ಲೋಕದರ್ಶನ ವರದಿ
ಹರಪನಹಳ್ಳಿ 26: ತಾಲೂಕಿನ ಅರಸೀಕೆರೆ ಗ್ರಾಮದ ಕಂದಾಯ ಇಲಾಖೆಯ ನಾಡ ಕಚೇರಿಗೆ ಮೂಲಭೂತ ಸೌಕರ್ಯ ಒದಗಿಸುವಂತೆ ಆಗ್ರಹಿಸಿ ವಿವಿಧ ಸಂಘಟನೆಗಳ ಮುಖಂಡರು ಹಾಗೂ ಸಾರ್ವಜನಿಕರು ಕಂಪ್ಯೂಟರ್ ಸೇರಿದಂತೆ ಪೀಠೋಪಕರಣಗಳನ್ನು ಕಚೇರಿಯೀಂದ ಹೊರಗಿಟ್ಟು ಬೀಗ ಜಡಿದು ಪ್ರತಿಭಟನೆ ನಡೆಸಿದರು.
ತಾಲೂಕಿನಲ್ಲಿಯೇ ಅತಿ ದೊಡ್ಡ ಹೋಬಳಿ ಎಂಬ ಖ್ಯಾತಿ ಪಡೆದುಕೊಂಡಿರುವ ಅರಸೀಕೆರೆಗೆ 72 ಹಳ್ಳಿಗಳು ವ್ಯಾಪ್ತಿಗೆ ಬರುತ್ತವೆ. ಆದರೆ ಸರ್ಕಾರದ ಯಾವುದೇ ಯೋಜನೆಗಳು ಜಾರಿಯಾದರೂ ಸವಲತ್ತುಗಳನ್ನು ಪಡೆಯಲು ನಿತ್ಯ ಸಾವಿರಾರು ಜನ ನಾಡ ಕಚೇರಿಗೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಪಹಣಿ, ಆಧಾರ್ ಕಾರ್ಡ ತಿದ್ದುಪಡಿ, ಹೈ.ಕ ಪ್ರಮಾಣ ಪತ್ರ ಪಡೆಯಲು ಆಗಮಿಸುತ್ತಾರೆ. ಆದರೆ ನಾಡ ಕಚೇರಿಗೆ ಮೂಲ ಸೌಕರ್ಯ ಕೊರತೆಯಿಂದಾಗಿ ಸೌಲಭ್ಯ ಪಡೆಯಲು ನಿತ್ಯ ಅಲೆಡಾಡುವಂತಾಗಿದೆ. ಕೂಡಲೇ ನಾಡ ಕಚೇರಿಗೆ ಅಗತ್ಯವಿರುವ ಗಣಕಯಂತ್ರ, ಪ್ರಿಂಟರ್ ಒದಗಿಸುವಂತೆ ಒತ್ತಾಯಿಸಿದರು.
ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಡಾ.ನಾಗವೇಣಿ ಅವರು, ಕೆಟ್ಟು ಹೋಗಿದ್ದ ಪ್ರಿಂಟರ್ನ ಬದಲಾಗಿ ಹೊಸ ಪ್ರಿಂಟರ್ ವ್ಯವಸ್ಥೆ ಮಾಡಿದರು. ಆಧಾರ್ ಕಾರ್ಡ ತಿದ್ದುಪಡಿಗೆ ನಾಳೆಯಿಂದಲೇ ಪ್ರತ್ಯೇಕ ಕೌಂಟರ್ ತೆರೆಯಲಾಗುವುದು. ಸಾರ್ವಜನಿಕರ ಕುಂದು ಕೊರತೆ ಬಗೆಹರಿಸುವ ನಿಟ್ಟಿನಲ್ಲಿ ಗ್ರಾಮ ಲೆಕ್ಕಾಧಿಕಾರಿಗಳು ಸೇರಿದಂತೆ ಹೋಬಳಿ ವ್ಯಾಪ್ತಿಯಲ್ಲಿ ಬರುವ ಅಧಿಕಾರಿಗಳ ಸಭೆಯನ್ನು ಕರೆದು ಸಾರ್ವಜನಿಕರ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆದರು.
ವಿವಿಧ ಸಂಘಟನೆಯ ಮುಖಂಡರಾದ ಗುಡಿಹಳ್ಳಿ ಹಾಲೇಶ್, ಟಿ.ವೆಂಕಟೇಶ್, ಬುದಾಳ್ ಮರಿಯಪ್ಪ, ಎಂ. ಹನುಮಂತಪ್ಪ, ಕಬ್ಬಳ್ಳಿ ಬಸವರಾಜ್, ನಾಗರಾಜ್, ಕಬ್ಬಳ್ಳಿ ಪರಸಪ್ಪ, ಚಂದ್ರಪ್ಪ, ಅಂಜಿನಪ್ಪ, ಪಲ್ಲವಿ, ಸಿದ್ದಲಿಂಗಪ್ಪ, ರೋಜಾ, ಮಂಜಪ್ಪ, ವಿಜಯಚಾರಿ, ಗ್ರಾಮ ಲೆಕ್ಕಾಧಿಕಾರಿಗಳಾದ ಮಂಜುನಾಥ್, ಪ್ರಕಾಶ್, ಶ್ರೀಕಾಂತ್ ಮತ್ತಿತರರು ಭಾಗವಹಿಸಿದ್ದರು.