ಸುಗ್ಗಿ ಸಂಭ್ರಮ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಹೆಸ್ಕಾಂ ಅಧ್ಯಕ್ಷ ಖಾದ್ರಿ ಪಾಲಕರಿಗೆ ಬಹುಮಾನ ವಿತರಣೆ
ಶಿಗ್ಗಾವಿ 23 : ಇಂದಿನ ದಿನಮಾನಗಳಲ್ಲಿ ಟಿವಿ ಮತ್ತು ಮೊಬೈಲ್ ಹಾವಳಿಯಿಂದ ಗ್ರಾಮೀಣ ಕಲೆಗಳು ನಶಿಸಿ ಹೋಗುತ್ತಿದ್ದು, ಪಟ್ಟಣದ ಮಲ್ಲಪ್ಪ ಪುಟ್ಟಪ್ಪ ಮೊರಬದ ಶಿಕ್ಷಣ ಸಂಸ್ಥೆಯ ಸಂಸ್ಕೃತಿ ಪ್ರಾಥಮಿಕ ಶಾಲೆ ಸುಗ್ಗಿ ಸಂಭ್ರಮ ಆಚರಿಸುವ ಮೂಲಕ ಮಕ್ಕಳಿಗೆ ಗತವೈಭವದ ಆಚರಣೆಗಳನ್ನು ಪರಿಚಯಿಸಲು ಮಾಡುತ್ತಿರುವ ವಿನೂತನ ಪ್ರಯತ್ನ ಶ್ರೇಷ್ಟವಾದ ಕಾರ್ಯಕ್ರಮ ಎಂದು ಹೆಸ್ಕಾಂ ಅಧ್ಯಕ್ಷ ಸೈಯದ್ ಅಜ್ಜಂಪೀರ ಎಸ್. ಖಾದ್ರಿ ಹೇಳಿದರು. ಪಟ್ಟಣದ ಎಂ.ಪಿ.ಎಂ ಸಂಸ್ಕೃತಿ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾಗಿದ್ದ ಸುಗ್ಗಿ ಸಂಭ್ರಮ ಸಾಂಸ್ಕೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಹಿರಿಯರು ಬದುಕುವ ರೀತಿಯೇ ಸಂಭ್ರಮದಿಂದ ಕೂಡಿದ್ದಾಗಿದ್ದು, ಅವರ ಉತ್ತಮವಾದ ಜೀವನ ಶೈಲಿ ನಮ್ಮ ಉತ್ತಮ ಬದುಕಿಗೆ ಮಾರ್ಗಸೂಚಿಗಳಾಗಿದ್ದು ನಮ್ಮ ವಿದ್ಯಾರ್ಥಿಗಳಲ್ಲಿ ಬದಲಾವಣೆ ಬೇಕಾಗಿದೆ. ಮಹಾಸ್ವಾಮಿಗಳು, ರಾಜಕಾರಣಿಗಳು ಬಂದರೆ ಜನ ಸೇರುವ ಕಾಲ ಮುಗಿದಿದೆ, ವಿದ್ಯಾವಂತರನ್ನು ತಿರುಗಿ ನೋಡುವ ಕಾಲ ಬಂದಿದೆ. ಪಾಲಕರು ದೈನಂದಿನ ಜೀವನದ ಬೇಡಿಕೆಗಳನ್ನು ಕಡಿತ ಮಾಡಿಕೊಂಡು, ಮಕ್ಕಳಿಗೆ ಉತ್ತಮವಾದ ಶಿಕ್ಷಣವನ್ನು ಕೊಟ್ಟು ಅವರು ರಾಜ್ಯಕ್ಕಾಗಿ, ದೇಶಕ್ಕಾಗಿ ದುಡಿಯುವಂತಾಗಬೇಕು. ಬಡವರಿಗಾಗಿ ಬಡವರಿಂದ ಕಟ್ಟಿದ ಶಾಲೆಗಳು ರಾಜ್ಯದಲ್ಲಿಯೇ ಅತ್ಯುತ್ತಮ ಶಾಲೆಗಳಾಗಿ ಬೆಳೆಯಬೇಕೆಂದರೆ ಪಾಲಕರು, ವಿದ್ಯಾರ್ಥಿಗಳು ಶಾಲೆಗಳಿಗೆ ಆಧಾರವಾಗಿ ನಿಲ್ಲಬೇಕು ಎಂದರು.ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಬಿ. ಅಂಬಿಗೇರ ಮಾತನಾಡಿ, ಮಕ್ಕಳಿಗೆ ಅತ್ಯೂತ್ತಮ ಸಂಸ್ಕಾರವನ್ನು ಕೊಡುವ ಕೆಲಸ ಮನೆಯಿಂದಲೆ ಪ್ರಾರಂಭವಾಗಿ, ಶಾಲೆಗಳಲ್ಲಿ ಅವುಗಳನ್ನು ಬೆಳಸುವ ಕಾರ್ಯಗಳು ಆಗಬೇಕು. ಮಕ್ಕಳು ಓದುವಾಗ ಪಾಲಕರು ಟಿವಿ, ಮೊಬೈಲ್ಗಳನ್ನು ಬಳಸದೇ ಅವರೊಂದಿಗೆ ಜೊತೆಯಾಗಬೇಕು. ಇತ್ತೀಚಿನ ದಿನಗಳಲ್ಲಿ ತಂದೆಯಂದಿರು ತಮ್ಮ ದೈನಂದಿನ ವ್ಯವಹಾರ, ವೃತ್ತಿಗಳ ಹೊರೆಯಿಂದ ಮಕ್ಕಳ ಕಲಿಕೆಯಲ್ಲಿ ಆಸಕ್ತಿ ಕಳೆದುಕೊಳ್ಳುತ್ತಿರುವುದು ಕಂಡುಬರುತ್ತಿದ್ದು, ಮಕ್ಕಳ ಕಲಿಕೆಯಲ್ಲಿ ಶಿಕ್ಷಕರು, ತಾಯಂದಿರ ಪಾತ್ರದಷ್ಟೇ ಮಹತ್ವವನ್ನು ತಂದೆಯಂದಿರ ಪಾತ್ರ ಅವಶ್ಯಕವಿದೆ. ಹುಟ್ಟಿದ ಮಕ್ಕಳೆಲ್ಲರೂ ಬುದ್ಧಿವಂತರೇ ಆಗಿದ್ದು ಅವರನ್ನು ಸರಿಯಾದ ರೀತಿಯಲ್ಲಿ ಬೆಳಸಿ ಅವರಲ್ಲಿನ ವೈಶಿಷ್ಟತೆಗಳನ್ನು ಗುತಿಸಿ ಬೆಳಗಿಸುವ ಕಾರ್ಯಗಳನ್ನು ಶಿಕ್ಷರು ಮಾಡಬೇಕು ಎಂದರು. ಕಾರ್ಯಕ್ರಮದಲ್ಲಿ ವಿರಕ್ತಮಠದ ಸಂಗನಬಸವ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. ಸಂಸ್ಥೆಯ ಅಧ್ಯಕ್ಷ ಮಂಜುನಾಥ ಮೊರಬದ, ಸಂಸ್ಥಾಪಕ ಕಾರ್ಯದರ್ಶಿ ದೇವರಾಜ ಸುಣಗಾರ, ಸಂಸ್ಥಾಪಕ ಸದಸ್ಯ ರಮೇಶ ಭಾವಿ, ಮುಖಂಡರುಗಳಾದ ಸಂತೋಶ ಮೊರಬದ, ಮಂಜುಣಾಥ ಬ್ಯಾಹಟ್ಟಿ, ಅಣ್ಣಪ್ಪಾ ನಡಟ್ಟಿ, ಅಣ್ಣಪ್ಪಾ ಲಮಾಣಿ, ಶಶಿಕಾಂತ ರಾಠೋಡ, ಬೀರೇಶ ಜಟ್ಟೆಪ್ಪನವರ, ರವಿ ಕೋಣನವರ, ಅನ್ವರ, ವಿನಯ, ಮಾಲತೇಶ ಮೊರಬದ, ಮುಖ್ಯೋಪಾಧ್ಯಾಯಿನಿ ಅನಿತಾ ಹಿರೇಮಠ ಇತರರಿದ್ದರು.