ಹಿಂಗಾರು ಸುಗ್ಗಿ ಪ್ರಾರಂಭ: ಕೂಲಿ ಕಾರ್ಮಿಕರು ಸಿಗದೆ ರೈತರ ಪರದಾಟ
ಸಂಬರಗಿ 01: ಸರಕಾರದ ಗೃಹ ಲಕ್ಷ್ಮಿ ಯೋಜನೆಯಿಂದ ಜನರಿಗೆ ಅನುಕೂಲವಾಗಿದೆ. ಆದರೆ ಕೂಲಿ ಕೆಲಸ ಮಾಡುವ ಪ್ರಮಾಣ ಕಡಿಮೆ ಆಗಿದೆ. ಹಿಂಗಾರು ಸುಗ್ಗಿ ಪ್ರಾರಂಭವಾಗಿದ್ದು, ರೈತರಿಗೆ ಕೂಲಿ ಕಾರ್ಮಿಕರು ಇಲ್ಲದ ಕಾರಣ ತಮ್ಮ ಮನೆ ಪರಿವಾರದ ಜೊತೆಗೆ ಹಿಂಗಾರಿ ಬೆಳೆ ಸುಗ್ಗಿ ಮಾಡುವ ಪರಿಸ್ಥಿತಿ ರೈತರಿಗೆ ಬಂದಿದೆ.
ಪ್ರತಿ ವರ್ಷ ಜನೇವರಿಯಿಂದ ಮಾರ್ಚವರೆಗೆ ರೈತರಿಗೆ ಹಿಂಗಾರಿ ಬೆಳೆ ಸುಗ್ಗಿ ದಿನಾ ಇರುತ್ತವೆ. ಪ್ರತಿ ವರ್ಷ ಕೂಲಿ ಕಾರ್ಮಿಕರು ಸುಗ್ಗಿಯ ಅವಧಿಯಲ್ಲಿ ಕೆಲಸಕ್ಕೆ ಹೋಗಿ ವರ್ಷದ ಅವಧಿಯಲ್ಲಿ ಬೇಕಾದ ಧಾನ್ಯವನ್ನು ಸಂಗ್ರಹ ಮಾಡುತ್ತಾರೆ. ಆದರೆ ಸರ್ಕಾರದ ಗೃಹ ಲಕ್ಷ್ಮೀ ಹಾಗೂ ಉಚಿತ ರೇಷನ್ ಇದ್ದ ಕಾರಣ ಜಮೀನದಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರ ಪ್ರಮಾಣ ಶೇ. 80ರಷ್ಟು ಕಡಿಮೆ ಆಗಿದೆ. ರೈತರು ತಮ್ಮ ಜಮೀನದಲ್ಲಿ ಹಿಂಗಾರಿ ಬೆಳೆ ಸುಗ್ಗಿ ಮಾಡಬೇಕಾದರೆ ಕಾರ್ಮಿಕರು ಅವಶ್ಯವಾಗಿ ಬೇಕು. ಕಾರ್ಮಿಕರು ಇಲ್ಲದ ಕಾರಣ ತಮ್ಮ ಜಮೀನದಲ್ಲಿ ರೈತರಿಗೆ ತಮ್ಮ ಪರಿವಾರದ ಜೊತೆಗೆ ಕೆಲಸ ಮಾಡುವ ಪರಿಸ್ಥಿತಿ ಬಂದಿದೆ.
ಕಳೆದ ಹಲವಾರು ವರ್ಷದಲ್ಲಿ ಹಿಂಗಾರಿ ಸುಗ್ಗಿ ಬಂದನಂತರ ಕೂಲಿ ಕಾರ್ಮಿಕರು ರೈತರ ಜಮೀನದಲ್ಲಿ ಕೆಲಸ ಮಾಡಿ ರೈತರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಕಾಳುಗಳನ್ನು ಸಂಗ್ರಹಣೆ ಮಾಡುತಿದ್ದರು. ಆದರೆ ಸರ್ಕಾರದಯೋಜನೆ ಕೆಲಸವಿಲ್ಲದೆ ಹಣ ಸಿಗುವ ಕಾರಣದಿಂದ ಹಿಂಗಾರಿ ಸುಗ್ಗಿಗೆ ಕೆಲಸ ಮಾಡುವ ಕಾರ್ಮಿಕರ ಪ್ರಮಾಣ ಕಡಿಮೆ ಆಗಿದೆ. ಸಧ್ಯದಲ್ಲಿ ಬಿಳಿಜೋಳ, ಕಡಲೆ, ಸಧಕ ಈ ಧಾನ್ಯಗಳ ಸುಗ್ಗಿ ನಡೆದಿದೆ. ಆದರೆ ಕೂಲಿ ಕಾರ್ಮಿಕರು ಸಿಗದೆ ರೈತರು ಪರದಾಡುವಂತಾಗಿದೆ. ಕೂಲಿಕಾರರು ತಮ್ಮ ಜಮೀನನಲ್ಲಿ ಕೆಲಸಕ್ಕೆ ಬೇಕಾದರೆ ಅವರ ಮನೆಗೆ ಹೋಗಿ ಟ್ರ್ಯಾಕ್ಟರ್ ಮುಖಾಂತರ ತರುವ ಪರಿಸ್ಥಿತಿ ಬಂದಿದೆ. ಸದ್ಯದಲ್ಲಿ ಕೂಲಿ ಪುರುಷರಿಗೆ 800 ರೂ. ಮಹಿಳೆಯರಿಗೆ 500 ರೂ. ಬೆಳಿಗ್ಗೆ 8 ರಿಂದ 1ಗಂಟೆಯವರೆಗೆ ಕೆಲಸ ಮಾಡುತ್ತಾರೆ. ಸರ್ಕಾರದ ಉಚಿತ ಯೋಜನೆಗಳು ಮನುಷ್ಯರನ್ನು ದುಡಿಮೆಯತ್ತ ನಿರ್ಲಕ್ಷ ಮಾಡಿ ಸೋಮಾರಿಗಳನ್ನಾಗಿಸುತ್ತಿದೆ ಎಂದು ರೈತರು ಪ್ರಶ್ನೆ ಮಾಡುತ್ತಾ ಇದ್ದಾರೆ. ಗಡಿ ವಿಭಾಗದ ಪುರುಷರಿಗಿಂತ ಮಹಿಳೆಯರೇ ಹೆಚ್ಚು ಕೂಲಿ ಕೆಲಸ ಮಾಡುತ್ತಿದ್ದಾರೆ.