ನರೇಗಾ ಯೋಜನೆಯ ದತ್ತು ಗ್ರಾಮ ಕಾಮನೂರಿಗೆ ಜಿ.ಪಂ ಸಿಇಒ ಭೇಟಿ: ವಿವಿಧ ಕಾಮಗಾರಿಗಳ ಪರೀಶೀಲನೆ
ಕೊಪ್ಪಳ 18: ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ ಕೊಪ್ಪಳ ಸಂಸದರ ದತ್ತು ಗ್ರಾಮವಾಗಿ ಆಯ್ಕೆಯಾದ ಲೇಬಗೇರಿ ಗ್ರಾಮ ಪಂಚಾಯತಿಯ ಕಾಮನೂರು ಗ್ರಾಮಕ್ಕೆ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ರತ್ನಂ ಪಾಂಡೆಯ ಅವರು ಮಂಗಳವಾರ ಭೇಟಿ ನೀಡಿ, ಸಂಜಿವಿನಿ ಸಂಘದ ಶೆಡ್ ನಿರ್ಮಾಣ, ಶಾಲಾ ಶೌಚಾಲಯ, ಚರಂಡಿ ನಿರ್ಮಾಣ, ಸಿಸಿ ರಸ್ತೆ ನಿರ್ಮಾಣ ಸೇರಿದಂತೆ ವಿವಿಧ ಕಾಮಗಾರಿಗಳ ಮಾರ್ಕೌಟ್ ಮಾಡಿರುವ ಕುರಿತು ಪರೀಶೀಲಿಸಿದರು.
ಮಹಾತ್ಮಾ ಗಾಂಧಿ ನರೇಗಾ ದತ್ತು ಗ್ರಾಮದ ಕ್ರಿಯಾ ಯೋಜನೆಯಲ್ಲಿರುವ ಎಲ್ಲಾ ಕಾಮಗಾರಿಗಳನ್ನು ಪ್ರಾರಂಭಿಸಿ ಬರುವ ಮಾರ್ಚ್-2025ರೊಳಗಾಗಿ ಮುಕ್ತಾಯಗೊಳಿಸಲು ಸಂಬಂಧಿಸಿದ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹಾಗೂ ತಾಂತ್ರಿಕ ಸಹಾಯಕರಿಗೆ ಸೂಚನೆ ನೀಡಿದ ಸಿಇಓ ಅವರು, ಕಾಮಗಾರಿಗಳು ಗುಣಮಟ್ಟದ್ದಾಗಿರಬೇಕು. ಗ್ರಾಮಸ್ಥರ ಸಂಪೂರ್ಣ ಸಹಕಾರದಿಂದ ಎಲ್ಲಾ ಕಾಮಗಾರಿಗಳು ಮುಕ್ತಾಯವಾಗಬೇಕು. ಯಾವುದೇ ರೀತಿಯಾಗಿ ಕಾಮಗಾರಿಗಳು ಅಪೂರ್ಣವಾಗುವಂತಿಲ್ಲ. ಅಂದಾಜು ಪತ್ರಿಕೆಯಲ್ಲಿ ಕಾಣಿಸಿದಂತೆ ಐಟಂವಾರು ಕಾಮಗಾರಿಗಳು ಅನುಷ್ಟಾನಿಸಬೇಕೆಂದು ಕಟ್ಟು ನಿಟ್ಟಾಗಿ ಸೂಚಿಸಿದರು.
ಶಾಲಾ ಮಕ್ಕಳ ಬರವಣಿಗೆ ಹಾಗೂ ಗಣಿತ ಕಲಿಕಾ ಸಾಮಾರ್ಥ್ಯ ಪರೀವೀಕ್ಷಣೆ: ಸಿಇಒ ಅವರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 8 ತರಗತಿಗೆ ವಿದ್ಯಾರ್ಥಿಗಳ ಕೊಠಡಿಗೆ ಭೇಟಿ ನೀಡಿ ಕನ್ನಡ ಬರವಣಿಗೆ ಹಾಗೂ ಗಣಿತ ಕಲಿಕಾ ಸಾಮಾರ್ಥ್ಯ ಇರುವ ಕುರಿತು ಪರೀವೀಕ್ಷಣೆ ಮಾಡಿದರು. ನಂತರ ಮಕ್ಕಳೊಂದಿಗೆ ಆರೋಗ್ಯ ತಪಾಸಣೆ ಜರುಗಿದ ಕುರಿತು ಚರ್ಚಿಸಿದರು. ಪ್ರತಿ ದಿನ ಆಹಾರ ವಿತರಣೆ, ಮೊಟ್ಟೆ ಇತ್ಯಾದಿ ವಿತರಣೆ ಕುರಿತು ಮುಕ್ತವಾಗಿ ಚರ್ಚಿಸಿದರು. ಈಗಾಗಲೇ ಎಲ್ಲರಿಗೂ ಶೂ ಸಾಕ್ಸ್ ನೀಡಲಾಗಿದ್ದು ತಪ್ಪದೇ ಕಡ್ಡಾಯವಾಗಿ ಪ್ರತಿ ದಿನ ಎಲ್ಲಾ ಮಕ್ಕಳು ಧರಿಸಿ ತರಗತಿಗೆ ಹಾಜರಾಗುವಂತೆ ಮಕ್ಕಳಿಗೆ ಕರೆ ನೀಡಿದರು.
ಶೌಚಾಲಯ ಜಾಗೃತಿ ಮೂಡಿಸಿದ ಸಿಇಒ: ಗ್ರಾಮದ ಕೆಲ ಮನೆಗಳಿಗೆ ಭೇಟಿ ನೀಡಿ ಶೌಚಾಲಯ ಇರುವ ಬಗ್ಗೆ ಮಾಹಿತಿ ಪಡೆದು ಪ್ರತಿ ದಿನ ಶೌಚಾಲಯ ಬಳಕೆ ಮಾಡುವಂತೆ ಮನವೋಲಿಸಿದರು. ಈಗಾಗಲೇ ಸರ್ಕಾರದಿಂದ ಪ್ರೋತ್ಸಾಹಧನ ವಿತರಿಸಿದ್ದು ನಿಮ್ಮ ಶೌಚಾಲಯವನ್ನು ಸ್ವಚ್ಚಗೊಳಿಸಿ ಅದನ್ನು ನಿಮ್ಮ ಕುಟುಂಬದ ಸದಸ್ಯರು ಕಡ್ಡಾಯವಾಗಿ ಬಳಕೆ ಮಾಡುವಂತೆ ತಿಳಿಸಬೇಕು. ಶೌಚಾಲಯ ಬಳಕೆಯಿಂದ ನಮ್ಮ ಆರೋಗ್ಯ ಸುರಕ್ಷಿತ ಹಾಗೂ ಗ್ರಾಮದ ಸುತ್ತ-ಮುತ್ತಲೂ ನೈರ್ಮಲ್ಯ ವಾತಾವರಣ ಉಂಟಾಗುತ್ತದೆ ಎಂದರು.
ಗ್ರಾಮದಲ್ಲಿ ಜನಪ್ರತಿನಿಧಿಗಳು, ಗ್ರಾಮಸ್ಥರು, ಅಧಿಕಾರಿಗಳ ಸಹಭಾಗಿತ್ವದಲ್ಲಿ ಒಂದು ದಿನ ಇಡೀ ಗ್ರಾಮವನ್ನು ಸ್ವಚ್ಛಗೊಳಿಸಲು ಶ್ರಮದಾನ ಕಾರ್ಯಕ್ರಮವನ್ನು ಜರುಗಿಸಲು ಶೀಘ್ರದಲ್ಲಿ ದಿನಾಂಕವನ್ನು ನಿಗದಿಪಡಿಸಲಾಗುವುದು. ಆ ದಿನದಂದು ಗ್ರಾಮಸ್ಥರು, ಎಲ್ಲಾ ಸಂಘ-ಸಂಸ್ಥೆಗಳು ಕೈ ಜೋಡಿಸಿ ಕಾಮನೂರನ್ನು ಮಾದರಿ ಸ್ವಚ್ಛತಾ ಗ್ರಾಮನ್ನಾಗಿ ನಿರ್ಮಿಸಲು ಶ್ರಮಿಸಬೇಕು ಎಂದು ಸಿಇಒ ಅವರು ಹೇಳಿದರು.
ಈ ಸಂದರ್ಭದಲ್ಲಿ ಕೊಪ್ಪಳ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ದುಂಡಪ್ಪ ತುರಾದಿ, ನರೇಗಾ ಸಹಾಯಕ ನಿರ್ದೇಶಕ ಯಂಕಪ್ಪ, ಪಂಚಾಯತ ಅಭಿವೃದ್ಧಿ ಅಧಿಕಾರಿ ಸಂಗಮೇಶ ತೇರಿನ, ತೋಟಗಾರಿಕೆ ಇಲಾಖೆ ಹೋಬಳಿ ಅಧಿಕಾರಿ ವಿಜಯಮಹಾಂತೇಶ ಹೊಟ್ಟಿನ, ತಾಂತ್ರಿಕ ಸಂಯೋಜಕರಾದ ಯಮನೂರ ಹಾಗೂ ಕವಿತಾ, ತಾಲೂಕ ಐಇಸಿ ಸಂಯೋಜಕ ದೇವರಾಜ ಪತ್ತಾರ, ತಾಂತ್ರಿಕ ಸಹಾಯಕ ಮಲ್ಲಿಕಾರ್ಜುನ ಮೇಗಳಮನಿ, ಮಂಜುನಾಥ ಮಾದಾಪುರ, ಬಿಎಪ್.ಟಿ ಹಾಗೂ ಗ್ರಾಮ ಪಂಚಾಯತ ಸಿಬ್ಬಂದಿಗಳು ಉಪಸ್ಥಿತರಿದ್ದರು.