ಯಡೂರ ವೀರಭದ್ರೇಶ್ವರ ದೇವಸ್ಥಾನಕ್ಕೆ ಕಲ್ಲೋಳ ಮಾರ್ಗವಾಗಿ ಭಕ್ತರು ಹೋಗಲು ಅನುದಾನ ಬಿಡುಗಡೆ

Grant release for devotees to go to Yadoora Veerabhadreshwar Temple through Kallola Marga

ಯಡೂರ ವೀರಭದ್ರೇಶ್ವರ ದೇವಸ್ಥಾನಕ್ಕೆ ಕಲ್ಲೋಳ ಮಾರ್ಗವಾಗಿ ಭಕ್ತರು ಹೋಗಲು ಅನುದಾನ ಬಿಡುಗಡೆ 

ಮಾಂಜರಿ 16 : ರೈತರಿಗೆ ಮತ್ತು ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಾಣ ಮಾಡುತ್ತಿರುವ ಚೆಂದೂರಟೇಕ್‌-ಸೈನಿಕ ಟಾಕಳಿ ಸೇರಿದಂತೆ ಆರಕ್ಕೂ ಹೆಚ್ಚು ಬ್ರಿಜ್ ಕಂ ಬಾಂದಾರ ಕಾಮಗಾರಿ ಅನುದಾನದ ಕೊರತೆಯಿಂದ ಅರ್ಧಕ್ಕೆ ನಿಂತಿವೆ. ಐದಾರು ವರ್ಷಗಳ ಹಿಂದೆಯೇ ಆರಂಭಗೊಂಡ ಕಾಮಗಾರಿಗಳನ್ನು ಮುಗಿಸಲು ಇನ್ನೆಷ್ಟು ದಿನ ಬೇಕು? ನಾವು ಇನ್ನೂ ಎಷ್ಟು ವರ್ಷ ಕಾಯಬೇಕು ಎಂದು ನದಿ ತೀರದ ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. 

ಉಪವಿಭಾಗದಲ್ಲಿ ಕೃಷ್ಣಾ ನದಿಗೆ ಬ್ರಿಜ್ ಕಂ ಬಾಂದಾರ ನಿರ್ಮಾಣ ಮಾಡುವುದರಿಂದ ಸುತ್ತುವರಿದು ಪ್ರಯಾಣಿಸುವ ತೊಂದರೆ ತಪ್ಪಲಿದೆ. ಚೆಂದೂರಟೇಕ್ -ಸೈನಿಕ ಟಾಕಳಿ ಮತ್ತು ಕಾರದಗಾ-ಭೋಜ, ಜುಗೂಳ-ಕಿದ್ರಾಪುರ ಬ್ರಿಜ್ ಕಂ ಬಾಂದಾರ ನಿರ್ಮಾಣವಾದರೆ ಗಡಿಭಾಗದ ಜನರು ಸುಲಭವಾಗಿ ನೆರೆಯ ಮಹಾರಾಷ್ಟ್ರಕ್ಕೆ ಸಂಪರ್ಕ ಸಾಧಿಸಬಹುದಾಗಿದೆ. ಯಡೂರ-ಕಲ್ಲೋಳ ಬ್ರಿಜ್ ಪೂರ್ಣಗೊಂಡರೆ ಸುಕ್ಷೇತ್ರ ಯಡೂರ ವೀರಭದ್ರೇಶ್ವರ ದೇವಸ್ಥಾನಕ್ಕೆ ಕಲ್ಲೋಳ ಮಾರ್ಗವಾಗಿ ಭಕ್ತರು ಹೋಗಲು ಸಮೀಪವಾಗುತ್ತದೆ. ಕಾಮಗಾರಿಗೆ 2014-15ರಲ್ಲಿ 22 ಕೋಟಿ ರೂ. ಅನುದಾನ ಮಂಜೂರಾಗಿ ಕಾಮಗಾರಿಗೂ ಚಾಲನೆ ನೀಡಲಾಗಿತ್ತು. ಕೇವಲ 17 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಇನ್ನೂ 5 ಕೋಟಿ ರೂ. ಬಿಡುಗಡೆಯಾಗಬೇಕು. ಹಳೆದಿಗ್ಗೇವಾಡಿ-ಇಂಗಳಿ ಬ್ರಿಜ್ ಕಂ ಬಾಂದಾರಕ್ಕೆ 2017-18 ರಲ್ಲಿ 70 ಕೋಟಿರೂ.ಗಳ ಅನುದಾನ ಮಂಜೂರಾಗಿತ್ತು. ಆದರೆ, ಕೇವಲ 30 ಕೋಟಿರೂ. ಅಷ್ಟೇ ಬಿಡುಗಡೆಯಾಗಿದೆ. ಇನ್ನೂ 40 ಕೋಟಿ ರೂ. ಬಿಡುಗಡೆಯಾಗಬೇಕು. ಕಲ್ಲೋಳ-ಯಡೂರ ಬ್ರಿಜ್ ಕಂ ಬಾಂದಾರಕ್ಕೆ 2014-15ರಲ್ಲಿ 35 ಕೋಟಿ ರೂ.ಅನುದಾನ ಮಂಜೂರಾಗಿತ್ತು. ಉಗಾರ-ಕುಡಚಿ ಬ್ರಿಜ್ ಕಂಬಾಂದಾರಕ್ಕೆ 2018ರಲ್ಲಿ 38 ಕೋಟಿ ರೂ.ಅನುದಾನ ಮಂಜೂರಾಗಿತ್ತು. ಆ ಕಾಮಗಾರಿಯೂ ಅನುದಾನದ ಕೊರತೆಯಿಂದ ಅರ್ಧಕ್ಕೆನಿಂತಿದೆ. ಕಾರದಗಾ-ಭೋಜ, ಜುಗೂಳ-ಕಿದ್ರಾಪೂರ, ಯಕ್ಸಂಬಾ-ದತ್ತವಾಡ ಈ ಎಲ್ಲ ಸೇತುವೆಗಳ ಕಾಮಗಾರಿಗಳು ಆರಂಭಗೊಂಡು 10 ವರ್ಷ ಕಳೆದರೂ ಸಹ ಅನುದಾನದ ಕೊರತೆಯಿಂದಕಾಮಗಾರಿ ಅರ್ಧಕ್ಕೆ ನಿಂತಿವೆ. ಕೂಡಲೇ ರಾಜ್ಯ ಸರಕಾರ ಅನುದಾನ ಬಿಡುಗಡೆ ಮಾಡುವ ಮೂಲಕ ಅರ್ಧಕ್ಕೆ ನಿಂತಿರುವ ಬ್ರಿಜ್ ಕಂ ಬಾಂದಾರ ಕಾಮಗಾರಿಗಳನ್ನು ಪೂರ್ಣಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಜನರು ಆಗ್ರಹಿಸಿದ್ದಾರೆ. ನಿಪ್ಪಾಣಿ ತಾಲೂಕಿನಲ್ಲಿ ವೇದಗಂಗಾ ನದಿಗೆ ನಿರ್ಮಿಸಿರುವ ಸಿದ್ದಾಳ-ಅಕ್ಟೋಳ, ಜತ್ರಾಟ-ಬಿವತಿ, ಕಾರದಗಾ- ಭೋಜ ಸೇತುವೆಗಳು ಮತ್ತು ಚಿಕ್ಕೋಡಿ ತಾಲೂಕಿನ ದೂಧಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಕಾರದಗಾ- ಭೋಜ, ಮಲಿಕವಾಡ- ದತ್ತವಾಡ ಮತ್ತು ಕೃಷ್ಣಾನದಿಗೆ ಅಡ್ಡಲಾಗಿ ನಿರ್ಮಿಸಿ ರುವ ಮಾಂಜರಿ-ಇಂಗಳಿ, ಮಾಂಜರಿ-ಬಾವನ ಸೌಂದತ್ತಿ, ಅಂಕಲಿ-ಬಾವನಸೌಂದತ್ತಿ ಮುಂತಾದ ಕೆಳಹಂತದ ಸೇತುವೆಗಳ ಎರಡೂ ಬದಿಗೆ ತಡೆಗೋಡೆ ಗಳಿಲ್ಲ. ಇದರಿಂದ ಸಾರ್ವಜನಿಕರು ಜೀವ ಕೈಯಲ್ಲಿ ಹಿಡಿದು ಸಂಚರಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಶೀಘ್ರ ಈ ಸೇತುವೆಗಳಿಗೆ ತಡೆಗೋಡೆ ನಿರ್ಮಿಸಬೇಕೆಂದೂ ಜನರು ಒತ್ತಾಯಿಸಿದ್ದಾರೆ. 

ಬೆಳಗಾವಿ ಜಿಲ್ಲೆಯ ಹಲವು ಬ್ರಿಜ್ ಕಂ ಬಾಂದಾರ ಕಾಮಗಾರಿಗಳಿಗೆ ಕೆಆರ್ ಡಿಎಲ್ ನಿಂದ ಆದೇಶವಾಗಿ 10 ವರ್ಷ ಕಳೆದರೂ ಕಾಲಮಿತಿಯಲ್ಲಿ ಪೂರ್ಣಗೊಳ್ಳದೆ ಸಾರ್ವಜನಿಕರ ತೆರಿಗೆ ಹಣ ವ್ಯರ್ಥವಾಗಿದೆ. ಸರಕಾರದ ಇಚ್ಛಾಶಕ್ತಿಯ ಕೊರತೆ ಮತ್ತು ಅಧಿಕಾರಿಗಳ ನಿರ್ಲಕ್ಷದಿಂದ ಕಾಮಗಾರಿಗಳು ಅರ್ಧಕ್ಕೆ ನಿಂತಿವೆ. ಉತ್ತರ ಕರ್ನಾಟಕ ಇಂದಿಗೂ ಅಭಿವೃದ್ಧಿ ಕಾಣದೆ ಪ್ರಾದೇಶಿಕ ಅಸಮತೋಲನದಿಂದ ನಲುಗುತ್ತಿದೆ. ಚಳಿಗಾಲ ಅಧಿವೇಶನ ನೆಪ ಮಾತ್ರಕ್ಕೆ ಆಗದೆ ನನೆಗುದಿಗೆ ಬಿದ್ದಿರುವ ಅಭಿವೃದ್ಧಿ ಕೆಲಸಗಳನ್ನು ಕಾರ್ಯಗತಗೊಳಿಸಲು ಸರಕಾರ ಮುಂದಾಗಬೇಕು. ಚಿಕ್ಕೋಡಿ ಉಪವಿಭಾಗದಲ್ಲಿ ಅರ್ಧಕ್ಕೆ ನಿಂತಿರುವ ಬ್ರಿಜ್ ಕಂ ಬಾಂದಾರ ಕಾಮಗಾರಿಗೆ ಸರಕಾರ ಅಗತ್ಯ ಅನುದಾನ ನೀಡುವ ಮೂಲಕ ಪೂರ್ಣಗೊಳಿಸಬೇಕು. ಆ ಮೂಲಕ ರೈತರಿಗೆ ಮತ್ತು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು.