್ಕ ಬೆಳೆಸಿ, ವಿಡಿಯೋ ಮಾಡಿ ನಂತರ ಅವರಿಗೆ 50ಕೋಟಿ ರೂ ನೀಡುವಂತೆ ಬೇಡಿಕೆ ಈಡಲಾಗುತ್ತಿತ್ತು. ಅಷ್ಟು ದೊಡ್ಡ ಮೊತ್ತದ ಹಣವನ್ನು ಶಾಸಕರು ಕೊಡಲು ನಿರಾಕರಿಸಿದಾಗ, ಅದನ್ನು ಹಂತಹಂತವಾಗಿ ಕಡಿಮೆಗೊಳಿಸಲಾಗುತ್ತಿತ್ತು ಎಂದು ತಿಳಿದು ಬಂದಿದೆ.

ಪಂಚ ತಾರಾ ಹೊಟೇಲ್ ಅಲ್ಲದೇ, ವಿಧಾನ ಸೌಧದ ಶಾಸಕರ ಭವನದಲ್ಲಿಯೂ ಹನಿಟ್ರ್ಯಾಪ್ ಆಗಿದೆ ಎಂಬ ಅಂಶ ಬೆಳಕಿಗೆ ಬಂದಿದೆ‌. 

ಕೆಲವೊಂದು ಪ್ರಕರಣಗಳಲ್ಲಿ ಲಕ್ಷದಿಂದ 1ಕೋಟಿ ರೂ ವರೆಗೂ ಈ ತಂಡ ಹಣ ವಸೂಲಿ ಮಾಡಿದೆ ಎಂದು ತಿಳಿದು ಬಂದಿದೆ. 

ಇದೊಂದು ರಾಜಕೀಯ ಹನಿಟ್ರ್ಯಾಪ್ ಆಗಿದ್ದು, ಕೆಲವೊಮ್ಮೆ ಈ ತಂಡ ಎದುರಾಳಿ ಗುಂಪನಿಂದ ಸುಪಾರಿ ಪಡೆದು ಶಾಸಕರನ್ನು ಟ್ರ್ಯಾಪ್ ಮಾಡುತ್ತಿತ್ತು. ರಘು ಮತ್ತು ಪುಷ್ಪಾ ಇಲ್ಲಿ ಕೇವಲ ಆಟಗಾರರಾಗಿದ್ದು, ಇವರ ಹಿಂದೆ ಕೆಲ ಪ್ರಭಾವಿ ರಾಜಕೀಯ ಮುಖಂಡರಿದ್ದಾರೆ ಎನ್ನಲಾಗಿದೆ.

 

ಕೆಲ ಶಾಸಕರು ನಮ್ಮದೇನಾದರೂ ವಿಡಿಯೋ ಇದ್ದರೇ, ಡಿಲೀಟ್ ಮಾಡಿ ನಮಗೆ ಕೇಸು ಬೇಡ ವಿಚಾರಣೆಯೂ ಬೇಡ ಎಂದು ತನಿಖಾ ಅಧಿಕಾರಿಗೆ ಒತ್ತಡ ಹಾಕುತ್ತಿದ್ದಾರೆ ಎಂಬ ಅಂಶ ಬೆಳಕಿಗೆ ಬಂದಿದೆ.