ಹೋಳಿಹಬ್ಬ: ಮೃತಪಟ್ಟ ಮಕ್ಕಳ ಕುಟುಂಬಕ್ಕೆ ಶಾಸಕ ಹುಕ್ಕೇರಿ ಸಹಾಯಧನ
ಚಿಕ್ಕೋಡಿ: ತಾಲೂಕಿನ ಯಕ್ಸಂಬಾ ಪಟ್ಟಣದಲ್ಲಿ ಹೋಳಿ ಹಬ್ಬದ ದಿನದಂದು ಬಣ್ಣದಾಟ ಆಡಲು ನೀರು ತರಲು ಬಾವಿಗೆ ಹೋದಾಗ ಸಂಭವಿಸಿದ ದುರ್ಘಟನೆಯಲ್ಲಿ 9 ವರ್ಷದ ವೇದಾಂತ ಸಂಜೀವ ಹಿರೇಕೊಡಿ ಮತ್ತು 8 ವರ್ಷದ ಮನೋಜ ಕಾಶಿನಾಥ ಕಲ್ಯಾಣಿ ಎಂಬ ಬಾಲಕರು ಮೃತಪಟ್ಟ ಕುಟುಂಬದವರಿಗೆ ಶಾಸಕ ಗಣೇಶ ಹುಕ್ಕೇರಿ ಸಾಂತ್ವನ ಹೇಳಿ ಪರಿಹಾರ ಧನ ನೀಡಿದರು. ಶಾಸಕ ಗಣೇಶ ಹುಕ್ಕೇರಿ ಮಾತನಾಡಿ ಕುಟುಂಬದ ನೋವು ತಗ್ಗಿಸುವ ನಿಟ್ಟಿನಲ್ಲಿ, ತಮ್ಮ ಅನ್ನಪೂರ್ಣೇಶ್ವರಿ ಫೌಂಡೇಶನ್ ಮೂಲಕ ತಲಾ ?1 ಲಕ್ಷ ರೂ ಸಹಾಯಧನವನ್ನು ನೀಡಲಾಗಿದೆ. ಇಂತಹ ದುರ್ಘಟನೆಗಳು ಪುನರಾವೃತವಾಗದಂತೆ ಮುನ್ನೆಚ್ಚರಿಕೆ ವಹಿಸಲು ಎಲ್ಲರೂ ಜಾಗೃತರಾಗಬೇಕು. ಸಾರ್ವಜನಿಕ ಸ್ಥಳಗಳು ಮತ್ತು ಮಕ್ಕಳ ಆಟದ ಪ್ರದೇಶಗಳಲ್ಲಿ ಸೂಕ್ತ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯವಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಅಧ್ಯಕ್ಷ ಸುನೀಲ ಸಪ್ತಸಾಗರ, ಸುಭಾಷ ಕಲ್ಯಾಣಿ, ಅಂಕುಶ ಖೋತ , ರವೀಂದ್ರ ಮಾನೆ, ಜ್ಯೋತಿ ಸಾತ್ವಾರ, ಮಹಾಲಿಂಗ ವಸ್ತೃದ ಹಾಗೂ ಮುಂತಾದವರು ಉಪಸ್ಥಿತರಿದ್ದರು.