ಹಾಲೋಕಳಿ ಆಚರಣೆ: ಪಾಂಡುರಂಗ ಹಾಗೂ ರುಕ್ಮಿಣಿ ಪಲ್ಲಕ್ಕಿ ಉತ್ಸವ
ಹನುಮಸಾಗರ 15: ಗ್ರಾಮದ ರುಕ್ಮಿಣಿ ಪಾಂಡುರಂಗ ದೇಗುಲದ ಜಾತ್ರೆಯ ನಿಮಿತ್ತವಾಗಿ ಶನಿವಾರ ಅವಭೃತ ಸ್ನಾನದ ಮೂಲಕ ಹಾಲೋಕಳಿಯನ್ನು ನೆರೆವೇರಿಸಲಾಯಿತು. ಪಾಂಡುರಂಗ ಹಾಗೂ ರುಕ್ಮಿಣಿ ದೇವರ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿರಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಒಬ್ಬರಿಗೊಬ್ಬರು ಬಣ್ಣ ಎರಚಾಡುತ್ತಾ ಮೆರವಣಿಗೆ ಕೈಗೊಳ್ಳಲಾಯಿತು. ಧಾರ್ಮಿಕ ಪದ್ಧತಿಯಂತೆ ನಾನಾ ಕಾಲೋನಿಗಳಲ್ಲಿ ದೇವರ ಪಲ್ಲಕ್ಕಿ ಆಗಮಿಸುವ ವೇಳೆಯಲ್ಲಿ ಹೆಂಗಳೆಯರು ಪಲ್ಲಕ್ಕಿಗೆ ನೀರು ಹಾಕಿ ಸ್ವಾಗತಿಸಿಕೊಂಡು ಉತ್ಸವ ಮೂರ್ತಿಗೆ ಆಯಾ ಕುಟುಂಬಗಳ ಸದಸ್ಯರು ಮಂಗಳಾರತಿ ಹಾಗೂ ನೈವೇದ್ಯ ನೀಡಿದರು. ಸಮಾಜದ ಮುಖಂಡರು, ಯುವಕರು, ವಿದ್ಯಾರ್ಥಿಗಳು ಈ ಅವಭೃತ ಸ್ನಾನದಲ್ಲಿ ಪಾಲ್ಗೊಂಡಿದ್ದರು.