ಜಾತ್ರಾ ಮಹೋತ್ಸವ ನಿಮಿತ್ಯ ಹುಲಿಗೆಮ್ಮ ದೇವಿಯ ಗಂಗೆಸ್ಥಳ ಮೆರವಣಿಗೆ
ಕಂಪ್ಲಿ 17: ಪಟ್ಟಣದ 23ನೇ ವಾರ್ಡಿನ ಸಕ್ಕರೆ ಕಾರ್ಖಾನೆ ಬಳಿಯಲ್ಲಿರುವ ಸಹಸ್ರಾರು ಭಕ್ತರ ಆರಾಧ್ಯ ದೈವವಾಗಿರುವ ಹುಲಿಗೆಮ್ಮ ದೇವಿಯ ಕೇರಿ ಜಾತ್ರಾ ಮಹೋತ್ಸವ ಹಾಗೂ ಕುಂಭೋತ್ಸವ ನಿಮಿತ್ಯ ಗಂಗೆಸ್ಥಳ ಮೆರವಣಿಗೆ ಅತ್ಯಂತ ಸಡಗರ ಸಂಭ್ರಮದಿಂದ ಸೋಮವಾರ ಜರುಗಿತು. ಇಲ್ಲಿನ ಎಲ್‌ಎಲ್‌ಸಿ ಕಾಲುವೆ ತಟದಲ್ಲಿ ಗಂಗೆಪೂಜೆ ಸಲ್ಲಿಸಿದ ನಂತರ ಕಳಸಾರೋಹಣ, ಸುಮಂಗಲಿಯರ 101 ಕಳಸದೊಂದಿಗೆ ಮೆರವಣಿಗೆ ವಿಜೃಂಭಣೆಯಿಂದ ನೆರವೇರಿತು. ಈ ಮೆರವಣಿಗೆಯಲ್ಲಿ ಡೊಳ್ಳು, ಜೋಗತಿಯರು ಸೇರಿದಂತೆ ವಿವಿಧ ಕಲಾ ಪ್ರಕಾರಗಳು ರಂಗು ನೀಡಿದವು. ರಸ್ತೆಯುದ್ದಕ್ಕೂ ಹುಲಿಗೆಮ್ಮ ದೇವಿಯ ಸ್ಮರಣೆ ಜತೆಗೆ ಉಧೋ ಉಧೋ ಹುಲಿಗೆಮ್ಮ ಎಂಬ ಘೋಷಣೆಗಳು ಮೊಳಗಿದವು. ಜಾತ್ರಾ ಪ್ರಯುಕ್ತ ಇಲ್ಲಿನ ದೇವಿ ಸನ್ನಿದಾನದಲ್ಲಿ ಪಂಚಾಮೃತ ಅಭಿಷೇಕ, ಗಣಪತಿಪೂಜೆ, ಮಹಾಮಂಗಳಾರತಿ ಸೇರಿದಂತೆ ವಿವಿಧ ಧಾರ್ಮಿಕ ಕೈಂಕಾರ್ಯಗಳು ಶ್ರದ್ಧೆಯಿಂದ ನೆರವೇರಿದವು.ಈ ಸಂದರ್ಭದಲ್ಲಿ ಎಸ್ಡಿಎಂಸಿ ಅಧ್ಯಕ್ಷ ಜಿ.ನಾಗರಾಜ, ಹುಲಿಗೆಮ್ಮ ದೇವಿ ಸೇವಾ ಸಮಿತಿ ಅಧ್ಯಕ್ಷ ಜಿ.ಪ್ರಸಾದ್‌ರಾವ್, ಮುಖಂಡರಾದ ಆಸಾದಿ ಪೆದ್ದಣ್ಣ, ಹೆಚ್.ಹೊನ್ನೂರ್ಪ, ಎನ್.ಓಬಳೇಶ, ಎನ್.ಸೋಮಶೇಖರ, ಬಿ.ಸುರೇಶಕುಮಾರ, ಹೆಚ್.ಮಾರೇಶ ಸೇರಿದಂತೆ ಹುಲಿಗೆಮ್ಮಕ್ಯಾಂಪ್ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಭಾಗವಹಿಸಿದ್ದರು.