ಸಕಾರಾತ್ಮಕವಾಗಿ ವಿಚಾರವಿದ್ದಲ್ಲಿ ಗುರಿ ತಲುಪಲು ಸಾಧ್ಯ: ಸುಧೀರ ಪಾಟೀಲ

Goals can be achieved if there is a positive attitude: Sudhir Patil

ಸಕಾರಾತ್ಮಕವಾಗಿ ವಿಚಾರವಿದ್ದಲ್ಲಿ ಗುರಿ ತಲುಪಲು ಸಾಧ್ಯ: ಸುಧೀರ ಪಾಟೀಲ 

ಬೆಳಗಾವಿ 11: ವಿದ್ಯಾರ್ಥಿಗಳಲ್ಲಿ ಸಮಯ ಪಾಲನೆ, ಸ್ವಯಂ ಶಿಸ್ತು, ಜ್ಞಾನ, ಕಠಿಣ ಪರಿಶ್ರಮ ಮತ್ತು ಪ್ರತಿಭೆ ಇದ್ದಾಗ ಮಾತ್ರ ಯಶಸ್ಸು ಸಿಗಲಿದೆ. ವಿದ್ಯಾರ್ಥಿಗಳು ಜೀವನದಲ್ಲಿ ಸಕಾರಾತ್ಮಕವಾಗಿ ವಿಚಾರಮಾಡಿ ಶ್ರಮಿಸಿದಾಗ ಗುರಿ ತಲುಪಲು ಸಾಧ್ಯವಾಗುತ್ತದೆ ಎಂದು ಬೆಂಗಳೂರು ಆದಾಯ ತೆರಿಗೆ ಇಲಾಖೆ ಉಪ ಆಯುಕ್ತ ಸುಧೀರ ಪಾಟೀಲ ಅವರು ಹೇಳಿದರು. 

ನಗರದ  ನಾಯ್ಕರ ಶಿಕ್ಷಣ ಸಂಸ್ಥೆಯ ರವೀಂದ್ರನಾಥ ಠಾಗೋರ ಪದವಿ-ಪೂರ್ವ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ದಿ.  11ರಂದು 2024-25 ನೇ ಸಾಲಿನ ವಾರ್ಷಿಕ ದಿನಾಚರಣೆ ಮತ್ತು ಪಾರಿತೋಷಕ ವಿತರಣಾ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಅವರು ಮಾತನಾಡುತ್ತಾ, ಶಿಕ್ಷಕರು ಗುಣಮಟ್ಟದ ಶಿಕ್ಷಣದ ಜೊತೆಗೆ ನೈತಿಕ ಮೌಲ್ಯಗಳನ್ನು ಮಕ್ಕಳಿಗೆ ನೀಡಬೆಕು. ವಿದ್ಯಾರ್ಥಿಗಳು ಮಹಾವಿದ್ಯಾಲಯದ ಸಕಲ ಸೌಲಭ್ಯಗಳನ್ನು ಹಾಗೂ ಸುಸಜ್ಜಿತ ಪ್ರಯೋಗಾಲಯಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆನೀಡಿದರು.  

    ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಸಿ.ಎನ್‌.ನಾಯ್ಕರ ಅವರು ಮಾತನಾಡುತ್ತಾ, ವಿದ್ಯಾರ್ಥಿಗಳಿಗೆ ಪಿಯುಸಿ ಹಂತವು ಭವಿಷ್ಯವನ್ನು ನಿರ್ಧರಿಸುವ ಹಾಗೂ ಬದುಕನ್ನು ಕಟ್ಟಿಕೊಳ್ಳುವ ಒಂದು ಸುವರ್ಣ ಅವಕಾಶ. . ಸತತ ಪ್ರಯತ್ನದಿಂದಲೇ ಯಶಸ್ಸು ಸಿಗುವುದು ಹೊರತು ಪ್ರತಿಭೆ ಮತ್ತು ಅದೃಷ್ಟವನ್ನೆ ಅವಲಂಬಿಸಿ ಇರಲಾಗದು. ವಿದ್ಯಾರ್ಥಿಗಳು ವಿದ್ಯಾರ್ಥಿ ಜೀವನದಲ್ಲಿ ಬುದ್ದಿ ಸಾಮರ್ಥ್ಯವನ್ನು ಸಂವರ್ಧನೆ ಮಾಡಿಕೊಳ್ಳಬೇಕು. ಶೈಕ್ಷಣಿಕವಾಗಿ ಸಾಧನೆ ಮಾಡಿದಾಗ ಮಾತ್ರ ಉತ್ತಮ ಭವಿಷ್ಯ ನಿರ್ಮಾಣವಾಗುತ್ತದೆ. ಎಂದು ಕರೆ ನೀಡಿದರು.  

  ನಾಯ್ಕರ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಶ್ವೇತಾ ಸಿ. ನಾಯ್ಕರ ಅವರು ಮಾತನಾಡುತ್ತಾ, ಒಂದು ಒಳ್ಳೆಯ ಪರಿಸರವನ್ನು ನಿರ್ಮಾಣ ಮಾಡುವಲ್ಲಿ ನಮ್ಮ ಉಪನ್ಯಾಸ ವೃಂದ ಯಾವತ್ತು ಸ್ಪರ್ಧಾತ್ಮಕ ವಿಚಾರಗಳನ್ನು ಅಳವಡಿಸಿಕೊಂಡು ಸಂಸ್ಥೆಯು ಅತ್ಯುನ್ನತ ಗುರಿ ಧ್ಯೇಯೋದ್ದೇಶಗಳನ್ನು ಗುರಿ ತಲುಪಲು ಅವಿರತವಾಗಿ ಶ್ರಮಿಸುತ್ತಿದೆ ಎಂದು ನುಡಿದರು. 

ತನುಶ್ರೀ ಪಿ ಸ್ವಾಗತಿಸಿದರು. ರಾಜೇಶ್ವರಿ ರಾವ್ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಅಮ್ರತಾ ಕೇರೂರ ವರದಿ ವಾಚನ ಮಾಡಿದರು. ದತ್ತಾತ್ರೇಯ ಸರದೇಸಾಯಿ ವಂದಿಸಿದರು. ಸಂಜನಾ ಹಾಗೂ ದಿವ್ಯಾ ನಿರೂಪಿಸಿದರು. 

2024-25 ನೇ ಸಾಲಿನ ಅತ್ಯುತ್ತಮ ವಿದ್ಯಾರ್ಥಿ ಎಂದು ಶ್ರೇಯಸ ಪಾಟೀಲ ಮತ್ತು ಅತ್ಯುತ್ತಮ ವಿದ್ಯಾರ್ಥಿನಿ ಎಂದು ಶ್ರೇಯಾ ರಾಯಮಾನೆ ಅವರನ್ನು ಘೋಷಿಸಲಾಯಿತು. 

ಮಹಾವಿದ್ಯಾಲಯದ ಬೋಧಕ-ಬೋಧಕೇತರ ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಹಾಗೂ ಪಾಲಕರು ಉಪಸ್ಥಿತರಿದ್ದರು.