ಸ್ಥಿರ ಸರ್ಕಾರಕ್ಕಾಗಿ ಇತರರನ್ನು ಅವಲಂಬಿಸುವ ಸಂಕಷ್ಟ ತಪ್ಪಿಸಲು 15 ಸ್ಥಾನ ಗೆಲ್ಲಿಸಿ: ಯಡಿಯೂರಪ್ಪ ಮನವಿ

Yeddyurappa

ಕಾಗವಾಡ, ಡಿ.3-  ಈ ಹಿಂದೆ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಸ್ಪಷ್ಟ ಬಹುಮತ ಇರಲಿಲ್ಲ. ಹಾಗಾಗಿ ಇತರರನ್ನು ಅವಲಂಬಿಸುವ ಸಂಕಷ್ಟ ಬಂದಿತ್ತು. ಆದರೆ ಈ ಬಾರಿ ಉಪ ಚುನಾವಣೆಯಲ್ಲಿ ಸ್ಪಷ್ಟ ಜನಾದೇಶ ನೀಡುವ ಮೂಲಕ ಸ್ಥಿರ ಸರ್ಕಾರ ನೀಡಲು ಮತದಾರರು ಸಹಕಾರ ನೀಡಬೇಕು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮನವಿ ಮಾಡಿದ್ದಾರೆ.

ಕಾಗವಾಡದ ಕ್ಷೇತ್ರದ ಕೆಂಪವಾಡದಲ್ಲಿ ಮಾತನಾಡಿದ ಅವರು, ಎರಡು ದಿನ ಕ್ಷೇತ್ರದಲ್ಲಿ ಪ್ರಚಾರ ಮಾಡಿದ್ದೇನೆ. ಕ್ಷೇತ್ರದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಹಳ ಸಂತೋಷದಿಂದ ಕ್ಷೇತ್ರದಿಂದ ಹೊರಡುತ್ತಿದ್ದೇನೆ. ಎಲ್ಲ ಕ್ಷೇತ್ರಗಳ ಬಗ್ಗೆ ವರದಿ ತರಿಸಿಕೊಂಡಿದ್ದು, ಎಲ್ಲವೂ ಸಕಾರಾತ್ಮಕವಾಗಿದೆ, ಬಿಜೆಪಿ ಹೆಚ್ಚಿನ ಸ್ಥಾನ ಗೆಲ್ಲಲಿದೆ ಎಂದರು.

ನಿನ್ನೆ  ಈ ಕ್ಷೇತ್ರದಲ್ಲಿ ಸಿಕ್ಕಿದ ಜನಬೆಂಬಲ ನೋಡಿ ಆಶ್ಚರ್ಯ ಆಗಿದೆ. ಮಳೆಯ ನಡುವೆಯೂ ಜನ ಸೇರಿದ್ದು ಬಿಜೆಪಿಯನ್ನು ಬೆಂಬಲಿಸುವ ಸೂಚನೆ ನೀಡಿದೆ. ಎಲ್ಲ ಸಮುದಾಯದ ಮುಖಂಡರ ಜೊತೆ ಚರ್ಚೆ ಮಾಡಿದ್ದು ಇವೆಲ್ಲವನ್ನು ನೋಡುವಾಗ ಬಿಜೆಪಿ ಅಭ್ಯರ್ಥಿ 25 ಸಾವಿರ ಮತಗಳ ಅಂತರದಿಂದ ಗೆಲ್ಲುವ ಸಾಧ್ಯತೆ ಇದೆ ಎಂದರು.

ಈ ಹಿಂದೆ ಸಿಎಂ ಆಗಿದ್ದಾಗ ಸುಸೂತ್ರವಾಗಿ  ಸಂತೋಷವಾಗಿ ಆಡಳಿತ ನಡೆಸಲು ಬಹುಮತದ ಕೊರತೆಯಿಂದಾಗಿ ಆಗಿರಲಿಲ್ಲ.  ಈಗ ಉಸಿರುಗಟ್ಟಿಸುವ  ಸಂದರ್ಭದಲ್ಲಿ ಮುಖ್ಯಮಂತ್ರಿ ಆಗಿದ್ದೇನೆ. ಪ್ರತಿ ಬಾರಿಯೂ ಮುಖ್ಯಮಂತ್ರಿಯಾಗಿದ್ದಾಗ ಬಹುಮತ ಕಡಿಮೆಯಾಗಿ ಅವರಿವರ ಮೇಲೆ ಅವಲಂಬಿಸಿ ಆಡಳಿತ ನಡೆಸುವ ಪರಿಸ್ಥಿತಿ ಬಂದಿತ್ತು. ಈಗ 15 ಸ್ಥಾನಗಳನ್ನು ಗೆದ್ದರೆ ಮೂರುವರೆ ವರ್ಷ ಸುಸೂತ್ರವಾಗಿ ಸರ್ಕಾರದ ನಡೆಸಲು ಅನುಕೂಲ ಅಗುತ್ತದೆ, ಇವರೆಲ್ಲರ ಕಾಟ ತಪ್ಪುತ್ತದೆ. ಅದಕ್ಕೆ  ಜನರಿಗೆ ಆಶೀರ್ವಾದ ಮಾಡಿ ಎಂದು ಜನರನ್ನು ಮನವಿ ಮಾಡುತ್ತಿದ್ದೇನೆ ಎಂದು ಹೇಳಿದರು.

ಆಯುರ್ವೇದ, ಹೋಮಿಯೋಪತಿ ವೈದ್ಯರು ಅಲೋಪಥಿ ಮೆಡಿಸಿನ್ ನೀಡಬಹುದು ಎಂಬ ಆರೋಗ್ಯ ಸಚಿವ ಶ್ರೀರಾಮುಲು ಹೇಳಿಕೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ಈ ಬಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಹೇಳಿದರು. 

ಲಿಂಗಾಯತ ಸಮುದಾಯ ಮುಖಂಡರ ಜೊತೆ ಸಭೆ ನಡೆಸಿದ ವಿಚಾರದ ಬಗ್ಗೆ ಮಾತನಾಡಿದ ಅವರು, ಎಲ್ಲರ ಜೊತೆ ಚರ್ಚೆ ಮಾಡಿದ್ದೇನೆ. ಉತ್ತಮ ಪ್ರತಿಕ್ರಿಯೆ, ಬೆಂಬಲ ಸಿಕ್ಕಿದೆ. ಅದೇ ರೀತಿ ಲಿಂಗಾಯತ ಸಮುದಾಯದ ಮುಖಂಡರ ಸಭೆ ನಡೆಸಿದ್ದೇನೆ ಎಂದು ಸಮರ್ಥಿಸಿಕೊಂಡರು.

ಕಾಂಗ್ರೆಸ್ ಮುಖಂಡ ಡಿ.ಕೆ. ಶಿವಕುಮಾರ್ ಐಟಿ  ನೋಟಿಸ್ ನೀಡಿದ ಬಗ್ಗೆ ಕೇಳಿದ ಪ್ರಶ್ನೆಗೆ ಈ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದರು.