ಜಾನಪದ ಸಂಸ್ಕೃತಿ ಬಿತ್ತರಿಸುವ ಹೃದಯಗಳ ಮಾಧ್ಯಮ: ಡಾ. ಜೀವನ್

Folk culture is a medium of hearts that spreads: Dr. Jeevan

ಜಾನಪದ ಸಂಸ್ಕೃತಿ ಬಿತ್ತರಿಸುವ ಹೃದಯಗಳ ಮಾಧ್ಯಮ: ಡಾ. ಜೀವನ್

ಹೂವಿನಹಡಗಲಿ 09: ಜಾನಪದ ಇಂದು  ಜೀವಂತವಾಗಿ ಸಮಾಜವನ್ನು ಬೆಳಗುತ್ತಿದೆ. ಇದು ಜನರ ಸಂಸ್ಕೃತಿಗೆ ಹಿಡಿದ ಕೈಗನ್ನಡಿಯಾಗಿದೆ. ಬಾಳಿನ ದೀಪವಾಗಿ ಬದುಕಿನ ವಿವಿಧ ಸಂಸ್ಕೃತಿಗಳನ್ನು ಬಿತ್ತರಿಸುವ ಹೃದಯಗಳ ಮಾಧ್ಯಮವಾಗಿದೆ ಎಂದು ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಡಾ. ಜೀವನ್ ಸಾಬ್ ವಾಲಿಕಾರ ಹೇಳಿದರು. ಅವರು ಪಟ್ಟಣದ ಜಿ. ಬಿ.ಆರ್ ಕಾಲೇಜು ಆವರಣದಲ್ಲಿ ಹಮ್ಮಿಕೊಂಡಿದ್ದ  ಮಾಸಿಕ 202ನೇ ಶಿವಾನುಭವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು ಮನುಷ್ಯ ಅದೆಷ್ಟೇ ಮುಂದುವರೆದರು ಜಾನಪದದ ಪ್ರಭಾವ ನಿತ್ಯ ಜೀವನದಲ್ಲಿ ಸಾಕಷ್ಟಿದೆ. ಗೊತ್ತಿದ್ದೋ ಗೊತ್ತಿಲ್ಲದೆಯೋ ಇತಿಹಾಸದ ಮೂಲ, ವಿಜ್ಞಾನದ ಆವಿಷ್ಕಾರದ ಸೆಲೆ ಎಲ್ಲದಕ್ಕೂ ಜಾನಪದವೇ ತಳಹದಿ. ಜಾನಪದ ನಮ್ಮ ನೋವು, ನಲಿವು, ಸುಖ, ದುಃಖ, ಪ್ರೇಮ, ವಾತ್ಸಲ್ಯ, ಕರುಣೆ, ಕೃತಜ್ಞತೆ  ಭಾವವನ್ನು ವ್ಯಕ್ತಪಡಿಸುವ ಒಂದು ಸಾಧನವಾಗಿದೆ. ಎಂದರು.            ದಾವಣಗೆರೆಯ ಶ್ರೀಶೈಲ ಮಂದಿರದ ನಿರ್ದೇಶಕರಾದ ವಿನುತಾ ದೇವರಮನಿ ಯೋಗಿಶ್  ಉದ್ಘಾಟನೆಯನ್ನು ನೆರವೇರಿಸಿದರು.  ಅಧ್ಯಕ್ಷತೆಯನ್ನು ಗವಿಸಿದ್ದೇಶ್ವರ ಮಠದ ಪೀಠಾಧಿಪತಿಗಳಾದ ಡಾ ಹಿರಿ ಶಾಂತವೀರ ಮಹಾಸ್ವಾಮಿಗಳು ವಹಿಸಿದ್ದರು.  ಸಾನ್ನಿಧ್ಯವನ್ನು  ಹಿಮಾಲಯನ್ ಯೋಗಿ ನಿರಂಜನ ಮಹಾಸ್ವಾಮಿಗಳು ವಹಿಸಿದ್ದರು. ವೈದ್ಯರಾದ ಲಕ್ಷ್ಮಣ್ ನಾಯ್ಕ,ಮಲ್ಲಿಗೆ ಯೋಗ ಚಾರಿಟಬಲ್ ಟ್ರಸ್ಟ್‌ ನ ಅಧ್ಯಕ್ಷ ಕೋಡಿಹಳ್ಳಿ ಕೊಟ್ರೇಶ, ಸೇರಿದಂತೆ ಇತರರಿದ್ದರು. ನಂತರ ವೈದ್ಯರಾದ ಭಾರತಿ ಶಿವಕುಮಾರ, ನಿವೃತ್ತ ಶಿಕ್ಷಕ ಶಿವಾನಂದಪ್ಪ ಸೇರಿದಂತೆ ಇತರರನ್ನು  ಶ್ರೀಮಠದಿಂದ ಗೌರವಿಸಲಾಯಿತು.