ಭುವನೇಶ್ವರ್, ಏ 10 ಅದ್ಭುತ ಪ್ರದರ್ಶನ ತೋರಿದ ಗೋವಾ ಫುಟ್ಬಾಲ್ ಕ್ಲಬ್ ತಂಡ, 2018-19ನೇ ಸಾಲಿನ ಐ-ಲೀಗ್ ಚಾಂಪಿಯನ್ ಚೆನ್ನೈ ಸಿಟಿ ವಿರುದ್ಧ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಗೆದ್ದು ಹಿರೋ ಸೂಪರ್ ಕಪ್ ಫೈನಲ್ ತಲುಪಿತು.
ಇಲ್ಲಿನ ಕಳಿಂಗಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಪಾರಮ್ಯ ಮೆರೆದ ಗೋವಾ ಎಫ್ಸಿ ತಂಡ ಚೆನ್ನೈ ಸಿಟಿ ವಿರುದ್ಧ 3-0 ಅಂತರದಲ್ಲಿ ಗೆಲುವು ಸಾಧಿಸಿ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿದೆ. ಇಂದು ಎಟಿಕೆ ಮತ್ತು ಚೆನ್ನೈಯಿನ್ ಎಫ್ಸಿ ವಿರುದ್ಧ ಎರಡನೇ ಸೆಮಿಫೈನಲ್ ಪಂದ್ಯ ನಡೆಯಲಿದ್ದು, ಇದರಲ್ಲಿ ವಿಜೇತ ತಂಡದ ವಿರುದ್ಧ ಗೋವಾ ಫೈನಲ್ ಪಂದ್ಯದಲ್ಲಿ ಸೆಣಸಲಿದೆ.
ಪಂದ್ಯದ ಆರಂಭದಲ್ಲೇ ಚೆಂಡಿನ ಮೇಲೆ ನಿಯಂತ್ರಣ ಸಾಧಿಸಿದ ಗೋವಾ ಬಹುಬೇಗ ಮುನ್ನಡೆ ಪಡೆಯಿತು. 26ನೇ ನಿಮಿಷದಲ್ಲಿ ಫೆರರ್ಾನ್ ಕೊರೊಮಿನಾಸ್ ಅವರು ಪೆನಾಲ್ಟಿಯಲ್ಲಿ ಗೋವಾ ಎಫ್ಸಿಗೆ ಗೋಲಿನ ಖಾತೆ ತೆರೆದರು. ಇದಾದ 9 ನಿಮಿಷಗಳ ಅಂತರದಲ್ಲಿ ಸ್ಪಾನಿಷ್ ಆಟಗಾರ ಮತ್ತೊಮ್ಮೆ ಚೆಂಡನ್ನು ಗೋಲು ಪಟ್ಟಿಗೆ ಕಳುಹಿಸಿದರು. ಇದರೊಂದಿಗೆ ಮೊದಲ ಅವಧಿ ಮುಕ್ತಾಯಕ್ಕೆ ಗೋವಾ ಎಫ್ಸಿ 2-0 ಮುನ್ನಡೆ ಪಡೆಯಿತು.
ಬಳಿಕ, ತೀವ್ರ ಒತ್ತಡದಲ್ಲಿ ಎರಡನೇ ಅವಧಿಗೆ ಕಣಕ್ಕೆ ಚೆನ್ನೈ ಸಿಟಿ ಭಾರಿ ಪೈಪೋಟಿ ನೀಡಿತು. ಆದರೆ, ಗೋಲು ಗಳಿಸಲು ಗೋವಾ ತಂಡದ ರಕ್ಷಣಾ ಕೋಟೆ ಅವಕಾಶ ನೀಡಲಿಲ್ಲ. 69ನೇ ನಿಮಿಷದಲ್ಲಿ ಬ್ರೆಂಡನ್ ಫೆನರ್ಾಂಡ್ಸ್ ಅವರು ಗೋವಾ ಎಫ್ಸಿಗೆ ಮೂರನೇ ಗೋಲು ತಂದುಕೊಟ್ಟರು. ಇದರೊಂದಿಗೆ ಫುಟ್ಬಾಲ್ ಕ್ಲಬ್ ಗೋವಾ ಪಂದ್ಯದ ನಿಗದಿತ ಸಮಯದ ಮುಕ್ತಾಯಕ್ಕೆ 3-0 ಅಂತರದಲ್ಲಿ ಚೆನ್ನೈ ಸಿಟಿ ವಿರುದ್ಧ ಗೆದ್ದು ಬೀಗಿತು.
ಪಂದ್ಯದ ಬಳಿಕ ಮಾತನಾಡಿದ ಗೋವಾ ತಂಡದ ಫೆರರ್ಾನ್ ಕೊರೊಮಿನಾಸ್, " ಸ್ಟ್ರೈಕರ್ ಆದವರಿಗೆ ಗೋಲು ಗಳಿಸುವುದಷ್ಟೆ ಗುರಿಯಾಗಿರುತ್ತದೆ. ಈ ಪಂದ್ಯದಲ್ಲಿ ಹ್ಯಾಟ್ರಿಕ್ ಗೋಲು ಗಳಿಸುವ ಇಚ್ಛೆ ಹೊಂದಿದ್ದೆ. ಆದರೆ, ಯಾರೂ ಗೋಲು ಗಳಿಸಿದರು ಎಂಬುದು ಮುಖ್ಯವಲ್ಲ. ನಮ್ಮ ತಂಡ ಜಯ ಸಾಧಿಸಿರುವುದು ಮುಖ್ಯ. ತಂಡದ ಗೆಲುವಿಗೆ ನನ್ನ ಕಡೆಯಿಂದ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ" ಎಂದರು.