ಯಾರೇ ನಿಧನರಾದರೂ ಮರಣದ ಬಗ್ಗೆ ಕುರಿತು ಸ್ಪಷ್ಟ ಮಾಹಿತಿ ನೀಡಿ

ಲೋಕದರ್ಶನ ವರದಿ

ಮುದ್ದೇಬಿಹಾಳ 15: ತಾಲ್ಲೂಕಿನಾದ್ಯಂತ ಪಟ್ಟಣದಲ್ಲಿ ಹಾಗೂ ಗ್ರಾಮದಲ್ಲಿ ಯಾರೇ ನಿಧನರಾದರೂ ಈ ಬಗ್ಗೆ ಸಂಬಂಧಿಸಿದವರಿಗೆ ಮರಣದ ಕುರಿತು ಸ್ಪಷ್ಟ ಮಾಹಿತಿ ನೀಡಬೇಕೆಂದು ತಹಸೀಲ್ದಾರ್ ಜಿ.ಎಸ್.ಮಳಗಿ ತಿಳಿಸಿದರು. 

ಅವರು ಬುಧವಾರ ತಹಸೀಲ್ದಾರ್ ಕಚೇರಿಯ ಸಭಾಭವನದಲ್ಲಿ ಕೊರೊನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ನಿರ್ಣಯದ ಮೇರೆಗೆ ಬಂದ ಆದೇಶವನ್ನು ಪಾಲಿಸುವ ಕುರಿತು ನಡೆದ ಸಭೆಯಲ್ಲಿ ಮಾತನಾಡಿದರು. 

ಕೊರೊನಾ ಸೊಂಕಿನಿಂದ ಮೃತನಾದವರ ಬಗ್ಗೆ ವದಂತಿಗಳನ್ನು ಹಬ್ಬದಂತೆ ಮಾಡಲು ಹಾಗೂ ಒಂದೊಮ್ಮೆ ಮೃತನಾದವರು ಕೊರೊನಾ ಸೊಂಕಿನಿಂದಲೇ ಮೃತರಾಗಿದ್ದರೆ ಮುಂಚಿತವಾಗಿ ಅಗತ್ಯ ಕ್ರಮ ತೆಗೆದುಕೊಳ್ಳಲು ಈ ಮಾಹಿತಿ ಸಂಗ್ರಹ ಅಗತ್ಯವಾಗಿ ನಡೆಯಬೇಕೆಂದು ಅವರು ತಿಳಿಸಿದರು. ಗ್ರಾಮೀಣ ಮಟ್ಟದಲ್ಲಿ ಜನನ-ಮರಣ ನೋಂದಣಾಧಿಕಾರಿಗಳಾದ ಗ್ರಾಮ ಲೆಕ್ಕಿಗರು, ಪುರಸಭೆ ವ್ಯಾಪ್ತಿಯಲ್ಲಿ ಆರೋಗ್ಯ ನಿರೀಕ್ಷಕರು ಮರಣದ ಮಾಹಿತಿಯನ್ನು ಭರ್ತಿ ಮಾಡಬೇಕು. ಇದಕ್ಕೆ ಪಂಚನಾಮಾ ವರದಿ ತಯಾರಿಸಿ, ಅದಕ್ಕೆ ಪಂಚ ಜನರ ಸಹಿ ಮಾಡಿಸಿ ಸಮೀಪದ ಆರೋಗಾಧಿಕಾರಿಗಳ ಸಹಿ ಮಾಡಿಸಿ ವರದಿ ನೀಡಬೇಕು. ತಹಸೀಲ್ದಾರ್, ಮುಖ್ಯಾಧಿಕಾರಿಗಳು ಹಾಗೂ ವೈದ್ಯಾಧಿಕಾರಿಗಳು ಪ್ರತಿ ಎರಡು ದಿನಗಳಿಗೊಮ್ಮೆ ಮೇಲಧಿಕಾರಿಗಳಿಗೆ ವರದಿ ಸಲ್ಲಿಸಬೇಕು. ಈ ವಿಷಯದಲ್ಲಿ ಬೇಜವಾಬ್ದಾರಿ ತೋರಿಸಿದರೆ ಸಾಂಕ್ರಾಮಿಕ ರೋಗ ಕಾಯ್ದೆ 1897 ಯಂತೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು. ಸಭೆಯಲ್ಲಿ  ಪುರಸಭೆ ಮುಖ್ಯಾಧಿಕಾರಿ ಗೋಪಾಲ ಕಾಸೆ, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಸತೀಶ ತಿವಾರಿ, ಸಿ.ಪಿ.ಐ. ಆನಂದ ವಾಗಮೋಡೆ ಸೇರಿದಂತೆ ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಿಗರು ಪಾಲ್ಗೊಂಡಿದ್ದರು.