ರೈತರು ಸಾವಯವ ಕೃಷಿಗೆ ಒತ್ತು ನೀಡಬೇಕು- ಶಾಸಕ ಕೆ.ರಾಘವೇಂದ್ರ ಹಿಟ್ನಾಳ

Farmers should emphasize organic farming - MLA K. Raghavendra Hitna

ರೈತರು ಸಾವಯವ ಕೃಷಿಗೆ ಒತ್ತು ನೀಡಬೇಕು- ಶಾಸಕ ಕೆ.ರಾಘವೇಂದ್ರ ಹಿಟ್ನಾಳ 

ಕೊಪ್ಪಳ 18: ಇತ್ತಿಚೆಗೆ ಸಿರಿಧಾನ್ಯಗಳಿಗೆ ಬೇಡಿಕೆ ಹೆಚ್ಚುತ್ತಿರುವುದರಿಂದ ರೈತರು ಸಾವಯವ ಬೆಳೆಗಳನ್ನು ಬೆಳೆಯಲು ಒತ್ತು ನೀಡಬೇಕು ಮತ್ತು ಇದಕ್ಕೆ ಕೃಷಿ ಇಲಾಖೆಯವರು ಪ್ರೋತ್ಸಾಹ ನೀಡಬೇಕೆಂದು ಕೊಪ್ಪಳ ಕ್ಷೇತ್ರದ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ ಹೇಳಿದರು. 

ಅವರು ಶನಿವಾರ ಜಿಲ್ಲಾಡಳಿತ. ಜಿಲ್ಲಾ ಪಂಚಾಯತ. ಕೃಷಿ ಇಲಾಖೆ ಕೊಪ್ಪಳ ಇವರ ಸಹಯೋಗದಲ್ಲಿ ಕೊಪ್ಪಳ ನಗರದ ಮಧುಶ್ರೀ ಗಾರ್ಡನಲ್ಲಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಮಟ್ಟದ ಸಾವಯವ ಮತ್ತು ಸಿರಿಧಾನ್ಯ ಮೇಳ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. 

ನಮ್ಮ ಹಿರಿಯರು ಸಿರಿಧಾನ್ಯಗಳನ್ನು ಸೇವಿಸುತ್ತಿರುವುದರಿಂದಲೆ ಅವರು  80 ರಿಂದ  90 ವರ್ಷಗಳ ಕಾಲ  ಬದುಕುತ್ತಿದ್ದರು. ಆದರೆ ಇಂದು ನಾವು ಹೆಚ್ಚಿನ ಇಳುವರಿ ಪಡೆಯಲು ಶೇ. 60 ಕ್ಕಿಂತಲೂ ಹೆಚ್ಚು ರಾಸಾಯನಿಕ ಗೊಬ್ಬರವನ್ನು ನಮ್ಮ ಹೊಲಗಳಿಗೆ ಹಾಕುತ್ತಿದ್ದೆವೆ. ಇದರಿಂದ ನಮಗೆ ಬಿ.ಪಿ ಮತ್ತು ಶುಗರ್ ಸೇರಿದಂತೆ ಹಲವಾರು ಕಾಯಿಲೆಗಳು ಬರುವದರ ಜೊತೆಗೆ ನಮ್ಮ ಜೀವನಾಂಶವು ಕಡಿಮೆಯಾಗಿದೆ ಎಂದರು. 

ಸರಕಾರ ರೈತರಿಗಾಗಿ ಹನಿ ನೀರಾವರಿ. ಕೃಷಿ ಹೊಂಡಗಳ ನಿರ್ಮಾಣ. ಸೇರಿದಂತೆ ಹಲವಾರು ಯೋಜನೆಗಳನ್ನು ಕೃಷಿ ಮತ್ತು ತೋಟಗಾರಿಕೆ ಇಲಾಖೆ ಮೂಲಕ ರೈತರಿಗೆ ನೀಡುತ್ತಿದೆ. ಇಂದು ಕೃಷಿಯಲ್ಲಿ ಅನೇಕ ಹೊಸ ತಂತ್ರಜ್ಞಾನಗಳು ಬೆಳೆದಿವೆ. ಜೆಲ್ಲೆಯಲ್ಲಿ ರೈತರಿಗೆ ನೀರಾವರಿ ಮಾಡಲು ಮೂರು ಏತ ನೀರಾವರಿ ಯೋಜನೆಗಳ ಕೆಲಸ ಮಾಡುತ್ತಿದ್ದೆವೆ ಎಂದು ಹೇಳಿದರು. 

ವಿಧಾನ ಪರಿಷತ್ ಸದಸ್ಯರಾದ ಹೇಮಲತಾ ನಾಯಕ ಮಾತನಾಡಿ ಜಗತ್ತು ಇಂದು ಸಿರಿಧಾನ್ಯಗಳ ಕಡೆಗೆ ದಾಪುಗಾಲು ಹಾಕುತ್ತಿದೆ. ಇವುಗಳಿಂದ ಬಿ.ಪಿ. ಶುಗರ್‌. ಕ್ಯಾನ್ಸರ್ ನಂತಹ ಹಲವಾರು ಕಾಯಿಲೆಗಳು ವಾಸಿಮಾಡುವ ಶಕ್ತಿ ಅವುಗಳಿಗಿದೆ. ನಮ್ಮ ಹಿಂದಿನ ಆಹಾರ ಪದ್ದತಿ ಮತ್ತೆ ಮರಳಿ ಬರುತ್ತಿದೆ. ಸಿರಿಧಾನ್ಯ ಬೆಳೆಗಳಾದ ಸಜ್ಜೆ. ನವಣೆ. ಬರಗು ಸೇರಿದಂತೆ ಇತರೆ ಆಹಾರ ಸೇವನೆಯಿಂದ ನಾವು ಉತ್ತಮ ಆರೋಗ್ಯವಂತರಾಗಿರುತ್ತೇವೆ. ಕೋಟಿ ವಿದ್ಯೆಗಳಲ್ಲಿ ಮೇಟಿ ವಿದ್ಯೆಯೆ ಮೇಲು ಎಂದು ಹೇಳಿದರು. 

ಕೊಪ್ಪಳ ನಗರಸಭೆ ಅಧ್ಯಕ್ಷರಾದ ಅಮ್ಜದ್ ಪಟೇಲ್ ಮಾತನಾಡಿ, ಕೃಷಿ ಇಲಾಖೆಯು ಸಿರಿಧಾನ್ಯ ಮೇಳ ಒಳ್ಳೆಯ ಕಾರ್ಯಕ್ರಮ ಹಮ್ಮಿಕೊಂಡಿದೆ. ನಾನು ರೈತನ ಮಗ ಆಗಿರುವುದರಿಂದ ರೈತರ ಕಷ್ಟ ನನಗೂ ಗೊತ್ತಿದೆ. ರೈತ ನಮ್ಮ ಅನ್ನದಾತ ಅವನಿಲ್ಲದಿದ್ದರೆ ನಮ್ಮ ಜೀವನ ಇಲ್ಲ. ರೈತರಿಗೆ ಕೃಷಿಯ ಬಗ್ಗೆ ಮಾಹಿತಿ ನೀಡುವ ಹಲವಾರು ಕಾರ್ಯಕ್ರಮಗಳನ್ನು ತಮ್ಮ ಇಲಾಖೆಯಿಂದ ಆಯೋಜನೆ ಮಾಡಬೇಕೆಂದು ಹೇಳಿದರು. 

ಗಂಗಾವತಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಕವಿತಾ ಹುಳ್ಳಿಕಾಶಿ ಅವರು ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಸಿರಿಧಾನ್ಯಗಳು ಆರೋಗ್ಯ ದೃಷ್ಟಿಯಿಂದ ಅಪಾರ ಮಹತ್ವವನ್ನು ಹೊಂದಿವೆ. ನವಣೆಯಿಂದ ತಯಾರಿಸಿದ ಆಹಾರವನ್ನು ಸೇವಿಸುವುದರಿಂದ ಸಕ್ಕರೆ ಕಾಯಿಲೆ, ರಕ್ತದೊತ್ತಡ ಮತ್ತು ನರ ದೌರ್ಬಲ್ಯವನ್ನು ನಿಯಂತ್ರಿಸಬಹುದು. ಸಿರಿಧಾನ್ಯಗಳು ಪೌಷ್ಠಿಕತೆಯಿಂದ ಸಮೃದ್ಧವಾಗಿದ್ದು, ಹೃದಯ ರೋಗ, ಮಧುಮೇಹ ನಿಯಂತ್ರಣ ಮತ್ತು ತೂಕ ಸಮತೋಲನಕ್ಕೆ ಸಹಾಯ ಮಾಡುತ್ತವೆ. ಈ ಆಹಾರಗಳ ಉಪಯುಕ್ತತೆಯನ್ನು ರೈತರಲ್ಲಿ ಜಾಗೃತಿಪಡಿಸುವುದು ಅತ್ಯಂತ ಅಗತ್ಯವಾಗಿದೆ. ಸುಧಾರಿತ ತಂತ್ರಜ್ಞಾನಗಳ ಉಪಯೋಗದ ಮೂಲಕ ಸಿರಿಧಾನ್ಯ ಬೆಳೆಗಳ ಉತ್ಪಾದನೆ ಮತ್ತು ಉತ್ಪಾದಕತೆಯನ್ನು ಹೆಚ್ಚಿಸಲು ಪ್ರಯತ್ನಿಸಬೇಕು. ಜೊತೆಗೆ, ಸಿರಿಧಾನ್ಯ ಬೆಳೆಗಳ ಮಾರುಕಟ್ಟೆ ಬೆಲೆ ಹೆಚ್ಚಿಸಲು ಮೌಲ್ಯವರ್ಧನೆ ಕುರಿತು ಅರಿವು ಮೂಡಿಸುವುದು ಬಹುಮುಖ್ಯವಾಗಿದೆ ಎಂದರು.  

ಕೃಷಿ ಇಲಾಖೆ ಜಂಟಿ ನಿರ್ದೇಶಕ ರುದ್ರೇಶಪ್ಪ ಟಿ.ಎಸ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಜನರಲ್ಲಿ ಸಿರಿಧಾನ್ಯಗಳ ಬಗ್ಗೆ ಅರಿವು ಮೂಡಿಸಲು ಕೃಷಿ ಇಲಾಖೆಯಿಂದ ಪ್ರತಿ ಜಿಲ್ಲೆಯಲ್ಲಿ ಸಾವಯವ ಮತ್ತು ಸಿರಿಧಾನ್ಯ ಮೇಳವನ್ನು ಹಮ್ಮಿಕೊಳ್ಳಲಾಗುತ್ತಿದೆ. ಜಿಲ್ಲಾ ಮಟ್ಟದ ಸಾವಯವ ಮತ್ತು ಸಿರಿಧಾನ್ಯ ಮೇಳದಲ್ಲಿ ಗುಣಮಟ್ಟದ ವಸ್ತು ಪ್ರದರ್ಶನಗಳು, ಉತ್ಪಾದಕರ-ಮಾರುಕಟ್ಟೆದಾರರ ಸಭೆಗಳು, ಸಾವಯವ ಆಹಾರ ಮಳಿಗೆಗಳು ಮತ್ತು ಬಳಕೆದಾರರೊಂದಿಗೆ ಸಂಪರ್ಕ, ಈ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅರಿವು ಮೂಡಿಸಲಾಗುತ್ತಿದೆ. ಸಾವಯವ ಕೃಷಿಯ ಒಟ್ಟಾರೆ ಅಭಿವೃದ್ಧಿಗೆ ಪೂರಕವಾಗಿದ್ದು, ಸಿರಿಧಾನ್ಯಗಳ ಬಗ್ಗೆ ಜಾಗೃತಿ ಮೂಡಿಸಲು ರಾಜ್ಯ ಸರ್ಕಾರವು ಜನವರಿ 23 ರಿಂದ 25 ರವರೆಗೆ ಬೆಂಗಳೂರಿನಲ್ಲಿ ಅಂತರರಾಷ್ಟ್ರೀಯ ಸಿರಿಧಾನ್ಯ ಮೇಳವನ್ನು ಹಮ್ಮಿಕೊಳ್ಳುತ್ತಿದ್ದು, ಇದರಲ್ಲಿ ಇತರೆ 10 ದೇಶಗಳು ಹಾಗೂ ನಮ್ಮ ದೇಶದ 20 ರಾಜ್ಯಗಳ ರೈತರು ಸೇರಿದಂತೆ ಹಲವಾರು ಜನರು ಭಾಗವಹಿಸುತ್ತಿದ್ದಾರೆ ಎಂದರು.  

ಕೈಪಿಡಿ ಬಿಡುಗಡೆ: ‘ಸಿರಿಧಾನ್ಯಗಳ ಅಧಿಕ ಉತ್ಪಾದನೆಗೆ ಸುಧಾರಿತ ತಾಂತ್ರಿಕತೆಗಳು ಹಾಗೂ ಮೌಲ್ಯವರ್ಧನೆ' ಕುರಿತ ಕೃಷಿ ಇಲಾಖೆಯಿಂದ ಸಿದ್ದಪಡಿಸಲಾದ ಕೈಪಿಡಿಯನ್ನು ಸಮಾರಂಭದಲ್ಲಿ ಬಿಡುಗಡೆ ಮಾಡಲಾಯಿತು.  

ಗಮನ ಸೆಳೆದ ಪ್ರದರ್ಶನ ಮಳಿಗೆಗಳು: ಸಾವಯವ ಮತ್ತು ಸಿರಿಧಾನ್ಯ ಮೇಳ ಕಾರ್ಯಕ್ರಮದ ನಿಮಿತ್ತ ಸಿರಿಧಾನ್ಯಗಳು ಮತ್ತು ಅವುಗಳಿಂದ ತಯಾರಿಸಲ್ಪಟ್ಟ ಖಾದ್ಯಗಳು ಹಾಗೂ ಸಾವಯವ ಪದಾರ್ಥಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳು ಸಾರ್ವಜನಿಕರ ಗಮನ ಸೆಳೆದವು. ಇದರ ಜೊತೆಗೆ ಕೃಷಿಗೆ ಸಂಬಂಧಿಸಿದ ಯಂತ್ರೋಪಕರಣಗಳನ್ನು ಪ್ರದರ್ಶನಕ್ಕಿರಿ ಅವುಗಳ ಖರೀದಿಗಾಗಿ ರೈತರಿಗೆ ಇರುವ ಸಹಾಯಧನ ಸೌಲಭ್ಯಗಳ ಮಾಹಿತಿಯನ್ನು ಸಹ ನೀಡಲಾಯಿತು. ರೈತ ಹಾಗೂ ರೈತ ಮಹಿಳೆಯರ ಉಡುಪುಗಳನ್ನು ಧರಿಸಿದ ಬಾಲ ಪ್ರತಿಭೆಗಳು ಕಾರ್ಯಕ್ರಮದಲ್ಲಿ ನೋಡುಗರ ವಿಶೇಷ ಗಮನ ಸೆಳೆದರು.    

ಕಾರ್ಯಕ್ರಮದಲ್ಲಿ ಕೊಪ್ಪಳ ಜಿಲ್ಲಾಧಿಕಾರಿ ನಲಿನ್ ಅತುಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ ರಾಮ್ ಎಲ್ ಅರಸಿದ್ದಿ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಕೃಷ್ಣ ಉಕ್ಕುಂದ, ಪಶು ಇಲಾಖೆ ಉಪನಿರ್ದೇಶಕ ಡಾ. ಪಿ.ಎಂ.ಮಲ್ಲಯ್ಯ, ಗಂಗಾವತಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ರಾಘವೇಂದ್ರ ಎಲಿಗಾರ, ರಾಯಚೂರಿನ ಕೃಷಿ ವಿಶ್ವ ವಿದ್ಯಾಲಯದ ಆಡಳಿತ ಮಂಡಳಿ ಸದಸ್ಯ ತಿಮ್ಮಣ್ಣ ಚೌಡಿ, ಕೊಪ್ಪಳ ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷರಾದ ಸಣ್ಣ ಹನುಮಪ್ಪ್ಪ ಹುಳ್ಳಿ, ಮಾಜಿ ಜಿ.ಪಂ ಸದಸ್ಯರಾದ ರಾಮಣ್ಣ ಚೌಡಕಿ ಹಾಗೂ ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ಆಗಮಿಸಿದ ರೈತರು, ಕೃಷಿ ಸಖಿಯರು, ಸಹಾಯಕ ಕೃಷಿ ಸಖಿಯರು ಸೇರಿದಂತೆ ಕೃಷಿ ಇಲಾಖೆಯ ಇತರೆ ಅಧಿಕಾರಿ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.