ಹಿಟ್ಲರ್ ಧೋರಣೆಯ ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ರಾಜ್ಯಪಾಲರು ಕೂಡಲೇ ಕಿತ್ತೊಗೆಯರಿ - ನ್ಯಾಯವಾದಿ ದಾನೇಶ ಅವಟಿ

Governor should remove Hitler-style state Congress government immediately - Advocate Danesh Avati

ಹಿಟ್ಲರ್ ಧೋರಣೆಯ ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ರಾಜ್ಯಪಾಲರು ಕೂಡಲೇ ಕಿತ್ತೊಗೆಯರಿ - ನ್ಯಾಯವಾದಿ ದಾನೇಶ ಅವಟಿ 

ವಿಜಯಪುರ 12 : ಬ್ರಿಟೀಷರ ವಿರುದ್ಧ ಹೋರಾಡಿ ಭಾರತಕ್ಕೆ ಸ್ವಾತಂತ್ರ್ಯ ತಂದು ಕೊಡಲು ತ್ಯಾಗ ಬಲಿದಾನಗೈದ ಕಿತ್ತೂರಿನ ವೀರರಾಣಿ ಚೆನ್ನಮ್ಮನ ಮನೆಯ ಮಕ್ಕಳಾದ ಪಂಚಮಸಾಲಿಗಳು ನ್ಯಾಯಯುತವಾಗಿ ಮೀಸಲಾತಿ ಪಡೆಯಲು ಶಾಂತಿಯುತವಾಗಿ ಮಾಡುತ್ತಿದ್ದ ಹೋರಾಟವನ್ನು ಪೊಲೀಸ್ ಶಕ್ತಿ ಪ್ರಯೋಗಿಸಿ ಹತ್ತಿಕ್ಕುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾಂಗ್ರೆಸ್ ಸರಕಾರ ಆಧುನಿಕ ಬ್ರಿಟೀಷರಂತೆ ವರ್ತಿಸಿರುವುದು ಖಂಡನೀಯವಾಗಿದೆ. ಪಂಚಮಸಾಲಿ ಹೋರಾಟಗಾರರ ಮೇಲೆ ದೌರ್ಜನ್ಯ ಎಸಗಿ ಸರಕಾರ ತನ್ನ ಪ್ರಜಾಪ್ರಭುತ್ವ ವಿರೋಧಿ ಧೋರಣೆ ಪ್ರದರ್ಶಿಸಿದೆ. ಮಾನವ ಹಕ್ಕುಗಳ ಉಲ್ಲಂಘನೆಗೈದು ಪ್ರಜಾಪ್ರಭುತ್ವ ವಿರೋಧಿ ಹಿಟ್ಲರ್ ಆಡಳಿತ ಹೇರುತ್ತಿದೆ. ರಾಜ್ಯದಲ್ಲಿ ಶಾಂತಿ ಸುವ್ಯಸ್ಥೆ ಹದಗೆಟ್ಟಿರುವುದರಿಂದ ಕೂಡಲೇ ಜನವಿರೋಧಿ ರಾಜ್ಯ ಸರಕಾರವನ್ನು ಕಿತ್ತೊಗೆದು ರಾಷ್ಟ್ರಪತಿ ಆಡಳಿತವನ್ನು ಹೇರಬೇಕೆಂದು ನ್ಯಾಯವಾದಿ ದಾನೇಶ ಅವಟಿ ಅವರು ಆಗ್ರಹಿಸಿದರು. ಅವರು ನಗರದಲ್ಲಿ ಬೆಳಗಾವಿ ಸುವರ್ಣ ವಿಧಾನ ಸೌಧದ ಮುಂದೆ ಪಂಚಮಸಾಲಿ ಮೀಸಲಾತಿ ಹೋರಾಟಗಾರರ ಮೇಲೆ ಪೊಲೀಸರು ಎಸಗಿರುವ ದೌರ್ಜನ್ಯವನ್ನು ಖಂಡಿಸಿ ವಿಜಯಪುರ ಜಿಲ್ಲಾಧಿಕಾರಿಗಳ ಮೂಲಕ ಲಿಂಗಾಯತ ಪಂಚಮಸಾಲಿ ವಕೀಲರ ವೇದಿಕೆ ವತಿಯಿಂದ ರಾಜ್ಯಪಾಲರಿಗೆ ಮನವಿ ಸಲ್ಲಿಸಿ ಮಾತನಾಡಿದರು.  

ಇನ್ನೋರ್ವ ನ್ಯಾಯವಾದಿ ಬಸವರಾಜ ಯಾದವಾಡ ಅವರು ಮಾತನಾಡಿ, ಬೆಳಗಾವಿಯಲ್ಲಿ ಪಂಚಮಸಾಲಿ ಶ್ರೀಗಳು ಹಾಗೂ ಮೀಸಲಾತಿ ಹೋರಾಟಗಾರರ ಮೇಲೆ ಪೊಲೀಸರು ಎಸಗಿರುವ ದೌರ್ಜನ್ಯ ಪ್ರಕರಣವನ್ನು ಸುಪ್ರೀಮ್ ಕೋರ್ಟಿನ ಹಾಲಿ ನ್ಯಾಯಾದೀಶರ ನೇತೃತ್ವದಲ್ಲಿ ಉನ್ನತ ನ್ಯಾಯಾಂಗ ತನಿಖೆಗೆ ಒಪ್ಪಿಸಿ ಹೋರಾಟದ ದಿಕ್ಕು ತಪ್ಪಿಸಲು ಪ್ರಯತ್ನಿಸುತ್ತಿರುವ ಕಿಡಗೇಡಿಗಳಿಗೆ ಕಠಿಣ ಶಿಕ್ಷೆ ನೀಡಬೇಕು ನೊಂದ ಪಂಚಮಸಾಲಿ ಜನಾಂಗಕ್ಕೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದರು.  

ನ್ಯಾಯವಾದಿ ಶ್ರೀಶೈಲ ಮುಳಜಿ ಅವರು ಮಾತನಾಡಿ, ರೈತಾಪಿ ವರ್ಗದ ಪಂಚಮಸಾಲಿ ಸಮಾಜವು ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿದೆ ಸಮಾಜದ ಮಕ್ಕಳ ಪ್ರಗತಿಗೆ 2ಎ ಮೀಸಲಾತಿ ಅವಶ್ಯಕತೆ ಇದೆ ಅದಕ್ಕಾಗಿ ಪ್ರಜಾಪ್ರಭುತ್ವ ಮಾರ್ಗದಲ್ಲಿ ನಾವು ನಡೆಸುತ್ತಿರುವ ಹೋರಾಟವನ್ನು ತಡೆಗಟ್ಟಲು ಸರಕಾರ ವಿಫಲ ಪ್ರಯತ್ನ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ ಐದು ಗ್ಯಾರಂಟಿ ನೀಡಿದ ಸಿದ್ರಾಮಯ್ಯ ಸರ್ಕಾರ ಲಿಂಗಾಯತ ಪಂಚಮಸಾಲಿ ಸಮಾಜ ಬಾಂಧವರು ನ್ಯಾಯಯುತ 2ಎ ಮೀಸಲಾತಿ ಕೇಳಿದರೆ ಹೋರಾಟಗಾರರ ಮೇಲೆ ಲಾಠಿ ಚಾರ್ಜ್‌ ಮಾಡಿ ಕೈ ಕಾಲು ಮುರಿಯುವ ಮೂಲಕ 6ನೆ ಗ್ಯಾರಂಟಿ ನೀಡಿದರೆಂದು ಭಾವಿಸಬೇಕಾಗುತ್ತದೆ. ಇದಕ್ಕೆ ಉತ್ತರ ಮುಂದಿನ ಎಲ್ಲ ಚುನಾವಣೆಗಳಲ್ಲಿ ಪಂಚಮಸಾಲಿ ಸಮಾಜ ಬಾಂಧವರು ನೀಡಲಿದ್ದಾರೆಂದು ಎಚ್ಚರಿಸಿದರು.  ಕೂಡಲೇ ನಮ್ಮ ನ್ಯಾಯಯುತ ಬೇಡಿಕೆ ಈಡೇರಿಸಬೇಕು ಇಲ್ಲದಿದ್ದರೆ ಅಧಿಕಾರದಿಂದ ಕೆಳಗಿಳಿಯಬೇಕೆಂದು ಒತ್ತಾಯಿಸಿದರು.  

ನ್ಯಾಯವಾದಿ ಸಿ ಎಂ ಅಂಗಡಿ ಅವರು ಮಾತನಾಡಿ, ವಿರೋಧ ಪಕ್ಷದಲ್ಲಿ ಇದ್ದಾಗ ಸಿ ಎಂ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ನಾಯಕರು ಪಂಚಮಸಾಲಿ ಮೀಸಲಾತಿ ಹೋರಾಟವನ್ನು ಬೆಂಬಲಿಸಿದ್ದರಿಂದ ಮುಗ್ದ ಪಂಚಮಸಾಲಿ ಸಮಾಜ ಕಾಂಗ್ರೆಸ್ ಬೆನ್ನಿಗೆ ನಿಂತಿತು ಇದರಿಂದ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಅವರು ಪಂಚಮಸಾಲಿ ಸಮಾಜದ ಉಪಕಾರ ಮರೆಯುವ ಮೂಲಕ ಸಮಾಜಕ್ಕೆ ದ್ರೋಹ ಬಗೆದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು ಕೂಡಲೇ 2ಎ ಮೀಸಲಾತಿ ನೀಡಬೇಕು ಕೇಂದ್ರ ಬಿಜೆಪಿ ಸರ್ಕಾರ ಓಬಿಸಿ ಪಟ್ಟಿಗೆ ಪಂಚಮಸಾಲಿ ಸಮಾಜವನ್ನು ಸೇರಿಸಬೇಕೆಂದು ಆಗ್ರಹಿಸಿದರು. 

ನ್ಯಾಯವಾದಿಗಳಾದ ಶ್ರೀಶೈಲ ಗೊಬ್ಬೂರು, ಎಸ್‌.ಎಂ. ಪೊಲೀಸಪಾಟೀಲ, ಬಿ.ಎಂ.ಪಾಟೀಲ್‌.ಸಿ, ಚಂದ್ರಶೇಖರ ವಾಲಿ, ಎಸ್ ಎಂ. ಅಲದಿ ದೇಸಾಯಿ, ಎಂ ಎಸ್ ಬಗಲಿ (ಕವಲಗಿ), ಶಿವರಾಜ್ ಗೌಡ ಬಿರಾದಾರ, ಬಾಬು ಹಿಪ್ಪರಗಿ, ವಕೀಲರ ಸಂಘದ ಆಡಳಿತ ಮಂಡಳಿ ಸದಸ್ಯರಾದ ಬಿ.ಡಿ.ಬಿರಾದಾರ, ಬಿ. ಏ.ಹಳ್ಳಿ, ವಿ.ಎನ್‌.ಪಾಟೀಲ್ (ಟಕ್ಕೆ) ಇನ್ನೂ ಅನೇಕ ಜನ ವಕೀಲರು ಉಪಸ್ಥಿತರಿದ್ದು, ಅಪಾರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಅವರಿಗೆ ಮನವಿ ಸಲ್ಲಿಸಿದರು.