ಪರಿಸರ ಸೂಕ್ಷ್ಮ ವಲಯದಲ್ಲಿ ಅನುಮತಿ ನೀಡುವ ಮುನ್ನ ಅರಣ್ಯ ಇಲಾಖೆಯ ಅಭಿಪ್ರಾಯ ಪಡೆಯಿರಿ : ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯ

Get forest department's opinion before giving permission in eco-sensitive zone: District Collector

ಪರಿಸರ ಸೂಕ್ಷ್ಮ ವಲಯದಲ್ಲಿ ಅನುಮತಿ ನೀಡುವ ಮುನ್ನ ಅರಣ್ಯ ಇಲಾಖೆಯ ಅಭಿಪ್ರಾಯ ಪಡೆಯಿರಿ : ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯ 

ಕಾರವಾರ 07:   ಜಿಲ್ಲೆಯಲ್ಲಿನ ಪರಿಸರ ಸೂಕ್ಷ್ಮ ವಲಯಗಳಲ್ಲಿ ಯಾವುದೇ ಕಾಮಗಾರಿ ಅಥವಾ ಚಟುವಟಿಕೆಗಳನ್ನು ಕೈಗೊಳ್ಳಲು ಕಂದಾಯ ಇಲಾಖೆಯಿಂದ ಅನುಮತಿ ನೀಡುವ ಮುನ್ನ ಸಂಬಂದಪಟ್ಟ ವ್ಯಾಪ್ತಿಯ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಲಿಖಿತ ಅಭಿಪ್ರಾಯ ಪಡೆಯುವಂತೆ ಜಿಲ್ಲೆಯ ಎಲ್ಲಾ ತಹಸೀಲ್ದಾರ್ ಗಳಿಗೆ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯ ಸೂಚಿಸಿದರು. 

ಅವರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. 

ಜಿಲ್ಲೆಯಲ್ಲಿ ಕಾಳಿ ಅರಣ್ಯ ಮೀಸಲು, ಶರಾವತಿ ಕಣಿವೆ , ಅತ್ತಿವೇರಿ ಪಕ್ಷಿಧಾಮ ಪ್ರದೇಶಗಳು ಪರಿಸರ ಸೂಕ್ಷ್ಮ ವಲಯಗಳು ಎಂದು ಗುರುತಿಸಲ್ಪಟ್ಟಿದ್ದು, ಈ ಪ್ರದೇಶಗಳಲ್ಲಿ ಕಡ್ಡಾಯವಾಗಿ ನಿರ್ಭಂದಿಸಿರುವ ಕಾಮಗಾರಿಗಳು, ಅನುಮತಿ ನೀಡಬಹುದಾದ ಕಾಮಗಾರಿಗಳ ವಿವರಗಳನ್ನು ಸಂಬಂದಪಟ್ಟ ವ್ಯಾಪ್ತಿಯ ಅರಣ್ಯಾಧಿಕಾರಿಗಳಿಂದ ಪಡೆದು,  ಅಗತ್ಯವಿರುವ ಅನುಮತಿಗಳನ್ನು ನೀಡುವಂತೆ ತಿಳಿಸಿದರು.  

ಕೆನರಾ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ  ವಸಂತರೆಡ್ಡಿ ಮಾತನಾಡಿ, ಜಿಲ್ಲೆಯಲ್ಲಿ ಶೇ.79 ರಿಂದ 80 ರಷ್ಟು ಅರಣ್ಯ ಪ್ರದೇಶವಿದ್ದು, ಪಶ್ಚಿಮ ಘಟ್ಟದಲ್ಲಿ ವಿಶೇಷ ಜೀವ ವೈವಿಧ್ಯತೆ ಇದೆ. ಇವುಗಳನ್ನು ಉಳಿಸಿ ರಕ್ಷಿಸುವಲ್ಲಿ ಅರಣ್ಯ ಮತ್ತು ಕಂದಾಯ ಇಲಾಖೆಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಬೇಕಿದೆ. ಹಲವು ಕಂದಾಯ ದಾಖಲೆಗಳಲ್ಲಿ ಅರಣ್ಯ ಭೂಮಿಯನ್ನು ಸರ್ಕಾರ ಎಂದು ದಾಖಲಿಸಿದ್ದು, ಇಂತಹ ಪ್ರಕರಣಗಳ ಕುರಿತಂತೆ ಅರಣ್ಯ ಇಲಾಖೆಯೊಂದಿಗೆ ಜಂಟಿಯಾಗಿ ಪರೀಶೀಲಿಸಿ ಅಗತ್ಯ ತಿದ್ದುಪಡಿಗಳನ್ನು ಮಾಡಿಕೊಳ್ಳುವಂತೆ , ಇಲ್ಲವಾದಲ್ಲಿ ಅಂತಹ ಜಮೀನು ಹಂಚಿಕೆ ಮಾಡಿದಲ್ಲಿ ಮುಂದೆ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ತಿಳಿಸಿದರು. 

ಸಭೆಯಲ್ಲಿ ಹಂಗಾಮಿ ಲಾಗಣಿಗೆ ನೀಡಿದ ಪ್ರಕರಣ ಹಾಗೂ ಖಾಯಂ ಲಾಗಣಿ ಮಂಜೂರಿಸಿದ ಪ್ರಕರಣಗಳ ಬಗ್ಗೆ, 1978 ರ ಪೂರ್ವದ ಅರಣ್ಯ ಅತಿಕ್ರಮಣ ಸಕ್ರಮ ಕುರಿತು, ಅರಣ್ಯ ಪ್ರದೇಶದ ಇಂಡಿಕರಣ ಬಾಕಿ, ಪರಿಭಾವಿತ ಅರಣ್ಯ ಪ್ರದೇಶಗಳ (ಡೀಮ್ಡ್‌ ಫಾರೆಸ್ಟ್‌)ವಿವರ, ಬೆಟ್ಟ ಜಮೀನುಗಳ ಬಗ್ಗೆ. ಡಿಸ್ ಫಾರೆಸ್ಟ್‌ ಜಮೀನು ಬಗ್ಗೆ, ಪರಿಶಿಷ್ಠ ವರ್ಗ ಹಾಗೂ ಓ.ಟಿ.ಎಫ್‌.ಟಿ ಅರ್ಜಿಗಳ ಕುರಿತಂತೆ ವಿಸ್ತೃತ ಚರ್ಚೆ ನಡೆಯಿತು. 

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ಜಿಲ್ಲೆಯ ಎಲ್ಲಾ ಉಪ ವಿಭಾಗಾಧಿಕಾರಿಗಳು ಮತ್ತು ತಹಸೀಲ್ದಾರ್ ಗಳು ಉಪಸ್ಥಿತರಿದ್ದರು.