ಶಶಿಧರ ಬ ಶಿರಸಂಗಿ
ಶಿರಹಟ್ಟಿ 04: ದಿನದಿಂದ ದಿನಕ್ಕೆ ಪಟ್ಟಣ ಬೆಳೆಯುತ್ತಿದ್ದು ಅದರಂತೆಯೇ ಜನಸಂಖ್ಯೆಗೆ ಅನುಗುಣವಾಗಿ ಹಾಗೂ ಅವಶ್ಯಕತೆಗಳಿಗೆ ತಕ್ಕಂತೆಯೂ ವಾಹನಗಳ ಸಂಖ್ಯೆಯೂ ಕೂಡಾ ಹೆಚ್ಚಾಗತೊಡಗಿದೆ. ಶಿರಹಟ್ಟಿಯ ಹಲವಾರು ಕಡೆಗಳಲ್ಲಿ ಸೂಕ್ತವಾದ ವಾಹನ ನಿಲುಗಡೆ ವ್ಯವಸ್ಥೆ ಇಲ್ಲದಿರುವದು ಹಾಗೂ ಇತ್ತೀಚೆಗೆ ಭಾರಿ ವಾಹನಗಳು ಊರ ಪ್ರಮುಖ ಬಝಾರದ ಬೀದಿಗಳಲ್ಲಿಯೇ ಓಡಾತ್ತಿರುವದರಿಂದ ಈ ಟ್ರಾಫಿಕ್ ಜಾಮ್ ಕಿರಿಕಿರಿಗೆ ಮೂಲ ಕಾರಣವಾಗಿದೆ.
ಶಿರಹಟ್ಟಿ ಪಟ್ಟಣವು ತಾಲೂಕು ಕೇಂದ್ರವಾಗಿದ್ದು ದಿನ ನಿತ್ಯ ಜನರು ತಮ್ಮ ಕಚೇರಿ ಕೆಲಸಗಳಿಗೆ ಹಾಗೂ ತಮ್ಮ ದಿನನಿತ್ಯದ ಕೆಲಸಗಳಿಗಾಗಿ ಇಲ್ಲಿಗೆ ಬರುವದು ಸಾಮಾನ್ಯವಾಗಿದೆ. ಇದರ ಜೊತೆ ಜೊತೆಗೆನೇ ಈಗ ಮದುವೆ ಮುಂಜಿಗಳ ಸೀಸನ್ ಆಗಿದ್ದು ಸುತ್ತಲಿನ ಗ್ರಾಮದ ಜನರು ಇಲ್ಲಿಗೆ ತಮ್ಮ ಅವಶ್ಯಕತೆಗಳಿಗನುಸಾರವಾಗಿ ಹಲವಾರು ರೀತಿಯ ಖರೀದಿಗೆ ಬರುತ್ತಾರೆ. ಅವರು ತರುವ ವಾಹನಗಳಿಗೆ ಇಲ್ಲಿ ಸೂಕ್ತವಾದ ನಿಲುಗಡೆ ವ್ಯವಸ್ಥೆ ಇರುವದಿಲ್ಲ. ಆದ್ದರಿಂದ ಬೇಕಾಬಿಟ್ಟಿ ವಾಹನ ನಿಲ್ಲಿಸಲಾಗುತ್ತದೆ. ಇದರಿಂದ ನಿತ್ಯ ಟ್ರಾಫೀಕ್ ಜಾಮಾಗಿ ಉಳಿದವರಿಗೆ ಕಿರುಕುಳ ಹಾಗೂ ಜಗಳ ನಿತ್ಯದ ದೃಶ್ಯವಾಗಿದೆ.
ಸರ್ಕಲ್ಗಳಿಗೆ ಒಬ್ಬನೆ ಪೇದೆ: ಪಟ್ಟಣದ ಮುಖ್ಯ ಸರ್ಕಲ್ಗಳಾದ ನೆಹರು ಸರ್ಕಲ್, ಬಸವೇಶ್ವರ ಸರ್ಕಲ್ ಹಾಗೂ ಗಾಂಧಿ ಸರ್ಕಲ್ಗಳ ಬಳಿ ಜನಜಂಗುಳಿ ತೀರಾ ಹೆಚ್ಚಾಗಿದ್ದೂ ವಾಹನ ಓಡಾಟವು ಹೆಚ್ಚಾಗಿದೆ. ಈ ಮೂರು ವೃತ್ತಗಳಲ್ಲಿ ಟ್ರಾಫೀಕ್ ಜಾಮ ಆದರೆ ನಿಭಾಯಿಸಲು ಒಬ್ಬರೆ ಪೇದೆ ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಓಡಾಡುವ ಸ್ಥಿತಿ ಬಂದೊದಗಿದೆ. ಒಂದು ಸರ್ಕಲ್ದಿಂದಾ ಇನ್ನೊಂದು ಸರ್ಕಲ್ಗೆ ಹೋಗುವಾಗಲೇ ಬೇರೊಂದು ಸರ್ಕಲ್ಲ್ಲಿ ಯಾರಾದರೂ ರಸ್ಥೆಯ ಮಧ್ಯದಲ್ಲಿ ವಾಹನ ನಿಲ್ಲಿ ಟ್ರಾಫಿಕ್ ಜಾಮ್ ಮಾಡಿರುತ್ತಾರೆ. ಅದನ್ನು ಸರಿ ಮಾಡಲು ಹೋದರೆ ಮತ್ತೊಂದೆಡೆ ಜಾಮ್ ಆಗಿಬಿಡುತ್ತದೆ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಇಕ್ಕಟ್ಟಾದ ರಸ್ತೆಗಳು: ಇನ್ನು ನೆಹರು ವೃತ್ತದಿಂದ ಒಂದು ಭಾರಿ ವಾಹನ ಊರ ಮಧ್ಯ ಹೊರಟರೆ ಅದು ಸೊರಟೂರ ಹಳ್ಳದ ದಾರಿ ದಾಟುವವರೆಗು ಎದುರಿಗೆ ಇನ್ನೊಂದು ವಾಹನ ಬಂದರೆ ಮುಗೀತು ಕಥೆ, ಆ ವಾಹನ ಪಾಸ್ ಆಗಬೇಕಾದರೆ ಇನ್ನೊಂದು ವಾಹನ ಸರ್ಕಸ್ ರೀತಿ ಹರಸಾಹಸ ಪಡಬೇಕು. ಇನ್ನು ರಸ್ತೆಯ ಎಡ-ಬಲ ಬದಿಯಲ್ಲಿ ನಿಂತಿರುವ ದ್ವಿಚಕ್ರ ವಾಹನಗಳು. ಅವುಗಳುಗೆ ತೊಂದರೆ ನೀಡಲೆಂದೇ ನಿಂತಂತೆ ಕಾಣುತ್ತದೆ. ಇದು ನಿತ್ಯ ವ್ಯಾಪಾರ ವಹಿವಾಟು ಮಾಡುವ ಅಂಗಡಿ ಮಾಲಿಕರಿಗೆ ತೊಂದರೆ ಉಂಟು ಮಾಡುತ್ತದೆ ಎಂದು ತಮ್ಮ ಅಳಲನ್ನು ಅಂಗಡಿಯವರು ತೊಡಿಕೊಳ್ಳುತ್ತಾರೆ.