ಅಪ್ಪನು ದೇವರು ಕರುಣಿಸಿದ ಬಹು ದೊಡ್ಡ ಉಡುಗೊರೆ: ಡಾ. ಯಾಕೊಳ್ಳಿ

Father is God's Greatest Gift: Dr. buy it

ಅಪ್ಪನು ದೇವರು ಕರುಣಿಸಿದ ಬಹು ದೊಡ್ಡ ಉಡುಗೊರೆ: ಡಾ. ಯಾಕೊಳ್ಳಿ 

ಧಾರವಾಡ 23: ಅಪ್ಪ ಎಂದರೆ ಭರವಸೆಯ ಬೆಳಕು. ಅವನು ಆಕಾಶದಷ್ಟು ದೊಡ್ಡವನು. ಅಪ್ಪ ಪ್ರೀತಿ ಹಾಗೂ ಮಮತೆಯ ಗಣಿ ಎಂದು ಸವದತ್ತಿಯ ವಿಶ್ರಾಂತ ಪ್ರಾಚಾರ್ಯ ಡಾ. ವೈ.ಎಂ. ಯಾಕೊಳ್ಳಿ ಅಭಿಪ್ರಾಯಪಟ್ಟರು.  ಕರ್ನಾಟಕ ವಿದ್ಯಾವರ್ಧಕ ಸಂಘವು ದಿ. ಧರಮಪ್ಪ ದೊಡ್ಡವೀರ​‍್ಪ ಹೊರಕೇರಿ ದತ್ತಿ ಅಂಗವಾಗಿ ಆಯೋಜಿಸಿದ್ದ ಉಪನ್ಯಾಸ ಹಾಗೂ ಸಾಧಕ ಶಿಕ್ಷಕಿಗೆ ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ‘ಹೊಸಗನ್ನಡ ಕಾವ್ಯದಲ್ಲಿ ಅಪ್ಪ’ ವಿಷಯ ಕುರಿತು ಮಾತನಾಡುತ್ತಿದ್ದರು.  ಅಪ್ಪನು ದೇವರು ಕರುಣಿಸಿದ ಬಹು ದೊಡ್ಡ ಉಡುಗೊರೆ. ಹೊಸಗನ್ನಡ ಕಾವ್ಯದಲ್ಲಿ ತಾಯಿಯ ಬಗ್ಗೆ  ವಿಸ್ತೃತ ವ್ಯಾಖ್ಯಾನಗಳಿರುವಂತೆ ತಂದೆಯ ಬಗ್ಗೆ ಕಡಿಮೆ. ಕಾವ್ಯದಲ್ಲಿ ಕವಿಗಳು ತಿಳಿಸಿದಂತೆ ಅಪ್ಪನು ಮಕ್ಕಳ ಪಾಲಿನ ಹಿರೋ. ಅಪ್ಪ ತ್ಯಾಗ, ಪ್ರೀತಿಯ ಪ್ರತೀಕ, ತಂದೆ ಜೀವನ ಪಾಠ ಕಲಿಸಿದವನು, ನಮ್ಮ ಸಾಧನೆಗೆ ತಂದೆಯೇ ಸ್ಪೂರ್ತಿ ಎಂದು ಕಾವ್ಯಮಯವಾಗಿ ಹೇಳಿದ್ದಾರೆ. ಅಪ್ಪನ ಬಗ್ಗೆ ಎಲ್ಲೂ ನಕಾರಾತ್ಮಕ ವಿಚಾರಗಳಿಲ್ಲ.ಮಕ್ಕಳ ಬಗ್ಗೆ ತಂದೆಯ ಬಯಕೆಗಳು ಆಕಾಶದಷ್ಟು ಎತ್ತರವಾಗಿವೆ. ಅಪ್ಪ ಬರಿ ಅಪ್ಪನು ಮಾತ್ರವಲ್ಲ, ಮಕ್ಕಳ ಪಾಲಿಗೆ ಗೆಳೆಯ, ಮಾರ್ಗದರ್ಶಿ, ಹಿತೈಷಿಯೂ ಹೌದು. ಅಪ್ಪ ಎಂದರೆ ಒಂದು ನಿಧಿ. ತಂದೆ ಬೈದರೂ ಅವನ ಮನಸ್ಸಿನಲ್ಲಿ ಬೆಟ್ಟದಷ್ಟು ಪ್ರೀತಿ ಇರುತ್ತದೆ ಎಂದು ಹೇಳಿದರು.  ಅಧ್ಯಕ್ಷತೆ ವಹಿಸಿದ್ದ ಕ.ವಿ.ವ. ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಮಾತನಾಡಿ, ಅಪ್ಪ ಪ್ರೀತಿ ವಿಶ್ವಾಸದ ಸಾಕಾರಮೂರ್ತಿ. ಆತನ ಕುಟುಂಬದ ಹಿತಕ್ಕಾಗಿ ಶ್ರಮಿಸುತ್ತಿರುವ ಮಹಾಶಕ್ತಿ. ತಮ್ಮ ಮಕ್ಕಳ ಏಳ್ಗೆಗಾಗಿ ಬಾಲ್ಯದಲ್ಲಿ ಬದುಕಿನ ಪಾಠ ಕಲಿಸಿದ ಪುಣ್ಯಾತ್ಮ. ದಿ. ಧರಮಪ್ಪ ಹೊರಕೇರಿ ಓರ್ವ ಆದರ್ಶ ಶಿಕ್ಷಕರಾಗಿ ವೃತ್ತಿಧರ್ಮ ಕಾಪಾಡಿಕೊಂಡು  ಕಷ್ಟದ ಹಾಗೂ ಕೊರತೆಯ ಮಧ್ಯೆ ಮಕ್ಕಳಿಗೆ ಒಳ್ಳೆಯ ಶಿಕ್ಷಣ-ಸಂಸ್ಕಾರ ನೀಡಿದವರು ಎಂದು ಸ್ಮರಿಸಿಕೊಳ್ಳುತ್ತಾ ಅವರು ತಮ್ಮ ಬಾಲ್ಯದ ಘಟನೆಗಳನ್ನು ನೆನಪಿಸಿಕೊಂಡರು.  ಇದೇ ಸಂದರ್ಭದಲ್ಲಿ ಹುಬ್ಬಳ್ಳಿಯ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕಿ ದಾಕ್ಷಾಯಿಣಿ ಬಿರಾದಾರ ಅವರಿಗೆ ಹೊರಕೇರಿ ಮಾಸ್ತರ ಪ್ರತಿಷ್ಠಾನದ ವತಿಯಿಂದ ‘ಸಾಧಕ ಶಿಕ್ಷಕಿ’ ಪುರಸ್ಕಾರ ನೀಡಿ ಗೌರವಿಸಲಾಯಿತು. ಸನ್ಮಾನಕ್ಕೆ ಪ್ರತಿಕ್ರಿಯಿಸಿ ದಾಕ್ಷಾಯಿಣಿ ಬಿರಾದಾರ ಮಾತನಾಡಿದರು. ಸಂಶೋಧಕಿ ಪ್ರೀತಿ ಪಾಟೀಲರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಉಪಸ್ಥಿತರಿದ್ದ ದತ್ತಿದಾನಿ ಡಾ. ಲಿಂಗರಾಜ ಹೊರಕೇರಿ ದತ್ತಿ ಆಶಯ ಕುರಿತು ಮಾತನಾಡಿದರು.  ಡಾ. ಸಂಜೀವ ಕುಲಕರ್ಣಿ ಸ್ವಾಗತಿಸಿದರು. ಡಾ. ಮಹೇಶ ಧ. ಹೊರಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಜಿನದತ್ತ ಹಡಗಲಿ ನಿರೂಪಿಸಿದರು. ವೀರಣ್ಣ ಒಡ್ಡೀನ ವಂದಿಸಿದರು.  ಡಾ. ಶೈಲಜಾ ಅಮರಶೆಟ್ಟಿ, ಡಾ. ಸುರೇಶ ಹೊರಕೇರಿ, ಡಾ. ವಾಘಮೋಡೆ ವಿಠಲ, ವ್ಹಿ. ಜಿ. ಪಾಟೀಲ, ಸೋಮನಗೌಡ ಪಾಟೀಲ, ಡಾ. ಲಿಂಗರಾಜ ಅಂಗಡಿ, ಡಾ. ಬಸು ಬೇವಿನಗಿಡದ, ಹಿರೇಮಠ, ಬಸವಂತಪ್ಪ ತೋಟದ, ಅನಿಲ ಧಾರವಾಡಕರ, ಶಾಂತವೀರ ಬೆಟಗೇರಿ, ಮಹಾಂತೇಶ ನರೇಗಲ್, ಎಸ್‌.ಎಸ್‌. ದೊಡಮನಿ, ಬಸಯ್ಯ ಶಿರೋಳ, ಬಿ.ಎಸ್‌. ಮಾಳವಾಡ, ರಾಜೇಂದ್ರ ಸಾವಳಗಿ ಸೇರಿದಂತೆ ಹೊರಕೇರಿ ಕುಟುಂಬದವರು, ಅಭಿಮಾನಿಗಳು ಇದ್ದರು.