ಬಾದಾಮಿ ಚಾಲುಕ್ಯ ಉತ್ಸವಕ್ಕೆ ತರಾತುರಿ ನಿರ್ಧಾರ? ಜಿಲ್ಲಾ ಮಟ್ಟದ ಅಧಿಕಾರಿಗಳ ಜತೆ ಸಭೆ ನಡೆಸಿ ದಿನಾಂಕ ಪ್ರಕಟಣೆ ಕುತೂಹಲಕ್ಕೆ ಕಾರಣ
*ರಾಷ್ಟ್ರೀಯ ಉತ್ಸವಕ್ಕೆ ಆತುರದ ನಿರ್ಧಾರ
* ಇಷ್ಟೊಂದು ತುರ್ತಾಗಿ ಬಾದಾಮಿಗೆ ಬರ್ತಾರಾ ಖ್ಯಾತನಮರು
*ಇನ್ನೂ ಸಿಎಂ ಸಿದ್ದರಾಮಯ್ಯ ಗ್ರೀನ್ ಸಿಗ್ನಲ್ ಸಿಗುತ್ತಾ
ಅಬೂಬಕರ್ ಯಡಹಳ್ಳಿ
ಕೆರೂರ: ಚಾಲುಕ್ಯರ ಗತ ವೈಭವ ಸ್ಮರಿಸುವ ಜತೆಗೆ ಪ್ರವಾಸೋದ್ಯಮ ಅಭಿವೃದ್ಧಿಗೆ ಪ್ರೋತ್ಸಾಹ ನೀಡುವ ಮಹೋನ್ನತ ಉದ್ದೇಶದಿಂದ ಆರಂಭಿಸಲಾಗಿದ್ದ ಬಾದಾಮಿ ಚಾಲುಕ್ಯ ಉತ್ಸವ ಆಚರಣೆ ನಿಂತು ದಶಕವೇ ಕಳೆದಿದೆ. ಪ್ರತಿ ವರ್ಷವೂ ಚಾಲುಕ್ಯ ಉತ್ಸವ ಆಚರಣೆಗೆ ಸಾರ್ವಜನಿಕ ವಲಯದಿಂದ ಸಾಕಷ್ಟು ಒತ್ತಡ ಕೇಳಿ ಬಂದರೂ ಸರ್ಕಾರ ಮಾತ್ರ ಆ ಬಗೆಗೆ ಕಿಂಚಿತ್ ಗಮನ ಹರಿಸಿಲ್ಲ. ಜಿಲ್ಲೆಯ ಜನಪ್ರತಿನಿಧಿಗಳೂ ಅದೆಕೋ ಏನೋ ಎಳ್ಳಷ್ಟೂ ಕಾಳಜಿ ವಹಿಸದೇ ಅಸಡ್ಡೆತನ ಮಾಡುತ್ತ ಬಂದಿದ್ದಾರೆ. ಏತನ್ಮಧ್ಯೆ ಬಾದಾಮಿ ಶಾಸಕ ಭೀಮಸೇನ್ ಚಿಮ್ಮನಕಟ್ಟಿ ಅವರು ಬಾದಾಮಿಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಜತೆ ಸಭೆ ನಡೆಸಿ ಮೂರು ದಿನಗಳ ಚಾಲುಕ್ಯ ಉತ್ಸವ ಆಚರಣೆಗೆ ದಿನಾಂಕ ಕೂಡ ಪ್ರಕಟಿಸಿರುವುದು ಹಲವು ಅಚ್ಚರಿಗಳಿಗೆ ಕಾರಣವಾಗಿದೆ.
ಚಾಲುಕ್ಯ ಉತ್ಸವ ರಾಷ್ಟ್ರೀಯ ಹಬ್ಬವಾಗಿ ಆರಂಭಗೊಂಡು ಕ್ರಮೇಣ ಜಿಲ್ಲಾ ಉತ್ಸವದಂತಾಗಿದೆ. ಅಷ್ಟೆ ಅಲ್ಲ ಕಳೆದ ಹತ್ತು ವರ್ಷಗಳಿಂದ ಉತ್ಸವ ನಿಂತೆ ಹೋಗಿದೆ.ಉತ್ಸವ ನಡೆಯಲು ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆ ಯಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆದು, ಆ ಮೂಲಕ ಸರ್ಕಾರಕ್ಕೆ ಉತ್ಸವ ಆಚರಣೆಗೆ ಅನುಮತಿ ಪಡೆದುಕೊಳ್ಳಬೇಕು. ಸರ್ಕಾರದ ಅನುಮತಿ ಸಿಕ್ಕ ಬಳಿಕವೇ ಉತ್ಸವ ಆಚರಣೆಗೆ ದಿನಾಂಕ ನಿಗದಿ ಆಗಬೇಕು. ಆದರೆ ಬಾದಾಮಿ ಶಾಸಕರು ಸೋಮವಾರ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಿದ್ದಾರೆ.
ಉತ್ಸವ ಆಚರಣೆ ಕುರಿತಂತೆ ಚಿಮ್ಮನಕಟ್ಟಿ ಅವರು ಉಸ್ತುವಾರಿ ಸಚಿವರ ಜತೆ ಚರ್ಚಿಸಿದ್ದಾರೋ ಇಲ್ಲವೋ ಎನ್ನುವ ಸ್ಪಷ್ಟ ಮಾಹಿತಿ ಇಲ್ಲವಾದರೂ ಅಧಿಕಾರಿಗಳೊಂದಿಗೆ ಉತ್ಸವ ಆಚರಣೆ ಬಗೆಗೆ ಚರ್ಚೆ ನಡೆಸಿದ್ದಲ್ಲದೆ, ಸರ್ಕಾರ ಉತ್ಸವ ಆಚರಣೆಗಾಗಿನ ಅನುಮತಿಗೂ ಕಾಯದೇ ದಿನಾಂಕ ಘೋಷಣೆ ಮಾಡಿದ್ದಾರೆ. ದಿನಾಂಕ ಘೋಷಣೆ ಮಾಡಿದ್ದು ಹತ್ತು ಹಲವು ರೀತಿಯ ಚರ್ಚೆಗೆ ಗ್ರಾಸವಾಗಿದ್ದು, ಜತೆಗೆ ಗೊಂದಲವನ್ನೂ ಸೃಷ್ಟಿಸಿದೆ. ಬಾದಾಮಿ ಶಾಸಕರು ಕಳೆದ ಒಂದು ದಶಕದಿದ ನಿಂತು ಹೋಗಿರುವ ಚಾಲುಕ್ಯ ಉತ್ಸವವನ್ನು ತಾಲೂಕಿಗೆ ಸೀಮಿತಗೊಳಿಸಿ ಆಚರಣೆ ಮಾಡುತ್ತಾರೋ, ಜಿಲ್ಲಾಡಳಿತ ವತಿಯಿಂದ ಮಾಡುತ್ತಾರೋ ಇಲ್ಲವೆ ಚಾಲುಕ್ಯ ಅಭಿವೃದ್ಧಿ ಪ್ರಾಧಿಕಾರದಿಂದ ಮಾಡುತ್ತಾರೋ ಹೇಗೆ ಎನ್ನುವ ಗೊಂದಲ ಶುರುವಾಗಿದೆ. ಚಾಲುಕ್ಯ ಉತ್ಸವ ಆಚರಣೆ ವಿಷಯ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ಚದಲ್ಲೆ ನಡೆಯಬೇಕು. ಅದಕ್ಕಾಗಿನ ಎಲ್ಲ ಸಿದ್ಧತೆಗಳೂ ಉಸ್ತುವಾರಿ ಸಚಿವರ ಮುಂದಾಳತ್ವದಲ್ಲಿ ಆಗಬೇಕು. ಶಾಸಕ ಭೀಮಸೇನ ಚಿಮ್ಮನಕಟ್ಟಿ ಅವರು ತಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ನಡೆಯುವ ಚಾಲುಕ್ಯ ಉತ್ಸವ ಆಚರಣೆ ಮಾಡುವಂತೆ ಉಸ್ತುವಾರಿ ಸಚಿವರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಹಾಗೂ ಪ್ರವಾಸೋದ್ಯಮ ಇಲಾಖೆ ಸಚಿವರ ಮೇಲೆ ಒತ್ತಡ ಹಾಕುವ ಕೆಲಸ ಮಾಡಬೇಕಿತ್ತು. ಅದು ಬಿಟ್ಟು ತಮ್ಮ ಅಧ್ಯಕ್ಷತೆಯಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆ ನಡೆಸಿ, ದಿನಾಂಕ ಕೂಡ ಘೋಷಣೆ ಮಾಡಿರುವುದು ಸಾರ್ವಜನಿಕ ವಲಯದಲ್ಲಿ ಅಚ್ಚರಿಗೆ ಕಾರಣವಾಗಿದೆ.
ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರು ಮುಧೋಳ ದಲ್ಲಿ ರನ್ನ ಉತ್ಸವ, ಬಾದಾಮಿಯಲ್ಲಿ ಚಾಲುಕ್ಯ ಉತ್ಸವ ಆಚರಣೆ ಹಿನ್ನೆಲೆಯಲ್ಲಿ ಅಧಿಕಾರಿಗಳು, ಸಾಹಿತಿಗಳ ಸಭೆ ನಡೆಸಿದ್ದಾರೆ. ಉಸ್ತುವಾರಿ ಸಚಿವರ ಸಲಹೆಯಂತೆ ಎರಡೂ ಉತ್ಸವಗಳಿಗೆ ಅನುದಾನ ಕೋರಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆಗಳಿಗೆ ಸಂಬಂಧಿಸಿದ ಅಧಿಕಾರಿಗಳ ಮೂಲಕ ಪ್ರಸ್ತಾವಣೆ ಕೂಡ ಕಳುಹಿಸಲ್ಪಟ್ಟಿವೆ. ಸರ್ಕಾರದಿಂದ ಅನುದಾನ ಮಂಜೂರಾತಿ, ಉತ್ಸವ ಆಚರಣೆಗೆ ಅನುಮತಿ ಸಿಗಬೇಕಿದೆ. ಜಿಲ್ಲಾಡಳಿತ ಕೂಡಾ ಅನುದಾನ ಮತ್ತು ಉತ್ಸವ ಅನುಮತಿಗಾಗಿ ಕಾಯುತ್ತಿದೆ. ಇಂತಹ ಸನ್ನಿವೇಶದಲ್ಲಿ ಬಾದಾಮಿ ಶಾಸಕರು ಚಾಲುಕ್ಯ ಉತ್ಸವ ಆಚರಣೆಗೆ ದಿನಾಂಕ ಘೋಷಣೆ ಮಾಡಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಮುಂದಿನ ಬೆಳವಣಿಗೆ ಕಾಯ್ದು ನೋಡಬೇಕಷ್ಟೆ.