ಫೆ. 6ರಂದು ಜಾನಪದ ಕಲಾ ಸಂಭ್ರಮ ಸಮಾವೇಶ
ಧಾರವಾಡ 03: ತಾಲೂಕಿನ ಈಟಿಗಟ್ಟಿಯ ಶ್ರೀಪಾಂಡುರಂಗ ರುಕುಮಾಯಿ ಸಾಂಸ್ಕೃತಿಕ ಸೇವಾ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ಆಶ್ರಯದಲ್ಲಿ ಫೆ.6 ರಂದು ಇಲ್ಲಿಯ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಜಾನಪದ ಕಲಾ ಸಂಭ್ರಮ ಸಮಾವೇಶ ಜರುಗಲಿದೆ.
ಗುರುವಾರ ಮುಂಜಾನೆ 10-30ಕ್ಕೆೆ ಎಪಿಎಂಸಿ ಮಾಜಿ ಅಧ್ಯಕ್ಷ ಕೃಷ್ಣ ಕೊಳ್ಳಾನಟ್ಟಿ ಉದ್ಘಾಟಿಸಲಿದ್ದು, ಜಾನಪದ ಅಕ್ಯಾದೆಮಿ ಸದಸ್ಯ ಡಾ. ನಿಂಗಪ್ಪ ಮುದ್ದೇನೂರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಹಾಗೂ ಪತ್ರಕರ್ತ ಲಿಂಗರಾಜ ಪಾಟೀಲ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ‘ಜೀವನ ಶಿಕ್ಷಣ’ ಮಾಸಪತ್ರಿಕೆಯ ನಿವೃತ್ತ ಸಂಪಾದಕ ಗುರುಮೂರ್ತಿ ಯರಗಂಬಳಿಮಠ ಅಧ್ಯಕ್ಷತೆವಹಿಸುವರು.
ಕಲಾವಿದರಾದ ಇಮಾಮಸಾಬ ವಲ್ಲೆಪ್ಪನವರ, ಲಕ್ಷ್ಮಿಬಾಯಿ ಹರಿಜನ, ಡಾ. ರಾಮು ಮೂಲಗಿ, ಡಾ. ಪ್ರಭು ಹಂಚಿನಾಳ, ಚೆನ್ನಬಸಪ್ಪ ಕಾಳೆ, ಕವಿಸಂ ಕಾರ್ಯದರ್ಶಿ ಶಂಕರ ಹಲಗತ್ತಿ ಅವರನ್ನು ಗೌರವಿಸಲಾಗುವುದು. ಇದೇ ಸಂದರ್ಭದಲ್ಲಿ 9 ಜನರಿಗೆ ‘ಕಲಾವಲ್ಲಭ ಪ್ರಶಸ್ತಿ’ ಹಾಗೂ 8 ಜನರಿಗೆ ‘ಸಮಾಜ ಸೇವಾ ರತ್ನ ಪ್ರಶಸ್ತಿ’ ಪ್ರದಾನ ಮಾಡಲಾಗುವುದು.
ಈ ಜಾನಪದ ಕಲಾ ಸಂಭ್ರಮದಲ್ಲಿ ತತ್ವಪದ, ಸೋಬಾನ, ಬೀಸುವ ಕಲ್ಲಿನ ಪದಗಳು, ಗೀಗೀಪದಗಳು, ಕೋಲಾಟ, ಸುಡಗಾಡುಸಿದ್ಧರ ಆಟಗಳು, ಭಕ್ತಿಗೀತೆಗಳೂ ಸೇರಿದಂತೆ ಹಲವಾರು ಪ್ರಕಾರದ ಕಲಾವಿದರು ತಮ್ಮ ಹಾಡುಗಾರಿಕೆ ಪ್ರಸ್ತುತಪಡಿಸುವರೆಂದು ಸೇವಾ ಟ್ರಸ್ಟ್ ಅಧ್ಯಕ್ಷ ಪ್ರಭು ಕುಂದರಗಿ, ಕಾರ್ಯದರ್ಶಿ ಆನಂದ ಜಾಧವ ತಿಳಿಸಿದ್ದಾರೆ.