ಮಾಜಿ ಡಿಸಿಎಮ್ ಲಕ್ಷ್ಮಣ ಸವದಿ ಬಣಕ್ಕೆ ಜಯ: ಮಾಜಿ ಸಚಿವ ರಮೇಶ ಜಾರಕಿಹೊಳಿ ಬಣಕ್ಕೆ ಮುಖ ಭಂಗಪ
ಅಥಣಿ 31: ತೀವ್ರ ಕುತೂಹಲ ಕೆರಳಿಸಿದ್ದ ಅಥಣಿ ಗ್ರಾಮೀಣ ಗ್ರಾಮ ಪಂಚಾಯತನ ಅಧ್ಯಕ್ಷರ ವಿರುದ್ಧದ ಅವಿಶ್ವಾಸ ಗೊತ್ತುವಳಿ ಪರವಾಗಿ ಮಾಜಿ ಡಿಸಿಎಮ್, ಶಾಸಕ ಲಕ್ಷ್ಮಣ ಸವದಿ ಬಣದ 42 ಸದಸ್ಯರು ಕೈ ಎತ್ತಿ ಹಾಲಿ ಅಧ್ಯಕ್ಷರನ್ನು ಅಧಿಕಾರದಿಂದ ಕೆಳಗಿಳಿಸುವ ಮೂಲಕ ಮಾಜಿ ಸಚಿವ ರಮೇಶ ಜಾರಕಿಹೊಳಿ ಬಣಕ್ಕೆ ಮುಖ ಭಂಗಕ್ಕೀಡು ಮಾಡಿದರು.
ಒಟ್ಟು 56 ಗ್ರಾಮ ಪಂಚಾಯತ ಸದಸ್ಯ ಬಲ ಹೊಂದಿರುವ ಅಥಣಿ ಗ್ರಾಮೀಣ ಪಂಚಾಯತನ ಅಧ್ಯಕ್ಷರಾಗಿ ಬಿಜೆಪಿಯ ರಮೇಶ ಜಾರಕಿಹೊಳಿ ಬಣದ ಸಂತೋಷ ಕಕಮರಿ ಕಳೆದ ಒಂದೂವರೆ ವರ್ಷದಿಂದ ಆಡಳಿತ ನಡೆಸುತ್ತಿದ್ದರು. ಇದೇ ಡಿಸೆಂಬರ 5ರಂದು ಪರಮಾನಂದ ನಾಯಿಕ ಮತ್ತು ಇತರ 35 ಸದಸ್ಯರು ಸಹಿ ಮಾಡಿ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಗೊತ್ತುವಳಿಗಾಗಿ ಚಿಕ್ಕೋಡಿ ಉಪ ವಿಭಾಗಾಧಿಕಾರಿ ಸುಭಾಷ ಸಂಪಗಾಂವಿ ಇವರಿಗೆ ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಡಿಸೆಂಬರ 16 ರಂದು ಎಲ್ಲ ಸದಸ್ಯರಿಗೆ ಡಿಸೆಂಬರ 31 ರಂದು ನಡೆಯುವ ಸರ್ವ ಸದಸ್ಯರ ಸಭೆಗೆ ಹಾಜರಾಗಲು ಸೂಚಿಸಲಾಗಿತ್ತು. ಡಿಸೆಂಬರ 31ರಂದು ಗ್ರಾಮ ಪಂಚಾಯತನಲ್ಲಿ ನಡೆದ ಸಭೆಯಲ್ಲಿ 42 ಸದಸ್ಯರು ಗೊತ್ತುವಳಿ ಪರವಾಗಿ ಮತ ಚಲಾಯಿಸಿದರು ಇನ್ನೂಳಿದ 14 ಸದಸ್ಯರು ಸಭೆಗೆ ಗೈರಾಗಿದ್ದರು. ಹೀಗಾಗಿ ಅವಿಶ್ವಾಸ ಗೊತ್ತುವಳಿ ಮೇಲುಗೈ ಸಾಧಿಸಿತು ಎಂದು ಸಭೆಯ ಅಧ್ಯಕ್ಷತೆ ವಹಿಸಿದ್ದ ಉಪ ವಿಭಾಗಾಧಿಕಾರಿ ಸುಭಾಶ ಸಂಪಗಾಂವಿ ತಿಳಿಸಿದರು. ಅವಿಶ್ವಾಸ ಗೊತ್ತುವಳಿ ನೋಟೀಸ್ ಜಾರಿಯಾದ ನಂತರ ಈ ಮೊದಲು ಅಧ್ಯಕ್ಷರಾಗಿದ್ದ ಸಂತೋಷ ಕಕಮರಿ ಕೆಲ ಸದಸ್ಯರನ್ನು ತನ್ನ ಜೊತೆ ಅಜ್ಞಾತ ಸ್ಥಳಕ್ಕೆ ಕರೆದುಕೊಂಡು ಹೋದ ಹಿನ್ನಲೆಯಲ್ಲಿ ರೆಸಾರ್ಟ್ ರಾಜಕೀಯ ಪ್ರಾರಂಭಗೊಂಡಿತ್ತು. ಇದರಿಂದ ಕೆಲ ದಿನಗಳವರೆಗೆ ಆತಂಕ ಮೂಡಿಸಿತ್ತಾದರೂ ಸಭೆಗೆ ಅವಿಶ್ವಾಸ ಗೊತ್ತುವಳಿ ಮನವಿಗೆ ಸಹಿ ಮಾಡಿದ್ದ ಸದಸ್ಯರಿಗಿಂತಲೂ ಹೆಚ್ಚು ಜನ ಸದಸ್ಯರು ಹಾಜರಾಗುವ ಮೂಲಕ ಮಾಜಿ ಡಿಸಿಎಮ್ ಲಕ್ಷ್ಮಣ ಸವದಿ ಬಣಕ್ಕೆ ಜಯ ದೊರಕಿದೆ.
ಉಪ ವಿಭಾಗಾಧಿಕಾರಿಗಳು ಹೊಸ ಅಧ್ಯಕ್ಷರ ಆಯ್ಕೆಗೆ ದಿನಾಂಕ ಘೋಷಣೆ ಮಾಡಿದ ನಂತರ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.