ಉಚಿತ ವೈದ್ಯಕೀಯ ತಪಾಸಣೆ ಮತ್ತು ರಕ್ತದಾನ ಶಿಬಿರ
ವಿಜಯಪುರ 13: ರಕ್ತದಾನ ಮಾಡಿದ ದಾನಿಗಳಲ್ಲಿ ಕೇವಲ ಎರಡು ವಾರಗಳಲ್ಲಿ ರಕ್ತವು ಪುನರ್ ಉತ್ಪತ್ತಿಯಾಗುತ್ತದೆ. ಹೀಗಾಗಿ ರಕ್ತದಾನ ಮಾಡುವ ಮೂಲಕ ರೋಗಿಗಳಿಗೆ ಸಕಾಲಕ್ಕೆ ನೆರವಾಗಬೇಕು ಎಂದು ಬಿ.ಎಲ್.ಡಿ.ಇ. ಆಸ್ಪತೆಯ ಬ್ಲಡ್ ಬ್ಯಾಂಕ್ ಮುಖ್ಯಸ್ಥ, ಡಾ.ಸಂತೋಷ ಅರಕೇರಿ ಹೇಳಿದ್ದಾರೆ. ಇಂದು ಗುರುವಾರ ನಗರದ ಬಿ.ಎಲ್.ಡಿ.ಇ. ಸಂಸ್ಥೆಯ ಜ್ಞಾನಯೋಗಿ ಸಿದ್ದೇಶ್ವರ ಸ್ವಾಮೀಜಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಯುವ ರೆಡ್ ಕ್ರಾಸ್ ಘಟಕ ಮತ್ತು ಬಿ.ಎಲ್.ಡಿ.ಇ. ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಕಾಲೇಜು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಹಾಗೂ ಇಗ್ನೊ ಪ್ರಾದೇಶಿಕ ಕೇಂದ್ರಗಳ ಸಹಯೋಗದೊಂದಿಗೆ ಪ್ರಶಿಕ್ಷಣಾರ್ಥಿಗಳಿಗೆ ಮತ್ತು ಸಿಬ್ಬಂದಿಯವರಿಗೆ ಆಯೋಜಿಸಲಾಗಿದ್ದ ಉಚಿತ ವೈದ್ಯಕೀಯ ತಪಾಸಣೆ ಮತ್ತು ರಕ್ತದಾನ ಶಿಬಿರದಲ್ಲಿ ಅವರು ಮಾತನಾಡಿದರು. ಓರ್ವ ರಕ್ತದಾನಿ 350 ಮಿ.ಗ್ರಾಂ ರಕ್ತದಾನ ಮಾಡಿದರೆ, ಅದು ಒಂದು ಯುನಿಟ್ ಆಗಿದ್ದು, ಇದು ಮನುಷ್ಯನ ರಕ್ತದ ಕೇವಲ 6 ರಿಂದ 7 ಪ್ರತಿಶತವಾಗಿದೆ ಮಾತ್ರ ಆಗಿರುತ್ತದೆ. ರಕ್ತದಾನ ಮಾಡಿದ ವ್ಯಕ್ತಿಯಲ್ಲಿ ಕೇವಲ ಎರಡು ವಾರಗಳಲ್ಲಿ ಹೊಸ ರಕ್ತ ಪುನರ್ ಉತ್ಪತ್ತಿಯಾಗುತ್ತದೆ. ರಕ್ತದಾನ ಮಾಡುವುದರಿಂದ ಮನುಷ್ಯನಿಗೆ ಉತ್ಸಾಹ, ನವ ಚೈತನ್ಯ ಸಿಗುತ್ತದೆ. ಅಲ್ಲದೇ, ಇನ್ನೊಂದು ಜೀವಕ್ಕೆ ಜೀವದಾನ ಮಾಡಿದಂತೆ ಆಗುತ್ತದೆ ಎಂದು ಹೇಳಿದರು. ಜೆ.ಎಸ್.ಎಸ್. ಶಿಕ್ಷಣ ಮಹಾವಿದ್ಯಾಲಯದ ರೆಡ್‌ಕ್ರಾಸ್ ಘಟಕ ಸಂಯೋಜಕ ಮತ್ತು ಸಹಪ್ರಾಧ್ಯಾಪಕ ಡಾ. ಎಂ ಬಿ ಕೋರಿ ಮಾತನಾಡಿ, ರೆಡ್ ಕ್ರಾಸ್ ಘಟಕದ ಸ್ಥಾಪನೆ, ಇದರ ಪ್ರಮುಖ ಉದ್ದೇಶ, ಸಾಮಾಜಿಕ ಸೇವೆ ಕುರಿತು ಮಾಹಿತಿ ನೀಡಿದರು. ವೈದ್ಯ ಡಾ. ನೀನಾದ ಎಂ. ಮೂಲಿಮನಿ ಮಾತನಾಡಿ, ರಕ್ತದಾನ ಅತ್ಯಂತ ಶ್ರೇಷ್ಠದಾನವಾಗಿದ್ದು, ಕೆಟ್ಟ ಹವ್ಯಾಸಗಳಿಲ್ಲದ ಪ್ರತಿಯೊಬ್ಬರು ರಕ್ತದಾನ ಮಾಡಬಹುದಾಗಿದೆ ಮತ್ತು ಶಿಬಿರಾರ್ಥಿಗಳು ಶಿಬಿರದ ಸದುಪಯೋಗಪಡಿಸಿಕೊಂಡು ವೈದ್ಯಕೀಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಹೇಳಿದರು. ಕಾಲೇಜಿನ ಪ್ರಾಚಾರ್ಯೆ ಡಾ. ಬಿ ವೈ. ಖಾಸನಿಸ ಮಾತನಾಡಿ, ಹೆಚ್ಚಿನ ಸಂಖ್ಯೆಯಲ್ಲಿ ಪ್ರಶಿಕ್ಷಣಾರ್ಥಿಗಳು ರಕ್ತದಾನ ಮಾಡಿ ಇನ್ನೊಂದು ಜೀವಕ್ಕೆ ಜೀವದಾನ ನೀಡಬೇಕು. ಪ್ರಶಿಕ್ಷಣಾರ್ಥಿಗಳು ಕೆಟ್ಟಹವ್ಯಾಸಗಳಿಂದ ದೂರವಿದ್ದು ಉತ್ತಮ ಆರೋಗ್ಯ ಕಾಯ್ದುಕೊಳ್ಳಬೇಕು ಎಂದು ಹೇಳಿದರು. ಈ ಕಾರ್ಯಕ್ರಮದಲ್ಲಿ ಬಿ. ಎಂ. ಪಾಟೀಲ್ ಮೆಡಿಕಲ್ ಕಾಲೇಜ ಮತ್ತು ಆಸ್ಪತ್ರೆಯ ವೈದ್ಯರಾದ ಡಾ. ಜ್ಯೋತಿ ಲೋಕಪುರ, ಡಾ. ರತಿಜಾ, ಸಾರ್ವಜನಿಕ ಸಂಪರ್ಕ ಸಹಾಯಕ ವಿಲಾಸ ಜಾಧವ ಮತ್ತು ವೈದ್ಯಕೀಯ ಮಹಾವಿದ್ಯಾಲಯದ ಸಿಬ್ಬಂದಿ ವರ್ಗ ಮತ್ತು ಜೆ.ಎಸ್.ಎಸ್. ಶಿಕ್ಷಣ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ. ಜೆ. ಎಸ್. ಪಟ್ಟಣಶೆಟ್ಟಿ, ಡಾ. ಬಿ. ಎಸ್. ಹಿರೇಮಠ, ಸುನಿಲ ಎಸ್. ಪಾಟೀಲ, ಎ. ಎಸ್. ಮಸಳಿ, ಪಿ. ಡಿ. ಮುಲ್ತಾನಿ, ಡಾ. ಎಸ್. ಪಿ. ಶೇಗುಣಸಿ, ಸಂಶೋಧನಾ ವಿದ್ಯಾರ್ಥಿ ಸುಜಾತಾ ಮತ್ತಿವಾಡ, ಅಶ್ವಿನಿ ಜಿತ್ತಿ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ 40 ಜನರು ರಕ್ತದಾನ ಮಾಡಿದರು.