ಬೆಳಗಲಿಯಲ್ಲಿ 22ರಂದು ರನ್ನ ವೈಭವ: ಪೂರ್ವಭಾವಿ ಸಭೆ

Glory of Run on 22nd in Belagali: Preliminary meeting

ಬೆಳಗಲಿಯಲ್ಲಿ 22ರಂದು ರನ್ನ ವೈಭವ: ಪೂರ್ವಭಾವಿ ಸಭೆ 

ರನ್ನ ಬೆಳಗಲಿ 08: ಫೆಬ್ರುವರಿ ತಿಂಗಳ 22, 23 ಮತ್ತು 24 ರಂದು ನಡೆಯಲಿರುವ ರನ್ನ ವೈಭವ - 2025 ಕಾರ್ಯಕ್ರಮದ ಪೂರ್ವಭಾವಿ ಸಭೆ ಸಮೀಪದ ರನ್ನ ಬೆಳಗಲಿ ಪಟ್ಟಣದ ಬಂದಲಕ್ಷ್ಮಿ ದೇವಸ್ಥಾನದಲ್ಲಿ ಶುಕ್ರವಾರ ಜಮಖಂಡಿ ಉಪ ವಿಭಾಗಾಧಿಕಾರಿ ಶ್ವೇತಾ ಬೀಡಿಕರ ಅಧ್ಯಕ್ಷತೆಯಲ್ಲಿ ನಡೆಯಿತು. 

ಸಭೆಯಲ್ಲಿ ಬೆಳಗಲಿ ಪಟ್ಟಣ ಹಾಗೂ ಸುತ್ತಮುತ್ತಲಿನ ನೂರಾರು ಮುಖಂಡರು ಉಪಸ್ಥಿತರಿದ್ದು, ಇದೆ 11 ರಂದು ರನ್ನ ಬೆಳಗಲಿ ಪಟ್ಟಣದಲ್ಲಿ (77 ಹಳ್ಳಿ, ಪಟ್ಟಣಗಳಲ್ಲಿ ಸಂಚರಿಸಲಿರುವ) ರನ್ನ ವೈಭವ ರಥೋತ್ಸವ ಮೆರವಣಿಗೆಗೆ ಚಾಲನೆ ಹಾಗೂ 22 ಕ್ಕೆ ನಡೆಯಲಿರುವ ಅದ್ಧೂರಿ ರನ್ನ ವೈಭವ ಆರಂಭ ಕಾರ್ಯಕ್ರಮದ ಯಶಸ್ಸಿಗೆ ಸಭೆಯಲ್ಲಿ ಅನೇಕರು ತಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ಹಂಚಿಕೊಂಡರು. 

ಎಲ್ಲರ ಅಭಿಪ್ರಾಯಗಳನ್ನು ಆಲಿಸಿದ ಉಪವಿಭಾಗಾಧಿಕಾರಿಗಳು, ಜಿಲ್ಲಾಡಳಿತ ಮತ್ತು  ಜಮಖಂಡಿ ಉಪವಿಭಾಗ ವ್ಯಾಪ್ತಿಯ ನಮ್ಮೆಲ್ಲ ಅಧಿಕಾರಿಗಳು ಹಾಗೂ ಪೋಲಿಸ್ ಇಲಾಖೆ ವರಿಷ್ಠರು, ಸಿಬ್ಬಂದಿಗಳು ಹೆಚ್ಚಿನ ಶ್ರಮ ವಹಿಸಿ ರನ್ನ ವೈಭವ ಕಾರ್ಯಕ್ರಮವನ್ನು ಯಶಸ್ವಿಗೊಳಿಸುತ್ತೇವೆ. ಆದರೆ ಈ ಯಶಸ್ಸಿಗೆ ಸ್ಥಳೀಯರ ಸಹಕಾರ ಬಹಳ ಅತ್ಯವಶ್ಯವಾಗಿದ್ದು, ತಾವು ತನು, ಮನ, ಧನ ಮೂಲಕ ತಮ್ಮ ಸಹಕಾರ ನೀಡಬೇಕು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು. 

ಜಮಖಂಡಿ ಡಿವಾಯ್ ಎಸ್ ಪಿ ಶಾಂತವೀರ. ಇ ಮಾತನಾಡಿ, 20 ರಂದು ನಡೆಯಲಿರುವ ರನ್ನ ರಥೋತ್ಸವ ಮೆರವಣಿಗೆಯಲ್ಲಿ ಕನಿಷ್ಠ 2 ರಿಂದ 3 ಸಾವಿರ ಜನ, 22 ರಂದು ಬಂದಲಕ್ಷ್ಮಿ ಸಾಂಸ್ಕೃತಿಕ ಮೈದಾನದಲ್ಲಿ ಜರುಗುವ ರನ್ನ ವೈಭವ ಕಾರ್ಯಕ್ರಮದ ಆರಂಭಿಕ ಸಮಾರಂಭದಲ್ಲಿ 10 ಸಾವಿರ ಜನ ಸೇರಬಹುದು ಎಂದು ಅಂದಾಜು ಹಾಕಿದರು.  

ಇದಕ್ಕೆ ಪೂರಕವಾಗಿ ಮಾತನಾಡಿದ ಅವರು, ಮಹಾಲಿಂಗಪುರ ಹಾಗೂ ಮುಧೋಳ, ಇನ್ನಿತರ ಕಡೆಗಳಿಂದ ಬರುವ ವಾಹನಗಳಿಗೆ ಬೇರೆ ಮಾರ್ಗ ಕಲ್ಪಿಸಿ ಕಾರ್ಯಕ್ರಮಕ್ಕೆ ಆಗಮಿಸುವ ಜನತೆಗೆ ದಾರಿ ಸುಗಮಗೊಳಿಸುತ್ತೇವೆ. ಇದರಿಂದ ಯಾವುದೇ ಗೊಂದಲವುಂಟಾಗುವುದಿಲ್ಲ. ಯಾರಿಗೂ ತೊಂದರೆಯಾಗದಂತೆ ನಾವು ಪಾರ್ಕಿಂಗ್ ಸ್ಥಳಗಳನ್ನು ಗುರುತಿಸುತ್ತೇವೆ, ಎಂತಹ ಪ್ರಭಾವಿಗಳಿದ್ದರೂ ಅಲ್ಲಿಯೇ ಪಾರ್ಕಿಂಗ್ ಮಾಡಬೇಕು. ಇದಕ್ಕೆ ಎಲ್ಲರ ಸಹಕಾರ ಅಗತ್ಯ ಮತ್ತು ಭದ್ರತೆ ದೃಷ್ಟಿಯಿಂದ ಪಟ್ಟಣದ ಕೆಲವು ಕಡೆಗಳಲ್ಲಿ ಹಾಗೂ ಪಾರ್ಕಿಂಗ್ ಸ್ಥಳಗಳಲ್ಲಿ ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಲು ಉದ್ದೇಶಿಸಲಾಗಿದೆ. ಇದಕ್ಕೆ ಪಟ್ಟಣದ ಜನತೆ ಆರ್ಥಿಕ ಬೆಂಬಲ ನೀಡುವಂತೆ ಕೋರಿದರು. 

ಪಟ್ಟಣದ ಅನೇಕ ಮುಖಂಡರು ಅತಿಥಿ ಭೋಜನ ಕುರಿತು ತಮ್ಮ ಅಭಿಪ್ರಾಯಗಳನ್ನು ತಿಳಿಸಿದರು. ಕೊನೆಯದಾಗಿ ಮುಖಂಡರು ಅನ್ನ, ಸಾರು ಮತ್ತು ಸಿರಾ ಮಾಡುವ ಕುರಿತು ಅಂತಿಮ ನಿರ್ಧಾರವನ್ನು ಕೈಗೊಂಡರು. ಇದಕ್ಕೆ ಆರ್ಥಿಕ ಬಲದ ಪ್ರಶ್ನೆ ಉದ್ಭವಿಸಿದಾಗ ಮುಖಂಡ ಪ್ರವೀಣ ಪಾಟೀಲ್ ಮಾತನಾಡಿ ಊರಿನ ಸಾರ್ವಜನಿಕರಿಂದ ಸೇರಿದ ಹಣ ಸಾಲದೇ ಹೋದರೆ ಆ ಕೊರತೆಯನ್ನು ನಾವು ನೀಗಿಸುತ್ತೇವೆ. ತಾವೆಲ್ಲರೂ ಜಾತಿ, ಮತ, ಪಂಥ ಪಕ್ಷಗಳನ್ನು ಮರೆತು ಈ ರನ್ನ ವೈಭವ ಕಾರ್ಯಕ್ರಮ ಆರಂಭವನ್ನು ಯಶಸ್ವಿಗೊಳಿಸೋಣವೆಂದು ಊರಿನ ಪ್ರಮುಖರಲ್ಲಿ ವಿನಂತಿಸಿದರು. 

ಪಿಎಸೈ ಅಜೀತ ಪಾಟೀಲ, ರಬಕವಿ-ಬನಹಟ್ಟಿ ಈರ​‍್ಪ ಕಿತ್ತೂರ, ತಹಶೀಲ್ದಾರ್ ಗೀರೀಶ ಸ್ವಾದಿ, ಸದಾಶಿವ ಗೂರೂಜಿ, ಪಟ್ಟಣದ ಹಿರಿಯರಾದ ಚಿಕ್ಕಪ್ಪ ನಾಯಕ, ಪಂಡಿತ ಪೂಜಾರ, ಶಿವನಗೌಡ ಪಾಟೀಲ, ಸಿದ್ದು ಪಾಟೀಲ, ಈರ​‍್ಪ ಕಿತ್ತೂರ, ಪ್ರವೀಣ ಪಾಟೀಲ, ಸಿದ್ದು ಸಾಂಗ್ಲಿಕರ್, ರಾಮಣ್ಣ ಕೊಣ್ಣೂರ, ಸದಾಶಿವ ಸಂಕ್ರಟ್ಟಿ ರಾಚಯ್ಯ ಸಾಲಿಮಠ, ಮೋನಪ್ಪ ಲೋಹಾರ, ಶಿವಪ್ಪ ಮಂಟೂರ, ಮಹಾದೇವಪ್ಪ ಮುರನಾಳ, ಸದಾಶಿವ ಸಂಕ್ರಟ್ಟಿ ಸಂಗಪ್ಪ ಅಮಾತಿ, ಮುಬಾರಕ್ ಅತ್ತಾರ, ರಾಘವೇಂದ್ರ ನೀಲನ್ನವರ ಸೇರಿದಂತೆ ಪಪಂ ಸದಸ್ಯರು, ಮುಧೋಳ ತಾಲೂಕಿನ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.