ಮಕ್ಕಳಿಗೆ ಶಿಕ್ಷಣದ ಆಸ್ತಿ ನೀಡಿ : ಭಟ್ಟ ಪ್ರಸಾದ್
ಕಂಪ್ಲಿ 24: ಆಧುನಿಕ ಭಾರತದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಮಹತ್ವವಿದ್ದು, ಪೋಷಕರು ಮಕ್ಕಳಿಗೆ ಆಸ್ತಿ ಮಾಡುವ ಬದಲು ಮಕ್ಕಳೇ ಶಿಕ್ಷಣದ ಆಸ್ತಿಯನ್ನಾಗಿ ರೂಪಿಸಿದರೆ ಭವಿಷ್ಯ ಉಜ್ವಲವಾಗಿರುತ್ತದೆ ಎಂದು ಪುರಸಭೆ ಅಧ್ಯಕ್ಷ ಭಟ್ಟ ಪ್ರಸಾದ್ ಹೇಳಿದರು. ಇಲ್ಲಿನ ಕೊಟ್ಟಾಲ್ ರಸ್ತೆಯಲ್ಲಿರುವ ವಿನೂತನ ಮಹಿಳಾ ಪದವಿ ಮಹಾವಿದ್ಯಾಲಯ ಹಾಗೂ ಮದರ್ ತೆರೇಸಾ ಕಲಾ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ಕಾಲೇಜು ವಾರ್ಷಿಕೋತ್ಸವ ಮತ್ತು ಅಂತಿಮ ವರ್ಷದ ವಿದ್ಯಾರ್ಥಿನಿಯರ ಬೀಳ್ಕೊಡಿಗೆ ಸಮಾರಂಭ ಉದ್ಘಾಟಿಸಿ ಮಾತನಾಡಿ, ಹೆಣ್ಮಕ್ಕಳಿಗೆ ಗುಣಮಟ್ಟದ ವಿದ್ಯೆ ನೀಡುವ ಹಿತದೃಷ್ಠಿಯಿಂದ ಕಂಪ್ಲಿ ಪಟ್ಟಣದಲ್ಲಿ ವಿವಿಎಸ್‌ಎಸ್ ಸಂಸ್ಥೆಯು ಪಿಯುಸಿ ಮತ್ತು ಪದವಿ ಕಾಲೇಜು ಸ್ಥಾಪಿಸಿ, ವಿದ್ಯಾರ್ಥಿನಿಯರಿಗೆ ಅನುಕೂಲ ಮಾಡಿಕೊಟ್ಟಿದೆ. ವಿದ್ಯೆ ಎಂಬ ಸಂಪತ್ತು ಹೊಂದಿದಾಗ ಮಾತ್ರ ಜೀವನವು ಸುಂದರವಾಗಿರಲು ಸಾಧ್ಯ. ಹೀಗಾಗಿ ವಿದ್ಯಾರ್ಥಿನಿಯರು ಶಿಕ್ಷಣ ಪಡೆದು, ಉನ್ನತ ಹುದ್ದೆ ಹೊಂದಲು ನಿಟ್ಟಿನಲ್ಲಿ ಮುನ್ನುಗ್ಗಬೇಕು ಎಂದು ಸಲಹೆ ನೀಡಿದರು. ನಂತರ ವಿವಿಎಸ್‌ಎಸ್ ಸಂಸ್ಥೆಯ ಅಧ್ಯಕ್ಷೆ ರಾಜಮ್ಮ ಹುಲುಗಪ್ಪ ಇವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ, ಶಿಕ್ಷಣದ ಜೊತೆ ಜೊತೆಗೆ ಸಂಸ್ಕೃತಿ, ಸಂಸ್ಕಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ನಡೆದಾಗ ಭವಿಷ್ಯ ಉತ್ತಮವಾಗಿರುತ್ತದೆ. ಎಲ್ಲಾ ರಂಗದಲ್ಲಿ ಹೆಣ್ಮಕ್ಕಳು ಪುರುಷರಿಗೆ ಸಮಾನವಾಗಿ ಬೆಳೆಯುತ್ತಿರುವುದು ಒಳ್ಳೆಯ ಬೆಳವಣಿಯಾಗಿದೆ ಎಂದರು. ರಾಮಸಾಗರ ಸ.ಪ್ರೌ.ಶಾಲೆಯ ಸಹ ಶಿಕ್ಷಕ ಸುಗ್ಗೇನಹಳ್ಳಿ ರಮೇಶ ಮಾತನಾಡಿ, ಶಿಕ್ಷಣ ಒಂದೇ ಸಮಸ್ಯೆಗೆ ಮುಕ್ತಿ. ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂಬಂತೆ ಗುರುವಿಗೆ ಇರುವ ಮಹತ್ವವನ್ನು ತಿಳಿಸುತ್ತದೆ. ಒಬ್ಬ ಮನುಷ್ಯ ಗುರುವಿನ ಮಾರ್ಗದರ್ಶನವಿಲ್ಲದೆ ಸರಿಯಾದ ಹಾದಿಯಲ್ಲಿ ಸಾಗಿ ಆತ್ಮೋನ್ನತಿ ಹೊಂದಲಾರ ಎಂಬುದಾಗಿದೆ. ಕಾಲೇಜು ಹಂತದಲ್ಲೇ ಉನ್ನತ ಶಿಕ್ಷಣದೊಂದಿಗೆ ಹೊಸ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದರು. ನೂತನ ಎನ್‌ಎಸ್‌ಎಸ್ ಘಟಕಕ್ಕೆ ಪುರಸಭೆ ಸದಸ್ಯ ಸಿ.ಆರ್.ಹನುಮಂತ ಚಾಲನೆ ನೀಡಲಾಯಿತು. ತದನಂತರ ವೇದಿಕೆ ಮೇಲಿನ ಗಣ್ಯರಿಗೆ ನೆನಪಿನ ಕಾಣಿಕೆ ನೀಡಿ, ಸನ್ಮಾನಿಸಿ ಗೌರವಿಸಲಾಯಿತು. ಮತ್ತು ಅಂತಿಮ ವರ್ಷದ ವಿದ್ಯಾರ್ಥಿನಿಯರು ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಸಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಈ ಸಂದರ್ಭದಲ್ಲಿ ಬಿಡಿಸಿಸಿ ಬ್ಯಾಂಕ್ ಜಿಲ್ಲಾ ನಿರ್ದೇಶಕ ಪಿ.ಮೂಕಯ್ಯಸ್ವಾಮಿ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಉಸ್ಮಾನ್, ಗಾದಿಗನೂರು ಕಾಲೇಜು ಉಪನ್ಯಾಸಕ ಬಿ.ಕುಮಾರಸ್ವಾಮಿ, ಬಿಡಿಸಿಸಿ ಬ್ಯಾಂಕ್‌ನ ಕ್ಷೇತ್ರ ಅಧಿಕಾರಿ ಎನ್.ಬಾಲಪ್ಪ, ಜವಳಿ ವೀರಮ್ಮ ಕಾಲೇಜು ಪ್ರಾಚಾರ್ಯ ಬಸವರಾಜ, ಮದರ್ ತೆರೇಸಾ ಪಿಯುಸಿ ಕಾಲೇಜು ಪ್ರಾಚಾರ್ಯ ಜಿ.ಮಹಬಲೇಶ್ವರ್ಪ, ವಿನೂತನ ಮಹಿಳಾ ಪದವಿ ವಿದ್ಯಾಲಯದ ಪ್ರಾಚಾರ್ಯ ಮದ್ದಾನಪ್ಪ ಬಿಡನಾಳ, ವಿವಿಎಸ್‌ಎಸ್‌ನ ಪ್ರಧಾನ ಕಾರ್ಯದರ್ಶಿ ಜಿ.ಪ್ರಕಾಶ, ಖಜಾಂಚಿ ಮಂಜುನಾಥ, ಸದಸ್ಯರಾದ ಬಸವರಾಜ, ಜಯಮ್ಮ, ಭಾಗ್ಯಮ್ಮ, ಉಪನ್ಯಾಸಕರಾದ ಜಡೆಪ್ಪ, ವಿಜಯಶಂಕರ, ತಿರುಪತಿ, ಗೋಪಾಲ, ನೇಗರಾಜ, ಮಲ್ಲಿಕಾರ್ಜುನ, ರಾಮಪ್ಪ, ಶಿವಕುಮಾರ, ಸುರೇಶ, ಲಕ್ಷ್ಮಿ, ಸುನೀತಾ, ಸುಕನ್ಯ, ಉಮಾ ವಿಜಯಶಂಕರ, ಸೌಮ್ಯ, ಉಮಾ ಸೇರಿದಂತೆ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.