ಗೋಡಂಬಿ ಬೆಳೆಯಲು ರೈತರು ಮುಂದಾಗಿ : ಡಾ.ಗಾಣಿಗೇರ
ಬಾಗಲಕೋಟೆ 19: ಜಿಲ್ಲೆಯಲ್ಲಿ ಫಲವತ್ತಾದ ಭೂಮಿ, ಘಟಪ್ರಭಾ ಮಲಪ್ರಭಾ ನದಿಗಳ ನೀರು ಇದೆ. ಅಲ್ಲದೆ ಆಲಮಟ್ಟಿ ಹಿನ್ನೀರಿನಿಂದ ಸಾಕಷ್ಟು ಅವಕಾಶ ಇರುವುದರಿಂದ ಜಿಲ್ಲೆಯ ರೈತರು ಗೋಡಂಬಿಯನ್ನು ಮುಕ್ತವಾಗಿ ಬೆಳೆಯಬಹುದಾಗಿದೆ ಎಂದು ತೋಟಗಾರಿಕೆ ವಿಶ್ವವಿದ್ಯಾಲಯದ ತರಬೇತಿ ಕೇಂದ್ರದ ಮುಖ್ಯಸ್ಥ ಡಾ.ವಸಂತ್ ಗಾಣಿಗೇರ ಹೇಳಿದರು.
ತುಳಸಿಗೇರಿಯಲ್ಲಿ ತೋಟಗಾರಿಕೆ ಮಹಾವಿದ್ಯಾಲಯ ಮತ್ತು ರೈತ ಹಾಗೂ ಸಿಬ್ಬಂದಿ ತರಬೇತಿ ಕೇಂದ್ರ, ತೋವಿವಿಯ ವಿಸ್ತರಣಾ ನಿರ್ದೇಶನಾಲಯ, ಗೇರು ಮತ್ತು ಕೋಕೋ ಅಭಿವೃದ್ದಿ ನಿರ್ದೇಶನಾಲಯ ಕೊಚ್ಚಿ ಸಹಯೋಗದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಗೋಡಂಬಿ ಬೆಳೆಯ ವೈಜ್ಞಾನಿಕ ಉತ್ಪಾದನಾ ಹಾಗೂ ಸಂಸ್ಕರಣಾ ತಂತ್ರಜ್ಞಾನ ಕುರಿತು ತರಬೇತಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ರೋಗ ಕೀಟಗಳ ಬಾಧೆ ಇಲ್ಲದ ಕಡಿಮೆ ನೀರಿನಲ್ಲಿ ಬೆಳೆಯಬಹುದಾಗಿದ್ದ ಗೋಡಂಬಿ ಇಂದು ಬಾಗಲಕೋಟೆಯಲ್ಲಿ ಹಲವು ರೈತರು ಬೆಳೆಯುತ್ತಿದ್ದಾರೆ ಎಂದರು.
ಸಾಂಪ್ರದಾಯಿಕ ಬೆಳೆಗಳಾದ ಜೋಳ, ಗೋದಿ ಮತ್ತಿತರ ದವಸ ಧಾನ್ಯಗಳ ಜೊತೆಗೆ ಗೋಡಂಬಿಯನ್ನು ಬೆಳೆಯಬಹುದಾಗಿದೆ. ಗೋಡಂಬಿ ನಾಟಿ ಮಾಡಿದ ಮೂರು ವರ್ಷದವರೆಗೆ ಪರ್ಯಾಯ ಬೆಳೆಗಳನ್ನು ಬೆಳೆದುಬಹುದಾಗಿದೆ. ಅನಾದಿಕಾಲದಿಂದಲೂ ಸಾಂಪ್ರದಾಯಿಕ ಬೆಳೆ ನೆಚ್ಚಿಕೊಂಡ ರೈತರು ಆರ್ಥಿಕವಾಗಿ ದುರ್ಬಲರಾಗುತ್ತಿದ್ದು, ನವೀನ ಮಾದರಿಯ ಕೃಷಿಗೆ ಒತ್ತು ಕೊಡುವದರ ಜೊತೆಗೆ ಸಾಂಪ್ರದಾಯ ಬೆಳೆಗಳನ್ನು ಕೂಡ ಬೆಳೆಬೇಕಾಗಿದೆ. ಈ ನಿಟ್ಟಿನಲ್ಲಿ ಗೋಡಂಬಿ ಬೆಳೆ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಲು ಅನುಕೂಲವಾಗಿರುವ ಬೆಳೆಯಾಗಿದ್ದು, ಮೇಲಾಗಿ ನಮ್ಮ ವಾತಾವರಣಕ್ಕೆ ಬರುವಂತ ಬೆಳೆಯಾಗಿದೆ ಎಂದರು.
ರೈತರು ಗೋಡಂಬಿ ಬೆಳೆಗೆ ಹಾಗೂ ಕೋಕೋ ಬೆಳೆಗೆ ಹೆಚ್ಚಿನ ಆದ್ಯತೆಯನ್ನು ನೀಡಿ ಆರ್ಥಿಕವಾಗಿ ಸಾಮಾಜಿಕವಾಗಿ ತಾವು ಪ್ರಬಲರಾಗಬೇಕು. ಬಾಗಲಕೋಟೆ ತೋಟಗಾರಿಕಾ ವಿಶ್ವವಿದ್ಯಾಲಯ ನಮ್ಮ ಭಾಗದ ರೈತರ ಸರ್ವಾಣಗಿನ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ. ಮಹಿಳೆಯರಿಗೆ ಕೌಶಲ್ಯ ತರಬೇತಿ ಜೊತೆ ಬೇಕರಿ, ಮಶ್ರೂಮ್ ಹೂಗುಚ್ಚ, ಜೇನು ಸಾಗಾಣಿಕೆ ಸೇರಿದಂತೆ ಅನೇಕ ತರಬೇತಿಗಳನ್ನು ನೀಡಲಾಗುತ್ತಿದೆ. ತುಳಸಿಗೇರಿ ಹಾಗೂ ಸುತ್ತಮುತ್ತ ಗ್ರಾಮದ ಮಹಿಳೆಯರು ವಿಶ್ವವಿದ್ಯಾಲಯಕ್ಕೆ ಬಂದಲ್ಲಿ ಅವರಿಗೆ ತರಬೇತಿಯನ್ನು ನೀಡಿ ಬೆಳೆಯ ಬಗ್ಗೆ ಮಾಹಿತಿಯನ್ನು ನೀಡಲಾಗುವುದು ಈ ಸದುಪಯೋಗವನ್ನು ಪ್ರತಿ ಗ್ರಾಮದ ಮಹಿಳೆಯರು ಕೂಡ ಪಡೆದುಕೊಳ್ಳಬಹುದಾಗಿದೆ ಎಂದರು.
ತೋವಿವಿಯ ಸಹಪ್ರಾಧ್ಯಾಪಕ ವಿಜಯ ಕುಮಾರ ನಾರಾಯಣಪುರ ಮಾತನಾಡಿ ಗೋಡಂಬಿ ಬೆಳೆ ನಮ್ಮ ದೇಶದ ಬೆಳೆ ಅಲ್ಲ. ಇದು 1510 ರಲ್ಲಿ ವಾಸ್ಕೋಡಿಗಾಮ ಭಾರತಕ್ಕೆ ಬಂದಾಗ ಇಲ್ಲಿಯ ಮಣ್ಣಿನ ಸವಕಳಿಯನ್ನು ತಡೆಯಲು ಈ ಗಿಡಗಳನ್ನು ನೆಡಿಸಲಾಗಿತ್ತು. 1910 ರಲ್ಲಿ ಗೋಡಂಬಿಯ ಮಹತ್ವ ತಿಳಿದ ನಂತರ ಇದನ್ನು ಲಾಭದಾಯಕ ಬೆಳೆಯನ್ನಾಗಿ ಪರಿವರ್ತನೆಗೊಳ್ಳಲಾಗಿತ್ತು. ಮೊದ ಮೊದಲು ಕರಾವಳಿ ಹಾಗೂ ಮಲೆನಾಡು ಪ್ರದೇಶಗಳಲ್ಲಿ ಈ ಬೆಳೆಯನ್ನು ಬೆಳೆಯಲಾಗುತ್ತಿತ್ತು. ನಂತರ ಅರೆ ಮಲೆನಾಡು ಪ್ರದೇಶದಲ್ಲಿ ಬೆಳೆದು ಲಾಭದಾಯಕವಾಗುತ್ತಿದ್ದಂತೆ ಇಂದು ನಮ್ಮ ಭಾಗದಲ್ಲೂ ಕೂಡ ಗೋಡಂಬಿ ಬೆಳೆಯನ್ನು ಬೆಳೆಯಬಹುದಾಗಿದೆ ಎಂದರು.
ನಮ್ಮ ದೇಶದಲ್ಲಿ ಗೋವಾ ಹೊರತುಪಡಿಸಿ ಬೇರೆ ಜಿಲ್ಲೆಗಳಲ್ಲಿ ಇದನ್ನು ಬೆಳೆಯುತ್ತಿದ್ದಿಲ್ಲ. ಆದರೆ ನಮ್ಮ ದೇಶಕ್ಕೆ 8 ಲಕ್ಷ ಟನ್ ಬೆಳೆಯಲಾಗುತ್ತಿದ್ದು, 16 ಲಕ್ಷ ಟನ್ ಬೇಡಿಕೆ ಇದೆ. ಇದರಿಂದಾಗಿ ಆಫ್ರಿಕಾ ಹಾಗೂ ಇತರೆ ದೇಶಗಳಿಂದ ಗೋಡಂಬಿಯನ್ನು ತರಿಸಿಕೊಳ್ಳಲಾಗುತ್ತಿದೆ. ಇದನ್ನು ಮನಗಂಡ ರೈತರು ತಾವು ಕೂಡ ಈ ಬೆಳೆಯನ್ನು ಬೆಳೆದಲ್ಲಿ ಬೇರೆ ದೇಶದವರ ಮೇಲೆ ನಾವು ಅವಲಂಬಿತರಾಗದೆ ನಮ್ಮ ದೇಶದಲ್ಲಿ ಬೆಳೆಬಹುದಾದ ದಾಳಂಬಿ ಬೆಳೆಯನ್ನು ಬೆಳೆಯಲು ಮುಂದಾಗಬೇಕು ಎಂದರು.
ಸಹಪ್ರಾಧ್ಯಾಪಕ ಡಾ.ರಮೇಶ್ ಮಾತನಾಡಿ ಗೋಡಂಬಿ ಬೆಳೆಗೆ ರೋಗಗಳು ಬೀಳುವುದಿಲ್ಲ ದಾಳಿಂಬೆ ಹಾಗೂ ದ್ರಾಕ್ಷಿ ಬೆಳೆಗಳನ್ನು ಹೋಲಿಸಿದಾಗ ಗೋಡಂಬಿಗೆ ರೋಗಗಳು ಎರಡೇ ಎರಡು ಬೀಳುತ್ತಿದ್ದು, ಅದರಲ್ಲಿ ಹೊಸ ಚಿಗುರು ಬಂದ ಸಮಯದಲ್ಲಿ ರೋಗ ಬರುವ ಲಕ್ಷಣವಿದೆ. ಅಲ್ಲಲ್ಲಿ ಎಲೆ ಚುಕ್ಕಿ ರೋಗದಂತ ಶಿಡುಬುರೊಗ ಬರುವ ಸಾಧ್ಯತೆ ಇದ್ದು, ಇವೆಲ್ಲ ಭಯಾನಕ ರೋಗಗಳು ಅಲ್ಲ. ಆ ಸಂದರ್ಭದಲ್ಲಿ ಓಷಧಿಗಳನ್ನು ಸಿಂಪಡಿಸಿ ಹತೋಟಿಗೆ ತರಬಹುದಾಗಿದೆ ಎಂದರು.
ಸಹಪ್ರಾಧ್ಯಾಪಕ ಡಾ.ಚಂದನ ಮಾತನಾಡಿ ಪ್ರತಿಯೊಂದು ಬೆಳೆ ಬೆಳೆದು ಉತ್ಪನ್ನ ತೆಗೆಯುವುದರ ಜೊತೆಗೆ ಮಾರಾಟದ ಸಮಸ್ಯೆ ಇದೆ. ಕೊಯ್ಲೋತ್ತರ ಸಮಸ್ಯೆಗಳು ಹೆಚ್ಚಾಗಿರುವುದರಿಂದ ರೈತರಿಗೆ ಬೆಳೆಯ ಲಾಭ ದೊರಕುತ್ತಿಲ್ಲ. ಆ ನಿಟ್ಟಿನಲ್ಲಿ ಗೋಡಂಬಿ ಬೆಳೆಗೆ ತೋಟಗಾರಿಕೆ ವಿಶ್ವವಿದ್ಯಾನಿಲಯವು ರೈತರಿಗಾಗಿ ಮಾರುಕಟ್ಟೆ ವ್ಯವಸ್ಥೆಗಳನ್ನು ಕೂಡ ಮಾಡಿಕೊಡಲಾಗಿದ್ದು, ಅದಕ್ಕೆ ಗೋಡಂಬಿ ಬೆಳೆಗೆ ಸಂಬಂಧಿಸಿದಂತೆ ತರಬೇತಿಯನ್ನು ಕೂಡ ನೀಡಲಾಗುತ್ತಿದೆ. ಗ್ರಾಮಸ್ಥರು ಗೋಡಂಬಿ ಬೆಳೆಯಲು ನಿರ್ಧರಿಸಿದರೆ ನಾವು ಬಂದು ತಮ್ಮ ಜಮೀನನ್ನು ನೋಡಿ ಅಲ್ಲಿಯ ಮಣ್ಣು ನೀರು ಪರೀಕ್ಷಿಸಿ ಗೋಡಂಬಿ ಬೆಳೆಯಲು ಸೂಕ್ತವಾದ ಸ್ಥಳವಾಗಿದ್ದಲ್ಲಿ ತೋಟಗಾರಿಕೆ ವಿವಿಯಿಂದ ಸಹಾಯಧನದ ರೂಪದಲ್ಲಿ ಕೃಷಿ ಪರಿಹಾರಗಳನ್ನು ದೊರಕಿಸಿ ಅವರಿಗೆ ಅನುಕೂಲ ಮಾಡಿಕೊಡಲಾಗುವುದು ಎಂದರು.
್ಲ ತುಳಸಿಗೇರಿಯಲ್ಲಿ ಹಾಗೂ ನಮ್ಮ ಜಿಲ್ಲೆಯಲ್ಲಿ ಗೋಡಂಬಿ ಬೆಳೆದ ರೈತ ಸಿ.ಎಂ.ದಾಸನ್ನವರ ಹಾಗೂ ಪ್ರಭು ಮುಗಳೊಳ್ಳಿ ಅವರನ್ನು ಸತ್ಕರಿಸಲಾಯಿತು. ಕಾರ್ಯಕ್ರಮದಲ್ಲಿ ಎಲ್.ಆರ್.ಪಾಟೀಲ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವೆಂಕಣ್ಣ ಬಾಲರೆಡ್ಡಿ ಸ್ವಾಗತಿಸಿ, ವಂದಿಸಿದರು. ಬಾಲಚಂದ್ರ ರೂಗಿ ಕಾರ್ಯಕ್ರಮ ನಿರೂಪಿಸಿದರು.
ವ್ಯಯಕ್ತಿಕ ಶೌಚಾಲಯ ನಿರ್ಮಾಣಕ್ಕೆ ಸಹಾಯಧನ
ಬಾಗಲಕೋಟೆ 19: ಸ್ವಚ್ಛ ಭಾರತ ಮಿಷನ್ ಮಾರ್ಗಸೂಚಿಯನ್ವಯ ವೈಯಕ್ತಿಕ ಶೌಚಾಲಯಗಳ ನಿರ್ಮಾಣಕ್ಕಾಗಿ ಬಾಗಲಕೋಟೆ ನಗರಸಭೆಗೆ 75 ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕೆ 22.55 ಲಕ್ಷ ರೂ.ಗಳ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಪಾಲಿನ ಅನುದಾನವನ್ನು ಬಿಡುಗಡೆ ಮಾಡಲಾಗಿರುತ್ತದೆ. ಆದ್ದರಿಂದ ಸಾರ್ವಜನಿಕರು ಮನೆ ಉತಾರ, ಅರ್ಜಿ ದಾರರ ಭಾವಚಿತ್ರ, ಆಧಾರ ಕಾರ್ಡ, ರೇಷನ್ ಕಾರ್ಡ, ಬ್ಯಾಂಕ್ ಪಾಸ್ ಬುಕ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರದೊಂದಿಗೆ ಅರ್ಜಿ ಸಲ್ಲಿಸುವಂತೆ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
21ರಂದು ವಿವಿಧ ಹುದ್ದೆಗಳಿಗೆ ನೇರ ಸಂದರ್ಶನ
ಬಾಗಲಕೋಟೆ 19: ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಮಾರ್ಚ 21 ರಂದು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 3 ಗಂಟೆವರೆಗೆ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ವಿವಿಧ ಹುದ್ದೆಗಳಿಗೆ ನೇರ ಸಂದರ್ಶನ ಆಯೋಜಿಸಲಾಗಿದೆ. ನೇರ ಸಂದರ್ಶನದಲ್ಲಿ ಖಾಸಗಿ ಕಂಪನಿಗಳು ಭಾಗವಹಿಸಿ ಹಲವಾರು ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಿದ್ದಾರೆ.
ನೇರ ಸಂದರ್ಶನದಲ್ಲಿ 19 ರಿಂದ 35 ವಯೋಮಿತಿಯಲ್ಲಿರುವ ಎಸ್.ಎಸ್.ಎಲ್.ಸಿ, ಪಿಯುಸಿ, ಐಟಿಐ ಹಾಗೂ ಯಾವುದೇ ಪದವೀಧರರು ಭಾಗವಹಿಸಬಹುದಾಗಿದೆ. ಈ ನೇರ ಸಂದರ್ಶನದಲ್ಲಿ ಭಾಗವಹಿಸುವ ಅಭ್ಯರ್ಥಿಗಳು ತಮ್ಮ ಬಯೋಡಾಟಾ ಮತ್ತು ಮೂಲ ಅಂಕಪಟ್ಟಿಗಳ ಝರಾಕ್ಸ್ ಪ್ರತಿಗಳೊಂದಿಗೆ ಭಾಗವಹಿಸಿ ನೇರ ಸಂದರ್ಶನದ ಸದುಪಯೋಗ ಪಡಿಸಿಕೊಳ್ಳುವಂತೆ ಜಿಲ್ಲಾ ಉದ್ಯೋಗಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ದೂಸಂ.08354-235337ಗೆ ಸಂಪರ್ಕಿಸಬಹುದಾಗಿದೆ.
ವಾಣಿಜ್ಯ ತೋಟಗಾರಿಕೆ ತರಬೇತಿಗೆ ಅರ್ಜಿ
ಬಾಗಲಕೋಟೆ 19: ಕೆನರಾ ಬ್ಯಾಂಕ್ ಆರ್‌ಸೆಟಿ ಸಂಸ್ಥೆಯು 19 ರಿಂದ 45 ವರ್ಷದ ಗ್ರಾಮೀಣ ಭಾಗದ ನಿರುದ್ಯೋಗ ಯುವಕ, ಯುವತಿಯರಿಗಾಗಿ ಎಪ್ರೀಲ್ ಮಾಹೆಯಲ್ಲಿ ಪಾಪಡ ಪಿಕಲ್, ಮಸಾಲಾ ಪೌಡರ, ಕುರಿ ಸಾಕಾಣಿಕೆ, ಮಹಿಳೆಯರಿಗಾಗಿ ಹೊಲಿಗೆ ತರಬೇತಿ ನೀಡುವ ಸಲುವಾಗಿ ಅರ್ಜಿ ಆಹ್ವಾನಿಸಲಾಗಿದೆ. ತರಬೇತಿ ಊಟ, ವಸತಿಯೊಂದಿಗೆ ಸಂಪೂರ್ಣ ಉಚಿತವಾಗಿದ್ದು, ಸ್ವ-ಉದ್ಯೋಗ ಮಾಡಲು ಅನುಕೂಲವಾಗಲಿದೆ. ಆಸಕ್ತರು ನಿರ್ದೇಶಕರು, ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟ್ ಸಂಸ್ಥೆ, ಹಳಿಯಾಳ, ಉತ್ತರ ಕನ್ನಡ ಜಿಲ್ಲೆ ಮೊನಂ.8970145354, 9980510717, 9483485489, 9482188780ಗೆ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.