ಕಾರ್ಖಾನೆ ವಿರೋಧಿ ಹೋರಾಟಕ್ಕೆ ಮಾಜಿ ಪ್ರಧಾನಿ ಬೆಂಬಲ: ಎಚ್‌ಡಿಕೆಗೆ ಮನವಿ ಸಲ್ಲಿಸಿದ ಮಹಾಂತಯ್ಯನಮಠ
ಕೊಪ್ಪಳ 06: ನಗರಕ್ಕೆ ಹೊಂದಿಕೊಂಡು ನಿರ್ಮಿಸಲಾಗುತ್ತಿರುವ ಬಿಎಸ್ ಪಿಎಲ್ ಉಕ್ಕಿನ ಕಾರ್ಖಾನೆ ಆರಂಭದ ವಿರೋಧಿ ಹೋರಾಟಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೆಗೌಡ ಸಹ ಕೈ ಜೋಡಿಸಿದ್ದಾರೆ. ಜೆಡಿಎಸ್ ರಾಜ್ಯ ಕಾರ್ಯದರ್ಶಿ ವೀರೇಶ ಮಹಾಂತಯ್ಯನಮಠ ಅವರು, ಗುರುವಾರ ಬೆಂಗಳೂರಿನಲ್ಲಿ ಮಾಜಿ ಪ್ರಧಾನಿ, ರಾಜ್ಯಸಭಾ ಸದಸ್ಯರಾಗಿರುವ ಎಚ್.ಡಿ.ದೇವೆಗೌಡ ಅವರ ಮನೆಯಲ್ಲಿ ಭೇಟಿಯಾಗಿ ಮನವಿ ಸಲ್ಲಿಸಿ, ಪ್ರಸ್ತುತ ಕಾರ್ಖಾನೆ ಆರಂಭದಿಂದ ಎದುರಾಗಲಿರುವ ಸಮಸ್ಯೆಗಳ ಕುರಿತು ಮಹಾಂತಯ್ಯನಮಠ ಅವರು ಮನವರಿಕೆ ಮಾಡಿದರು.
ಕೊಪ್ಪಳದಲ್ಲಿ ಬಿಎಸ್ ಪಿಎಲ್ ಕಾರ್ಖಾನೆ ಆರಂಭಕ್ಕೆ ಈಗಾಗಲೇ ಜನರಿಂದ ವಿರೋಧ ವ್ಯಕ್ತವಾಗಿದೆ.ಈಚೆಗೆ ಜಿಲ್ಲೆಯ ಜನಪ್ರತಿನಿಧಿಗಳ ನಿಯೋಗವು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಒತ್ತಾಯಿಸಿದೆ.ಹೀಗಾಗಿ ನೀವು ಕೇಂದ್ರ ಸರಕಾರ ಪರಿಸರ, ಅರಣ್ಯ ಮತ್ತು ಹವಾಮಾನ ಇಲಾಖೆಯ ಸಚಿವರಾದ ಭೂಪೇಂದ್ರ ಯಾದವ ಅವರೊಂದಿಗೆ ಮಾತನಾಡಿ, ಯಾವುದೇ ಕಾರಣಕ್ಕೂ ಪರಿಸರ ಇಲಾಖೆಯ ಅನುಮತಿ ಕೊಡಿಸದಂತೆ ಮಾತನಾಡಿ ಎಂದು ಮನವಿ ಮಾಡಿದರು.ಇದಕ್ಕೆ ಸ್ಪಂದಿಸಿದ ಎಚ್ ಡಿಡಿ, ಕಾರ್ಖಾನೆ ನಿರ್ಮಾಣಕ್ಕೆ ಗವಿಶ್ರೀಗಳ ನೇತೃತ್ವದಲ್ಲಿ ಎಲ್ಲಾ ಧರ್ಮ ಗುರುಗಳು ಸಂಘಟನೆಗಳು ಜನ ವಿರೋಧಿಸಿರುವುದನ್ನು ಗಮನಿಸಿದ್ದೇನೆ.ಈಚೆಗೆ ಸಿಎಂ ಕೂಡ ಕಾರ್ಖಾನೆ ಕೆಲಸ ಸ್ಥಗಿತಗೊಳಿಸಲು ಸೂಚನೆ ನೀಡಿದ್ದಾರೆ. ನಾನು ಕೂಡ ಕೇಂದ್ರ ಪರಿಸರ ಹಾಗೂ ಹವಾಮಾನ ಇಲಾಖೆ ಸಚಿವರೊಂದಿಗೆ ಮಾತನಾಡುವೆ. ನಿಮ್ಮ ಹೋರಾಟಕ್ಕೆ ನನ್ನ ಬೆಂಬಲವಿದ್ದು, ಕೊಪ್ಪಳ ಜಿಲ್ಲೆಯ ಜನರಿಗೆ ಅನುಕೂಲವಾಗುವಂತೆ ಮಾಡಲು ಪ್ರಯತ್ನ ಮಾಡುವೆ ಎಂದು ತಿಳಿಸಿದರು.