ಹೂವಿನಹಡಗಲಿ :ಸಂಭ್ರಮದ ಸಂಕ್ರಾಂತಿ ಆಚರಣೆ

ಲೋಕದರ್ಶನ ವರದಿ

ಹೂವಿನಹಡಗಲಿ 16: ತಾಲ್ಲೂಕಿನ ತುಂಗಭದ್ರಾ ನದಿಯ ದಡದಲ್ಲಿ ಮಕರ ಸಂಕ್ರಾಂತಿ ಹಬ್ಬವನ್ನು ಮಂಗಳವಾರ ಸಡಗರ, ಸಂಭ್ರಮದಿಂದ ಆಚರಿಸಲಾಯಿತು. ಕುಟುಂಬ ಸಮೇತ ನದಿ ತೀರಕ್ಕೆ ತೆರಳಿದ ಜನತೆ  ನದಿಯಲ್ಲಿ ಪುಣ್ಯಸ್ನಾನ ಮಾಡಿದರು.

       ನಂತರ  ನದಿ ದಡದಲ್ಲಿ  ಗಂಗೆ ಪೂಜೆ ನೆರವೇರಿಸಿ  ಹತ್ತಿರದ ಸುಕ್ಷೇತ್ರಗಳ ದರ್ಶನ ಪಡೆದರು.  ಕುಟುಂಬದ ಜತೆ ಸೇರಿ ಮನೆಯಿಂದ ತಂದಿದ್ದ  ವಿವಿಧ ಭಕ್ಷ್ಯಗಳನ್ನು ಸವಿದು ಸಂಭ್ರಮಿಸಿದರು.ತುಂಗಭದ್ರಾ ನದಿಯಲ್ಲಿ ನೀರಿನ ಹರಿವು ಇದ್ದುದರಿಂದ  ಸಂಕ್ರಾಂತಿ ಹಬ್ಬದ ಸಂಭ್ರಮ ಹೆಚ್ಚಿಸಿತ್ತು. ಸೂರ್ಯ ತನ್ನ ಪಥವನ್ನು  ಕರ್ಕರಾಶಿಯಿಂದ ಮಕರರಾಶಿಗೆ  ಬದಲಾಯಿಸುವ ಸಂಕ್ರಮಣ ದಿನವನ್ನು ಕೆಲವರು ಮಂಗಳವಾರ ಮತ್ತು ಬುಧವಾರ ಆಚರಿಸಿದ್ದರಿಂದ  ಎರಡು ದಿನಗಳ ಕಾಲ ನದಿ ತೀರದಲ್ಲಿ ಜನಜಂಗುಳಿ ಕಂಡು ಬಂತು. ಮಹಿಳೆಯರು ಮತ್ತು ಮಕ್ಕಳು ಮನೆ ಮನೆಗೆ ತೆರಳಿ ಎಳ್ಳು-ಬೆಲ್ಲವನ್ನು ಹಂಚಿ ಸಂಕ್ರಾಂತಿ ಶುಭಾಶಯ ವಿನಿಮಯ ಮಾಡಿಕೊಂಡರು.