ಸಮರಸದ ಬದುಕಿಗೆ ಜಾತ್ರೆಗಳು ಸಹಕಾರಿ: ರಂಭಾಪುರಿ ಜಗದ್ಗುರುಗಳು

ಲೋಕದರ್ಶನ ವರದಿ 

ಲಕ್ಷ್ಮೇಶ್ವರ 07: ಮನದ ಶಾಂತಿಗೆ ನೆಮ್ಮದಿಯ ಜೀವನಕ್ಕೆ ಧಮರ್ಾಚರಣೆ ಅವಶ್ಯಕ. ಅಧ್ಯಾತ್ಮದ ಅರಿವಿಗೆ ಧರ್ಮ ಮಾರ್ಗವೊಂದೇ ಕಾರಣ. ಸಮರಸ ಶಾಂತಿ ಬದುಕಿಗೆ ಜಾತ್ರೆಗಳು ಸಹಕಾರಿಯಾಗಿವೆ ಎಂದು ಬಾಳೆಹೊನ್ನೂರು ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ಡಾ. ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಅಭಿಪ್ರಾಯಪಟ್ಟರು. 

ಅವರು ಸಮೀಪದ ಮುಕ್ತಿಮಂದಿರ ಕ್ಷೇತ್ರದಲ್ಲಿ ಮಹಾಶಿವರಾತ್ರಿ ಜಾತ್ರಾ ಮಹೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.

ಅಧ್ಯಾತ್ಮದ ಸಂಪತ್ತು ಬೇಕಾದಷ್ಟಿದ್ದರೂ ಅದರ ಆಚರಣೆ ಇಲ್ಲದಂತಾಗಿದೆ. ಆಧುನಿಕತೆಗೆ ಮನಸೋತು ಸತ್ಯ ಸಂಸ್ಕೃತಿ ಮನುಷ್ಯ ಮರೆಯುತ್ತಿರುವುದರಿಂದ ಜೀವನ ಅಶಾಂತಿಯಿಂದ ತತ್ತರಿಸುತ್ತಿದೆ. ವೀರಶೈವ ಧರ್ಮ ಸಂಸ್ಕೃತಿಯಲ್ಲಿ ತತ್ವಕ್ಕಿಂತ ಆಚರಣೆಗೆ ಪ್ರಾಶಸ್ತ್ಯ ಕೊಟ್ಟಿದೆ. ಜಾತಿಗಿಂತ ನೀತಿ ಮೌಲ್ಯಗಳು ಪರಮ ಶ್ರೇಷ್ಠವೆಂದು ಸಾರಿದೆ. ಜಗದ್ಗುರು ರೇಣುಕಾಚಾರ್ಯರು ಜಾತಿ ಮತ ಪಂಥ ಮೀರಿ ಮಾನವೀಯತೆ ದೂರದೃಷ್ಠಿಯಿಂದ ವಿಶ್ವ ಬಂಧುತ್ವವನ್ನು ಬೋಧಿಸಿದ್ದಾರೆ. ಅಹಿಂಸಾದಿ ಧ್ಯಾನ ಪರ್ಯಂತರವಾದ ಧರ್ಮದ ದಶವಿಧ ಸೂತ್ರಗಳ ಪರಿಪಾಲನೆಯಿಂದ ಜೀವನ ಉಜ್ವಲಗೊಳ್ಳುವುದೆಂದು ಸಾರಿದ್ದಾರೆ. ಲಿಂ. ಶ್ರೀಮದ್ ರಂಭಾಪುರಿ ವೀರಗಂಗಾಧರ ಜಗದ್ಗುರುಗಳು ಸಾಮರಸ್ಯ ಸೌಹಾರ್ದ ಜೀವನಕ್ಕೆ ಕೊಟ್ಟ ತತ್ವ ಸಂದೇಶ ಎಂದೆಂದಿಗೂ ಅಮರ. ಅವರ ಲೋಕ ಪಾವನವಾದ ಚಿಂತನಗಳು ಮತ್ತು ಆದರ್ಶ ಮೌಲ್ಯಗಳನ್ನು ಸಾಕಾರಗೊಳಿಸುವ ದಾರಿಯಲ್ಲಿ ಭಕ್ತರು ಮುನ್ನಡೆಯಬೇಕೆಂದು ಶುಭ ಹಾರೈಸಿದರು.

ನೇತೃತ್ವ ವಹಿಸಿದ ವಿಮಲ ರೇಣುಕ ಮುಕ್ತಿಮುನಿ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಲಿಂ. ಶ್ರೀಮದ್ ರಂಭಾಪುರಿ ವೀರಗಂಗಾಧರ ಜಗದ್ಗುರುಗಳವರ ತ್ರಿಕೋಟಿ ಶಿವಲಿಂಗ ಪ್ರತಿಷ್ಠಾಪನೆಯ ಕಾರ್ಯಗಳು ಭರದಿಂದ ಸಾಗುತ್ತಲಿವೆ. ಭಕ್ತರ ಭಕ್ತಿ ಸಂವಧರ್ಿಸಿದಾಗ ಶೀಘ್ರ ಕಾರ್ಯ ಕೈಗೊಡುವುದರಲ್ಲಿ ಅನುಮಾನ ಇಲ್ಲವೆಂದರು. ವಿವಿಧೆಡೆಯಿಂದ ಹಲವಾರು ಮಠಾಧೀಶರು ಸಮಾಂಭದಲ್ಲಿ ಪಾಲ್ಗೊಂಡು ನುಡಿ ನಮನ ಸಲ್ಲಿಸಿದರು.

ಗದುಗಿನ ರಾಜಗುರು ಗುರುಸ್ವಾಮಿ ಕಲಕೇರಿ ಅವರಿಂದ ಸಂಗೀತ ಸೌರಭ ಜರುಗಿತು. ಸವಣೂರಿನ ಪ್ರೊ. ಗುರುಪಾದಯ್ಯ ಸಾಲಿಮಠ ನಿರೂಪಿಸಿದರು. ಸಮಾರಂಭಕ್ಕೂ ಮುನ್ನ ರಥೋತ್ಸವ ಅತ್ಯಂತ ಸಂಭ್ರಮದಿಂದ ಜರುಗಿತು. ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ಪುನೀತರಾದರು.