ಗದಗ 16: ಲೋಕಸಭಾ ಮತದಾನ ಸಲುವಾಗಿ ಜಿಲ್ಲೆಯಲ್ಲಿ ದುರ್ಬಲ(ವರ್ನೇಬಲ್) ಹಾಗೂ ಅತೀ ಸೂಕ್ಷ್ಮವೆಂದು ಗುರುತಿಸಿದ ಮತಗಟ್ಟೆಗಳಲ್ಲಿ ಸೂಕ್ಷ್ಮ ವೀಕ್ಷಕರು ಆಯೋಗದ ಕಣ್ಣು ಮತ್ತು ಕಿವಿಯಾಗಿ ದಕ್ಷತೆಯಿಂದ ಕಾರ್ಯ ನಿರ್ವಹಿಸಲು ಹಾವೇರಿ ಲೋಕಸಭಾ ಕ್ಷೇತ್ರದ ಸಾಮಾನ್ಯ ವೀಕ್ಷಕ ಡಾ. ಅಖ್ತರ್ ರಿಯಾಜ್ ತಿಳಿಸಿದರು.
ಗದಗ ಜಿ.ಪಂ. ಸಭಾಂಗಣದಲ್ಲಿ ಸೂಕ್ಷ್ಮ ವೀಕ್ಷಕರಿಗಾಗಿ ಜರುಗಿದ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಮತದಾನ ದಿನದಂದು ಮತಗಟ್ಟೆಯಲ್ಲಿ ಮುಂಜಾನೆ 5-30ಗಂಟೆಗೆ ಹಾಜರಿದ್ದು ಮತದಾನ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಅತೀ ಎಚ್ಚರಿಕೆಯಿಂದ ಮತದಾನದ ಎಲ್ಲ ಪ್ರಕ್ರಿಯೆಗಳನ್ನು ಎಚ್ಚರಿಕೆಯಿಂದ ಗಮನಿಸಬೇಕು. ಪ್ರಾರಂಭದಲ್ಲಿ ಜರುಗುವ ಅಣಕು ಮತದಾನದ ಚೀಟಿಗಳನ್ನು ಮತಗಟ್ಟೆ ಅಧಿಕಾರಿಗಳು ನಿಜ ಮತದಾನ ಆರಂಭಕ್ಕೆ ಮುನ್ನ ತೆಗೆದು ಲಕೋಟೆಯಲ್ಲಿ ಹಾಕಿಡುವುದನ್ನು ಖಚಿತಪಡಿಸಿಕೊಳ್ಳಬೇಕು. ವಿಶೇಷವಾಗಿ ಮತದಾನ ಆರಂಭಿಕ ಎರಡು ಹಾಗೂ ಕೊನೆಯ ಒಂದು ಗಂಟೆಯಲ್ಲಿ ಬಹು ಎಚ್ಚರದಿಂದ ವೀಕ್ಷಣೆ ಕಾರ್ಯ ನಿರ್ವಹಿಸಬೇಕು. ಮತದಾನದ ವೇಳೆ ಗಂಭೀರ ಸಂಗತಿಗಳು ವ್ಯಕ್ತಿಗಳ ಆಕ್ರಮ ಪ್ರವೇಶ ಸಂಭವಿಸಿದಲ್ಲಿ ತಕ್ಷಣ ಸೆಕ್ಟರ ಅಧಿಕಾರಿಗೆ ಅಥವಾ ಸಾಮಾನ್ಯ ವೀಕ್ಷಕರಿಗೆ ತಕ್ಷಣ ಮಾಹಿತಿ ನೀಡಬೇಕು. ಇವಿಎಂ. ಮತಯಂತ್ರದ ಕಾರ್ಯ ನಿರ್ವಹಣೆ ಮಾಹಿತಿ ಸಂಪೂರ್ಣವಾಗಿ ತಿಳಿದುಕೊಂಡಿರಬೇಕು. ಮತದಾನದ ಕೊನೆಯಲ್ಲಿ ಮತಗಟ್ಟೆ ಅಧಿಕಾರಿಗಳು ಇನ್ನು ಮತದಾನ ಮಾಡಬೇಕಿರುವವರಿಗೆ ನೀಡಿರುವ ಚೀಟಿಗಳ ಕುರಿತು ಅವರು ಮತದಾನ ಪೂರ್ಣಗೊಳಿಸಿದ ಕುರಿತು ಗಮನಿಸಬೇಕು. ಸಂಬಂಧಿತ ವರದಿಗಳನ್ನು ನಿಗದಿತ ಸಮಯದಲ್ಲಿ ಕಳಿಸಬೇಕು. ಚುನಾವಣಾ ವಿಭಾಗ ನೀಡಿದ ಗುರುತಿನ ಚೀಟಿ ಕಡ್ಡಾಯವಾಗಿ ಧರಿಸಬೇಕು. ಅಂದು ತಮ್ಮ ಮೊಬೈಲನ್ನು ಸದಾ ಕಾರ್ಯನಿರ್ವಹಿಸುವ ಸ್ಥಿತಿಯಲ್ಲಿ ಇಟ್ಟುಕೊಳ್ಳುವದು ಕಡ್ಡಾಯವಾಗಿದೆ ಎಂದು ಡಾ.ರಿಯಾಜ್ ಅಖ್ತರ್ ನುಡಿದರು.
ಗದಗ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಮಾತನಾಡಿ ಹಾವೇರಿ ಮತ್ತು ಬಾಗಲಕೋಟೆ ಲೋಕಸಭಾ ಚುನಾವಣೆಗೆ ಜಿಲ್ಲೆಯ 959 ಮತಗಟ್ಟೆಗಳಲ್ಲಿ ಎಪ್ರೀಲ್ 23 ರಂದು ನಡೆಯುವ ಮತದಾನ ಕುರಿತಂತೆ ದುರ್ಬಲ, ಅತೀಸೂಕ್ಷ್ಮ ಮತಗಟ್ಟೆಗಳ ನ್ಯಾಸಮ್ಮತ, ಪಾರದರ್ಶಕ ಮತ್ತು ಒತ್ತಡ ರಹಿತ ವಾತಾವರಣದಲ್ಲಿ ಮತದಾನ ನಡೆಸಲು ವೆಬಕಾಸ್ಟಿಂಗ, ವಿಡೀಯೋಗ್ರಾಫರ ಅಲ್ಲದೇ 162 ಮೈಕ್ರೋ ಆಬ್ಸರ್ವರ್ಸ ಅಂದರೇ ಸೂಕ್ಷ್ಮ ವೀಕ್ಷಕರನ್ನು ನಿಯಮಿಸಲಾಗಿದೆ. ತಮಗೆ ವಹಿಸಿರುವ ಜವಾಬ್ದಾರಿಯನ್ನು ಚಾಚೂ ತಪ್ಪದೇ ನಿರ್ವಹಿಸಿ ಶಾಂತಿಯುತ ಹಾಗೂ ನ್ಯಾಯಸಮ್ಮತ ಮತದಾನ ನಡೆಯುವಂತೆ ನೋಡಿಕೊಳ್ಳಲು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ ಸೂಕ್ಷ್ಮ ವೀಕ್ಷಕರು ಮತದಾನ ದಿನ ಮತಗಟ್ಟೆಗಳಲ್ಲಿ ನಿರ್ವಹಿಸಬೇಕಾದ ಕಾರ್ಯಗಳ ಕುರಿತಂತೆ ಹಾಗೂ ಇವಿಎಂ ಮತಯಂತ್ರದ ಪ್ರಾತ್ಯಕ್ಷಿಕೆ ತರಬೇತಿ ಕಾರ್ಯಗಾರ ಏರ್ಪಡಿಸಲಾಗಿದೆ ಎಂದರು.
ಮತಗಟ್ಟೆಗಳಲ್ಲಿ ಶಾಂತಿ ಮತ್ತು ಸುವ್ಯವಸ್ಥೆ, ಮಾದರಿನೀತಿ ಸಂಹಿತೆ ವಿಷಯಗಳ ಪಾಲನೆ ಮತದಾನ ಪ್ರಕ್ರಿಯೆಯ ವಿವಿಧ ಸಂಗತಿಗಳು, ಮತಯಂತ್ರಗಳ ಸುರಕ್ಷತೆ ಮತ್ತು ಭಧ್ರತೆ, ಮತದಾನ ಪ್ರಮಾಣ, ಸೆಕ್ಟರ ಅಧಿಕಾರಿ, ಮತಗಟ್ಟೆ ಅಧಿಕಾರಿಗಳೊಂದಿಗೆ ಸರಿಯಾದ ಸಂಪರ್ಕ ಮತ್ತು ಸಂವಹಣ, ದೂರು ಸಮಸ್ಯೆಗಳ ಮತ್ತು ಮತದಾನ ಪ್ರಕ್ರಿಯೆಗಳ ನಿಗದಿತ ವರದಿ ಸಲ್ಲಿಕೆ ಮುಂತಾದ ವಿಷಯಗಳ ಕುರಿತಂತೆ ರಾಜ್ಯ ಮಟ್ಟದ ತರಬೇತಿದಾರ ಗಿರಿತಮ್ಮಣ್ಣವರ ಸೂಕ್ಷ್ಮ ವೀಕ್ಷಕರು ನಿರ್ವಹಿಸಬೇಕಾದ ಕಾರ್ಯಗಳ ಕುರಿತು ವಿವರಣೆ ಮಾಹಿತಿ ನೀಡಿ ಮತಯಂತ್ರದ ಪ್ರಾತ್ಯಕ್ಷಿಕೆ ನೀಡಿದರು.