ಹಣಕಾಸು ಆಯೋಗದಿಂದ ಜಿಲ್ಲೆಗೆ ಹೆಚ್ಚಿನ ಅನುದಾನ ನೀಡಲು ಶಿಫಾರಸು ಹಣಕಾಸು ಆಯೋಗದ : ನಾರಾಯಣಸ್ವಾಮಿ
ಕಾರವಾರ 05 : ಜಿಲ್ಲೆಯಲ್ಲಿ ಅತಿವೃಷ್ಠಿ, ಪ್ರವಾಹ, ನೆರೆ ಹಾವಳಿ, ಭೂ ಕುಸಿತ ಸಂದರ್ಭದಲ್ಲಿ ವಿಪತ್ತು ನಿರ್ವಹಣೆಗಾಗಿ ಹೆಚ್ಚಿನ ಹಣ ವ್ಯಯ ಮಾಡಬೇಕಾಗಿದ್ದು, ಆ ನಿಟ್ಟಿನಲ್ಲಿ ಹಣಕಾಸು ಹಂಚಿಕೆಗೆ ಸಂಬಂಧಿಸಿದಂತೆ ಚರ್ಚಿಸಿ, ಜಿಲ್ಲಾಧಿಕಾರಿಗಳ ಸಲಹೆ ಪಡೆದು ಅವುಗಳನ್ನು ಸರ್ಕಾರಕ್ಕೆ ಶಿಫಾರಸ್ಸು ಮಾಡುವುದಾಗಿ ರಾಜ್ಯದ ಐದನೇ ಹಣಕಾಸು ಆಯೋಗದ ಅಧ್ಯಕ್ಷ ನಾರಾಯಣಸ್ವಾಮಿ ತಿಳಿಸಿದರು. ಗುರವಾರ ಕಾರವಾರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಆಯೋಗದ ಸದಸ್ಯರಾದ ಮೊಹಮ್ಮದ್ ಸನಾವುಲ್ಲಾ, ಆರ್.ಎಸ್. ಫೋಂಡೆ ಅವರ ನೇತೃತ್ವದಲ್ಲಿ ಗ್ರಾಮೀಣ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಸಾಂಸ್ಥಿಕ ರಚನೆ, ಕಾರ್ಯಚಟುವಟಿಕೆಗಳು, ಆರ್ಥಿಕ ಸ್ಥಿತಿ, ಸಂಪನ್ಮೂಲಗಳ ಕ್ರೋಢೀಕರಣ ಹಂಚಿಕೆ ಮತ್ತು ಮೂಲ ಸೌಕರ್ಯ ಹಾಗೂ ಸೇವೆಗಳ ಒದಗಿಸುವಿಕೆಯಲ್ಲಿ ತಾಂತ್ರಿಕ ಕೌಶಲ್ಯ, ಸಾಮರ್ಥ್ಯ ಇತ್ಯಾದಿಗಳನ್ನು ಅಧ್ಯಯನ ಮಾಡುವ ಸಲುವಾಗಿ ಹಾಗೂ ಜಿಲ್ಲೆಯ ಪಂಚಾಯತ ರಾಜ್ ಸಂಸ್ಥೆಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳಿಗೆ ಸಂಬಂಧಿಸಿದ ವಿಷಯಗಳ ಕುರಿತು ಪರೀಶೀಲನಾ ಸಭೆ ನಡೆಸಿದರು.ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಪ್ರವಾಸಿ ತಾಣಗಳಿಂದ ಸಂಗ್ರಹವಾಗುವ ಆದಾಯದಲ್ಲಿ ಪಂಚಾಯತಿಗಳಿಗೆ ಯಾವುದೇ ರೀತಿಯ ಪಾಲು ಸಿಗುತ್ತಿಲ್ಲ ಎಂಬ ಪಂಚಾಯತ್ ಅಧ್ಯಕ್ಷರೊಬ್ಬರ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಸದಸ್ಯ ಮೊಹಮ್ಮದ್ ಸನಾಉಲ್ಲಾ, ಪ್ರವಾಸಿ ತಾಣಗಳಲ್ಲಿ ಕಸ ಸಂಗ್ರಹಣೆ, ನಿರ್ವಹಣೆ ಎಲ್ಲವೂ ಗ್ರಾಮ ಪಂಚಾಯತ್ ವತಿಯಿಂದ ಮಾಡಲಾಗುತ್ತದೆ. ಆದರೆ ಆದಾಯ ಮಾತ್ರ ಪ್ರವಾಸೋದ್ಯಮ ಇಲಾಖೆ ಅಥವಾ ಅರಣ್ಯ ಇಲಾಖೆಯ ತೆಗೆದುಕೊಳ್ಳುತ್ತದೆ. ಇದು ಯಾವುದೇ ರೀತಿಯಲ್ಲಿ ಸದರಿ ಪಂಚಾಯತ್ ಅಭಿವೃದ್ಧಿಗೆ ಬಳಕೆಯಾಗುವುದಿಲ್ಲ. ಹೀಗಾಗಿ ಆದಾಯದಲ್ಲಿ ಹಂಚಿಕೆ ಆಗಬೇಕು. ಅಥವಾ ಅವರ ಕೆಲಸ-ಕಾರ್ಯಗಳಿಗೆ ಹಣ ನಿಗದಿಪಡಿಸಿ ಸಂದಾಯ ಮಾಡುವಂತ ವ್ಯವಸ್ಥೆ ಆಗಬೇಕು ಎಂದರು.ರಾಜ್ಯ ಸರ್ಕಾರದಿಂದ ವ್ಯವಸ್ಥಿತ ಅನುದಾನ ಹಂಚಿಕೆ, ಸಂಪನ್ಮೂಲಗಳ ಹಂಚಿಕೆ, ಆಡಳಿತಕ್ಕೆ ಸಂಬಂಧಿಸಿದ ಸಲಹೆ ಮತ್ತು ಯೋಜನೆಗಳನ್ನು ಜಾರಿಗೆ ತರುವಲ್ಲಿ ಆಯೋಗದಿಂದ ಶಿಫಾರಸ್ಸು ಮಾಡಲು ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಅನಿಸಿಕೆಗಳು ಅವಶ್ಯವಾಗಿದೆ ಎಂದರು.ಇದೇ ವೇಳೆ 5ನೇ ಹಣಕಾಸು ಆಯೋಗದ 2024-25ನೇ ಸಾಲಿನ ವರದಿ ಪ್ರತಿಯನ್ನು ಆಯೋಗದ ಅಧ್ಯಕ್ಷರು ಜಿಲ್ಲಾಧಿಕಾರಿ ಹಾಗೂ ಸಿಇಓ ಅವರಿಗೆ ಹಸ್ತಾಂತರಿಸಿದರು.ಸಭೆಯಲ್ಲಿ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಈಶ್ವರ್ ಕಾಂದೂ, ಜಿಲ್ಲಾ ವಿಕೇಂದ್ರೀಕರಣ ಸಮಿತಿ ಉಪಾಧ್ಯಕ್ಷ ಪ್ರಮೋದ ಹೆಗಡೆ, ಸಲಹೆಗಾರರಾದ ಕೆಂಪೇಗೌಡ, ಯಾಲಕ್ಕಿ ಗೌಡ, ಸುಪ್ರಸನ್ನ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ನಗರಸಭೆ, ಪಟ್ಟಣ ಪಂಚಾಯತ್, ಗ್ರಾಮ ಪಂಚಾಯತ್ ಜನ ಪ್ರತಿನಿಧಿಗಳು, ತಾಲೂಕು ಮತ್ತು ಪಂಚಾಯತ್ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.