ಮಹಿಳೆಯರ ಸಮಸ್ಯೆಗಳ ವಿರುದ್ಧ ಧ್ವನಿ ಎತ್ತಲು ಸಿದ್ಧರಾಗಿ: ಎಂ.ಎನ್. ಮಂಜುಳಾ
ಬಳ್ಳಾರಿ 08: ಇಂದು ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ(ಂಋಖಖ) ಹಾಗೂ ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್(ಂಋಖಿಗಅ) ಸಂಘಟನೆಗಳ ವತಿಯಿಂದ ಜಂಟಿಯಾಗಿ ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಗಾಂಧಿ ಭವನದಲ್ಲಿ ಹಮ್ಮಿಕೊಳ್ಳಲಾಯಿತು. ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆಯ ರಾಜ್ಯಾಧ್ಯಕ್ಷರಾದ ಎಂ. ಎನ್. ಮಂಜುಳಾ ಅವರು ಮಾತನಾಡುತ್ತಾ ಮಾರ್ಚ್ 8, 1918, ಅಮೆರಿಕದ ನ್ಯೂಯಾರ್ಕ್‌ನ ಸಿದ್ಧ ಉಡುಪಿನ ಕಾರ್ಖಾನೆಯ ಸಾವಿರಾರು ಮಹಿಳಾ ಕಾರ್ಮಿಕರು ಉಸಿರುಗಟ್ಟಿಸುವ ದುಡಿಯುವ ವಾತಾವರಣವನ್ನು ವಿರೋಧಿಸಿ, ಎಂಟು ಗಂಟೆ ದುಡಿಮೆಯ ಅವಧಿಯ ನಿಗದಿಗಾಗಿ, ಸಮಾನ ವೇತನಕ್ಕಾಗಿ, ಹೆರಿಗೆ ರಜೆಯ ಹಕ್ಕಿಗಾಗಿ ಧ್ವನಿಯೆತ್ತಿದರು. ಹೋರಾಟ ನಿರತರಾದ ಮಹಿಳಾ ಕಾರ್ಮಿಕರ ಮೇಲೆ ಅಲ್ಲಿನ ಆಳ್ವಿಕರು ಗುಂಡಿನ ಮಳೆಗರೆದಾಗ ನ್ಯೂಯಾರ್ಕ್ ನ ಬೀದಿಗಳು ಕೆಂಪಾದವು ಈ ಐತಿಹಾಸಿಕ ಹೋರಾಟದ ಸ್ಫೂರ್ತಿ ವಿಶ್ವದಾದ್ಯಂತ ಹಲವು ಮಹಿಳಾ ಹೋರಾಟಗಳಿಗೆ ನಾಂದಿ ಹಾಡಿತು. ಖ್ಯಾತ ಸಮಾಜವಾದಿ ನಾಯಕಿ ಕ್ಲಾರ ಜೆಟ್ ಕಿನ್ 1910 ರ ಅಂತರರಾಷ್ಟ್ರೀಯ ಸಮಾಜವಾದಿ ಮಹಿಳಾ ಕಾಂಗ್ರೆಸ್ ನಲ್ಲಿ ಮಾರ್ಚ್ 8 ನ್ನು ಅಂತರರಾಷ್ಟ್ರೀಯ ಮಹಿಳಾ ದಿನವೆಂದು ಘೋಷಿಸಿದರು. ಅಂದಿನಿಂದ ವಿಶ್ವದಾದ್ಯಂತ ಮಾರ್ಚ್ 8 ಮಹಿಳೆಯರು ತಮ್ಮ ಬೇಡಿಕೆಗಳಿಗಾಗಿ ಧ್ವನಿ ಎತ್ತುವ ದಿನವಾಯಿತು. ಇಂದು ಸ್ತ್ರೀ ಭ್ರೂಣ ಹತ್ಯೆ, ವರದಕ್ಷಿಣೆ ಕೊಲೆ, ಮರ್ಯಾದೆ ಹತ್ಯೆ, ಅತ್ಯಾಚಾರ, ಗುಂಪು ಅತ್ಯಾಚಾರ, ಲೈಂಗಿಕ ದೌರ್ಜನ್ಯ, ಪ್ರೀತಿ ನಿರಾಕರಿಸಿದಳೆಂದು ಆಸಿಡ್ ದಾಳಿ, ಕೊಲೆ....... ಹೀಗೆ ಭ್ರೂಣಾವಸ್ಥೆಯಿಂದ ಹಿಡಿದು ಮಸಣ ಸೇರುವವರೆಗೂ ಹಲವು ಬಗೆಯ ಗೌರವ ಅನಾದರಗಳಿಗೆ ಮಹಿಳೆ ಬಲಿಯಾಗುತ್ತಿದ್ದಾಳೆ. ಜೊತೆಗೆ ಇತ್ತೀಚೆಗೆ ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಕಳಪೆ ಓಷಧಿಯಿಂದಾಗಿ ವರದಿಯಾದ ಬಾಣಂತಿಯರ ಸಾವುಗಳು ಹಾಗೂ ಶಿಶು ಮರಣಗಳು ನಮ್ಮ ಆರೋಗ್ಯ ವ್ಯವಸ್ಥೆಗೆ ಮತ್ತೊಮ್ಮೆ ಕನ್ನಡಿ ಹಿಡಿದಿವೆ. ರಾಜ್ಯದಲ್ಲಿ ಕಳೆದ ಐದು ವರ್ಷಗಳಲ್ಲಿ 3,350 ಬಾಣಂತಿಯರ ಜೀವವನ್ನು ಬಲಿ ತೆಗೆದುಕೊಂಡಿದೆ. ಮಹಿಳೆಯರ ಮತ್ತು ಬಡ ಜನಗಳ ಪಾಲಿಗೆ ನರಕಸದೃಶವಾಗಿರುವ, ಕೊಳೆತು ನಾರುತ್ತಿರುವ ಈ ಬಂಡವಾಳಶಾಹಿ ವ್ಯವಸ್ಥೆಯನ್ನು ಬುಡ ಸಮೇತ ಕಿತ್ತು ಹಾಕುವುದು ಈ ಗಳಿಗೆಯ ಅವಶ್ಯಕತೆಯಾಗಿದೆ. ಈ ನಿಟ್ಟಿನಲ್ಲಿ ಮಹಿಳಾ ದಿನದ ಇತಿಹಾಸದಿಂದ ಎಲ್ಲರೂ ಸ್ಫೂರ್ತಿ ಪಡೆದು ಇಂದಿನ ಮಹಿಳೆಯರ ಹಲವಾರು ಸಮಸ್ಯೆಗಳ ವಿರುದ್ಧ ಧ್ವನಿ ಎತ್ತಲು ಸನ್ನದ್ಧರಾಗಬೇಕು. ಆ ಮೂಲಕ ಮಹಿಳೆಯರಿಗೆ ನೈಜ ಘನತೆ, ಗೌರವ, ಎಲ್ಲಾ ಹಕ್ಕುಗಳನ್ನು ಖಾತ್ರಿಪಡಿಸುವ ಶೋಷಣಾ ರಹಿತ ಹೊಸ ಸಮಾಜವನ್ನು ತರಲು ಶ್ರಮಿಸಬೇಕಾಗಿದೆ ಎಂದು ಕರೆ ನೀಡಿದರು. ಂಋಖಿಗಅ ಯ ಜಿಲ್ಲಾ ಕಾರ್ಯದರ್ಶಿಗಳಾದ ಡಾ. ಎನ್. ಪ್ರಮೋದ್ ಅವರು ಇಂದು ಮನೆಯ ಒಳಗೂ ಹೊರಗೂ ದುಡಿಯುವ ಮಹಿಳೆಯರ ಜೀವನ ದುರ್ಬರವಾಗುತ್ತಿದೆ. ಪರಿಸ್ಥಿತಿ ಹೀಗಿದ್ದರೂ ಕೂಡ ವಾರಕ್ಕೆ 90 ಗಂಟೆ ದುಡಿಯಿರಿ ಅಥವಾ 70 ಗಂಟೆ ದುಡಿಯಿರಿ ಎಂದು ಹೇಳುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇನ್ನು ಮಹಿಳೆಯರು ರಾತ್ರಿ ಪಾಳಿಯಲ್ಲಿ ದುಡಿಯಲು ಸರ್ಕಾರಗಳೇ ನೀತಿಗಳನ್ನು ಮಾಡುತ್ತಿವೆ. ಆಳುವ ಸರ್ಕಾರಗಳು ಈ ದೇಶದ ಬಂಡವಾಳಶಾಹಿಗಳ ಪರ ಎಲ್ಲಾ ನೀತಿಗಳನ್ನು ಬದಲಾಯಿಸುತ್ತಿವೆ. ಇಂತಹ ಜನ ವಿರೋಧಿ, ಬಂಡವಾಳಶಾಹಿ ಸರ್ಕಾರಗಳ ವಿರುದ್ಧ ಧ್ವನಿ ಎತ್ತಲು ಮಹಿಳಾ ದಿನ ಸ್ಫೂರ್ತಿಯಾಗಲಿ ಎಂದು ಹೇಳಿದರು. ನಂತರ ಂಋಖಿಗಅ ಯ ಜಿಲ್ಲಾ ಉಪಾಧ್ಯಕ್ಷರಾದ ಎ. ಶಾಂತಾ ಅವರು ಇಂದು ಅಸಂಘಟಿತ ವಲಯದಲ್ಲಿ ದುಡಿಯುತ್ತಿರುವ ಆಶಾ, ಅಂಗನವಾಡಿ, ಬಿಸಿಊಟ ಕಾರ್ಯಕರ್ತೆಯರು ನಿಗದಿತ ವೇತನ ಸೇರಿದಂತೆ ಯಾವುದೇ ಹಕ್ಕುಗಳು ಇಲ್ಲದೆ ದುಡಿಯುತ್ತಿದ್ದಾರೆ. ಅವರ ಸಮಸ್ಯೆಗಳಿಗೆ ಮಾತ್ರ ಯಾವ ಸರ್ಕಾರಗಳು ಕಿವಿಯಾಗಿಲ್ಲ. ಇಂತಹ ಪರಿಸ್ಥಿತಿಯಲ್ಲಿ ದುಡಿಯುವ ಮಹಿಳೆಯರಿಗೆ ತಮ್ಮ ಹಕ್ಕುಗಳನ್ನು ಗಳಿಸಿಕೊಳ್ಳಲು ಹೋರಾಟ ಒಂದೇ ದಾರಿ ಎಂದು ಪ್ರಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಂಋಖಖ ನ ಜಿಲ್ಲಾಧ್ಯಕ್ಷರಾದ ಈಶ್ವರಿ ಕೆ. ಎಂ. ವಹಿಸಿಕೊಂಡಿದ್ದರು. ನಂತರ ಂಋಖಖ ವತಿಯಿಂದ ಮಹಿಳಾ ದಿನದ ಪ್ರಯುಕ್ತ ಆಯೋಜಿಸಿದ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದ ಹಲವಾರು ಕಾಲೇಜಿನ ವಿದ್ಯಾರ್ಥಿನಿಯರಿಗೆ ಬಹುಮಾನ ಹಾಗೂ ಪ್ರಶಸ್ತಿ ಪತ್ರಗಳನ್ನು ವಿತರಣೆ ಮಾಡಲಾಯಿತು. ಸಂಘಟನೆಗಳ ಪದಾಧಿಕಾರಿಗಳಾದ ವಿದ್ಯಾ, ರೇಖಾ, ಗಿರಿಜಾ, ಸೌಮ್ಯ, ಅಹಲ್ಯ, ಪದ್ಮ, ಗೀತಾ, ಉಮಾದೇವಿ, ಪಾರ್ವತಮ್ಮ, ಪದ್ಮಾ, ಯಾಸ್ಮಿನ್, ವೆಂಕಟಲಕ್ಷ್ಮಿ, ರೇಷ್ಮಾ ಮತ್ತಿತರರು ಹಾಗೆಯೇ ಹಲವಾರು ಕಾಲೇಜಿನ ವಿದ್ಯಾರ್ಥಿನಿಯರು, ಮಹಿಳೆಯರು ತುಂಬಾ ಉತ್ಸಾಹದಿಂದ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.