ಲೋಕದರ್ಶನ ವರದಿ
ಶಿರಹಟ್ಟಿ 03: ಪಾಲಕರು ತಮ್ಮ ಮಕ್ಕಳನ್ನು ಬೆಳೆಸುವ ರೀತಿಯಲ್ಲಿ ಗಿಡಮರಗಳನ್ನು ಜೋಪಾನವಾಗಿ ಬೆಳಸಿದಲ್ಲಿ ಪರಿಸರ ಸಂರಕ್ಷಣೆಯಾಗುತ್ತದೆ ಎಂದು ಯೋಜನಾಧಿಕಾರಿ ಶಿವಣ್ಣ ಎಸ್ ಬೇಗು ಹೇಳಿದರು.
ಅವರು ಸ್ಥಳೀಯ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ವತಿಯಿಂದ ಪರಿಸರ ಸಂರಕ್ಷಣಾ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮನುಷ್ಯ ಜೀವಿಸಲು ಪರಿಸರ ಬಹಳ ಅವಶ್ಯ ಮತ್ತು ಭೂಮಿಯ ಮೇಲೆ ಬದುಕಿರುವ ಪ್ರತಿಯೊಂದು ಜೀವಸಂಕುಲವನ್ನು ಪರಿಸರ ಸಾಕಿ ಆಹಾರ, ನೀರು, ಗಾಳಿ, ಬೆಳಕು ಕಲ್ಪಿಸಿ, ದೈನಂದಿನ ಚಟುವಟಿಕೆಗಳಿಗೆ ಸಜ್ಜುಗೊಳಿಸುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಗಿಡಮರಗಳನ್ನು ಕಡೆಯುವುದರ ಬದಲು ಅವುಗಳನ್ನು ಉಳಿಸಿ ಬೆಳಸಬೇಕು ಅಂದಾಗ ಮಾತ್ರ ನಮ್ಮ ಮುಂದಿನ ಪೀಳಿಗೆಗೆ ಪರಿಸರವೆಂಬುವುದು ಕಾಣಲು ಸಿಗುತ್ತದೆ ಮತ್ತು ಅವರಿಗೂ ಸಹ ನೀರು, ಬೆಳಕು, ಶುದ್ಧವಾದ ಗಾಳಿ ಸಿಕ್ಕು ಆರೋಗ್ಯಕರ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ದೇಶದಲ್ಲಿ ದಿನದಿಂದ ದಿನಕ್ಕೆ ತಾಪಮಾನ ಹಾಗೂ ಜನಸಂಖ್ಯೆ ಪ್ರಮಾಣ ಅತ್ಯಂತ ವೇಗವಾಗಿ ಏರುತ್ತಿದೆ ಹೀಗಾಗಿ ಮನುಷ್ಯ ತನ್ನ ಹೊಟ್ಟೆ ಪಾಡಿಗಾಗಿ ಗಿಡಮರಗಳನ್ನು ಕಡೆಯುತ್ತಿದ್ದಾನೆ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನದ ಬೆಳವಣಿಗೆ, ಕಾಖರ್ಾನೆಗಳು ಹೊರಸೂಸುವ ಮಾಲೀನ್ಯಕಾರಕ ಹೊಗೆಯಿಂದಾಗಿ ಪರಿಸರದ ಅಸಮತೋಲನೆ ಉಂಟಾಗುತ್ತಿದೆ. ಇದರಿಂದ ಭೂಮಿಯ ಮೇಲೆ ಬದುಕಿರುವ ಪ್ರಾಣಿ ಪಕ್ಷಿ ಹಾಗೂ ಮನುಷ್ಯನ್ನು ಸಹ ಉಸಿರಾಟದ ತೊಂದರೆ ಹಾಗೂ ಹೃದಯಘಾತದಂತಹ ನಾನಾ ತೊಂದರೆಗಳನ್ನು ಅನುಭವಿಸುವ ದುಸ್ಥಿತಿ ಎದುರಾಗುತ್ತಿದೆ. ಇದನ್ನು ತಪ್ಪಿಸಿ ಎಲ್ಲರೂ ಆರೋಗ್ಯವಂತರಾಗಲು ಹೆಚ್ಚಿನ ಪ್ರಮಾಣದಲ್ಲಿ ಸಸಿಗಳನ್ನು ನೆಟ್ಟು ಬೆಳೆಸಬೇಕು ಎಂದು ಹೇಳಿದರು.
ಪ್ರಾಚಾರ್ಯ ಆರ್.ಬಿ. ಪೂಜಾರ, ಎಪಿಎಂಸಿ ಅಧ್ಯಕ್ಷ ಎಂ.ಎ. ಸಾಬ್, ಮೇಲ್ವಿಚಾರಕ ಹನಮಂತ ಸೇರಿದಂತೆ ಸ್ವ ಸಹಾಯ ಸಂಘದ ನೂರಾರು ಸದಸ್ಯರು ಹಾಗೂ ಮಕ್ಕಳು ಉಪಸ್ಥಿತರಿದ್ದರು.