ರೈತರಿಗೆ ಸಮರ್ಕವಾಗಿ ವಿದ್ಯುತ್ ಪೂರೈಕೆ ಮಾಡುವಂತೆ ಆಗ್ರಹಿಸಿ, ಪ್ರತಿಭಟಿಸಿದ ರೈತರು
ಕಂಪ್ಲಿ 11: ವಿದ್ಯುತ್ ಸರಬರಾಜು ಪೂರೈಕೆಯಲ್ಲಿ ವ್ಯತ್ಯವಾಗುತ್ತಿದ್ದು, ಈ ಸಮಸ್ಯೆಗೆ ಮುಕ್ತಿ ನೀಡಿ, ರೈತರಿಗೆ ಅನುಕೂಲ ಮಾಡಿಕೊಡಬೇಕೆಂದು ಆಗ್ರಹಿಸಿ, ಅಖಿಲ ಕರ್ನಾಟಕ ರಾಜ್ಯ ಕಿಸಾನ್ ಜಾಗೃತಿ ಸಂಘದ ನೇತೃತ್ವದಲ್ಲಿ ರೈತರು ಪಟ್ಟಣದ ಅಂಬೇಡ್ಕರ್ ವೃತ್ತದಿಂದ ಜೆಸ್ಕಾಂ ಕಛೇರಿವರೆಗೆ ಮೆರವಣಿಗೆ ನಡೆಸಿ, ನಂತರ ಪ್ರತಿಭಟಿಸಿದರು. ನಂತರ ಜಿಲ್ಲಾಧ್ಯಕ್ಷ ಬಿ.ಗಂಗಾಧರ ಹಾಗೂ ತಾಲೂಕು ಅಧ್ಯಕ್ಷ ಗುಬಾಜಿ ರಾಮಾಂಜಿನಿ ಮಾತನಾಡಿ, ಕಂಪ್ಲಿ, ತಾಲೂಕಿನ ರಾಮಸಾಗರ, ಕಣಿವೆತಿಮ್ಮಲಾಪುರ, ನಂ.10 ಮುದ್ದಾಪುರ ಮತ್ತು ಸುತ್ತಮುತ್ತಲಿನ ಹಳ್ಳಿಗಳಲ್ಲಿ ವಿದ್ಯುತ್ ಸಮಸ್ಯೆಯಾಗಿದೆ. ರಾತ್ರಿ ವೇಳೆಯಲ್ಲಿ ವಿದ್ಯುತ್ ನೀಡುವುದರಿಂದ ರೈತರಿಗೆ ಕರಡಿ, ಚಿರತೆ ಮತ್ತು ಹಾವುಗಳಿಂದ ಹಾನಿ ಆಗಿರುತ್ತದೆ. ರಾತ್ರಿ ವೇಳೆಯಲ್ಲಿ ಪಂಪ್‌ಸೆಟ್ ಮೋಟರ್ ಚಾಲನೆ ಮಾಡುವ ಸಮಯದಲ್ಲಿ ವಿದ್ಯುತ್ ಅಪಘಾತ ಆಗುವ ಸಂಭವ ಇರುತ್ತದೆ. ಇದಕ್ಕೆ ಯಾರು ಹೊಣೆಗಾರರು ಜೆಸ್ಕಾಂ ಅಧಿಕಾರಿಗಳು ಹೊಣೆಗಾರರು ಆಗಿರುತ್ತಾರೆ. ಭತ್ತ ಇನ್ನಿತರ ಬೆಳೆಗಳು ತೆನೆ ಬಿಡುವ ಸಮಯದಲ್ಲಿ ವಿದ್ಯುತ್ ವ್ಯತ್ಯಯದಿಂದ ನೀರಿನ ಸಮಸ್ಯೆ ಆಗಿರುತ್ತದೆ. ಆದ ಕಾರಣ ತಾವುಗಳು ಬೆಳಿಗ್ಗೆ 4ಗಂಟೆಯಿಂದ 11 ಗಂಟೆವರೆಗೆ ಮತ್ತು ಮುಂದಿನ ವಾರದಲ್ಲಿ ಬೆಳಗ್ಗೆ 11 ಗಂಟೆಯಿಂದ ಸಂಜೆ 6 ಗಂಟೆವರೆಗೆ (ಸರ್ಕಾರ ಆದೇಶದ ಪ್ರಕಾರ 7 ತಾಸು ನೀಡಬೇಕೆಂದು ಇದೆ) ಪಂಪ್‌ಸೆಟ್‌ಗೆ ವಿದ್ಯುತ್ ಕೊಡಬೇಕು ಎಂದರು. ತದನಂತರ ಜೆಸ್ಕಾಂ ಎಇಇ ಮಲ್ಲಿಕಾರ್ಜುನಗೌಡ ಇವರಿಗೆ ಮನವಿ ಪತ್ರ ಸಲ್ಲಿಸಿದ ನಂತರ ರೈತರು ಹೋರಾಟ ಹಿಂಪಡೆದರು. ಈ ಸಂದರ್ಭದಲ್ಲಿ ತಾಲೂಕು ಉಪಾಧ್ಯಕ್ಷ ಉಳ್ಳಿ ರಾಮು, ಕಾರ್ಯದರ್ಶಿ ಸಿ.ಮಸ್ತಾನ್, ರೈತ ಮುಖಂಡರಾದ ಸಿ.ಮಲ್ಲಿಕಾರ್ಜುನ, ಎನ್.ಶಿವಪ್ಪ, ಜೆ.ಗಂಗಾಧರ, ವೆಂಕಟೇಶ, ಹರ್ಷಿತ್, ನೀಲಪ್ಪ, ನಾಗಪ್ಪ, ಶಂಕರ, ಕೆ.ಲಕ್ಷ್ಮಣ, ಗೋಪಿ, ಹನುಮಂತಪ್ಪ, ದುರುಗಪ್ಪ, ದೊಡ್ಡಬಸಪ್ಪ, ಮಂಜು, ಪ್ರದೀಪ್, ಉಷಾ ಸೇರಿದಂತೆ ಇತರರು ಇದ್ದರು.