ಮುಂಬೈ, ಆಗಸ್ಟ್ 3 ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಶನಿವಾರ ಭಾರಿ ಮಳೆಯಿಂದಾಗಿ ಸಾಮಾನ್ಯ ಜೀವನ ಅಸ್ತವ್ಯಸ್ತಗೊಂಡಿದೆ.
ಮುಂದಿನ 24 ಗಂಟೆಗಳ ನಂತರವೂ ಮುಂಬೈ, ಉಪನಗರಗಳಲ್ಲಿ ಭಾರಿ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
ಹವಾಮಾನ ವಿಭಾಗದ ಉಪ ಮಹಾನಿರ್ದೇಶಕ ಕೆ.ಎಸ್.ಹೊಸಲಿಕರ್ ಅವರು, ಬಂಗಾಳಕೊಲ್ಲಿ ಪ್ರದೇಶದ ಮೇಲೆ ವಾಯುಭಾರ ಕುಸಿತದ ಕಾರಣ ಶನಿವಾರ ರಾತ್ರಿ ಮತ್ತು ಭಾನುವಾರ ತೀವ್ರ ಮಳೆಯಾಗುವ ಸಾಧ್ಯತೆಯಿದೆ ಎಂದು ಟ್ವೀಟ್ ಮಾಡಿದ್ದಾರೆ.
ವರದಿಯ ಪ್ರಕಾರ ಶನಿವಾರದಂದು ಭಾರಿ ಮಳೆಯಾಗುವ ಸೂಚನೆ ನೀಡಿದ್ದು ಅತಿ ಹೆಚ್ಚು 4.90 ಮೀಟರ್ ಎತ್ತರದ ಉಬ್ಬರವಿಳಿತ ಉಂಟಾಗಲಿದ್ದು, ಸಮುದ್ರದ ಬಳಿ ಹೋಗದಂತೆ ಜನರಿಗೆ ಮನವಿ ಮಾಡಲಾಗಿದೆ. ತುರ್ತ ಪರಿಸ್ಥಿತಿಯ ಸಮಯದಲ್ಲಿ ಜನರು 1916 ಸಂಖ್ಯೆಗೆ ಕರೆ ಮಾಡಬಹುದು ಎಂದೂ ಮುಂಬೈ ಮಹಾನಗರ ಪಾಲಿಕೆ ಟ್ವೀಟ್ ಮಾಡಿದೆ. ಮಳೆಯಿಂದ ಹಲವಡೆ ನೀರು ನಿಂತು ರಸ್ತೆ ಮತ್ತು ರೈಲುಗಳ ಸಂಚಾರಕ್ಕೂ ತೊಂದರೆಯಾಗಿದೆ.