ಇಬ್ರಾಹಿಂಪುರದಲ್ಲಿ ವಿಜೃಂಭಣೆಯ ನಂದ ಬಸವೇಶ್ವರ ಜಾತ್ರೆ : ವೈಭವದ ನಂದಿಕೋಲ ಮೆರವಣಿಗೆ
ವಿಜಯಪುರ 26: ನಗರ ಹೊರವಲಯದ ಇಬ್ರಾಹಿಂಪುರದಲ್ಲಿ ನಂದಬಸವೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಬುಧವಾರ ಅಲಂಕೃತ ನಂದಿಕೋಲ ಮೆರವಣಿಗೆ ಅತ್ಯಂತ ವೈಭವದಿಂದ ನಡೆಯಿತು.ಭಕ್ತರ ಜಯಘೋಷಣೆ, ಹಾಗೂ ಮೈನವಿರೇಳಿಸುವ ಕರಡಿಮಜಲಿನ ವಾದ್ಯಮೇಳದೊಂದಿಗೆ ಮಧ್ಯಾಹ್ನ ನಂದಬಸವೇಶ್ವರ ದೇವಸ್ಥಾನದಿಂದ ಹೊರಟ ನಂದಿಕೋಲ ಮೆರವಣಿಗೆ ಪ್ರಮುಖ ಬೀದಿಯಲ್ಲಿ ಸಂಚರಿಸಿತು. ಮೆರವಣಿಗೆಯಲ್ಲಿ ನಂದಿಕೋಲ ಮುಂದೆ ಅಧಿಕ ಸಂಖ್ಯೆಯಲ್ಲಿ ಮಕ್ಕಳು, ಯುವಕರು ಹಿರಿಯರು ಹಾಗೂ, ನಂದಿಕೋಲ ಹಿಂದೆ ನೂರಾರು ಸುಮಂಗಲೆಯರು ಕೈಯ್ಯಲ್ಲಿ ಆರತಿ ತಟ್ಟೆ ಹಿಡಿದುಕೊಂಡು ಸಾಗುತ್ತಿದ್ದರು. ಹಲವಾರು ಯುವಕರು ಪಂಚೆ ಒಂದೇ ಬಗೆಯ ಬಣ್ಣದ ಅಂಗಿ ಹಾಗೂ ತಲೆಯ ಮೇಲೆ ಪೇಠಾ ಧರಿಸಿಕೊಂಡು ತಮ್ಮ ಗೆಳೆಯರ ಬಳಗದೊಂದಿಗೆ ಮೆರವಣಿಗೆಯಲ್ಲಿ ಭಾಗವಹಿಸಿದ್ದು ಎಲ್ಲರ ಗಮನ ಸೆಳೆಯಿತು. ಮೆರವಣಿಗೆಯುದ್ದಕ್ಕೂ ನಂದಿಕೋಲ ಮುಂದೆ ಯುವಕರು ಗುಂಪು ಗುಂಪಾಗಿ ನಿಂತುಕೊಂಡು ಸೆಲ್ಫಿ ತೆಗೆಸಿಕೊಳ್ಳುವುದು ನಡೆದೇ ಇತ್ತು. ಮೆರವಣಿಗೆ ತಮ್ಮ ತಮ್ಮ ಮನೆಗಳತ್ತ ಸಾಗಿ ಬರುವಾಗ ನೀರು ಹಾಕಿ ನಂದಿಕೋಲ ಬಸವಣ್ಣನಿಗೆ ಹೂಹಾರ, ಶಾಲು ಹಾಕಿ,ಆರುತಿ ಬೆಳಗಿ ಭಕ್ತಿಯಿಂದ ನಮಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಮೆರವಣಿಗೆಯ ವೇಳೆ ಅನೇಕರು ನಂದಿಕೋಲ ಮೇಲೆ ಚುರಮುರಿ, ಶೇಂಗಾ ಬಾಳೆಹಣ್ಣು, ಉತ್ತತ್ತಿಯನ್ನು ಹಾರಿಸಿ ಸಿಡಿಗಾಯಿ ಒಡೆದರು. ಮಲ್ಲಿಕಾರ್ಜುನ ದೇವಸ್ಥಾನದ ಮುಂದೆ ಜನಸಾಗರವೇ ಸೇರಿತ್ತು.ಸಂಜೆ 5 ಮೆರವಣಿಗೆ ಇಬ್ರಾಹಿಂಪುರದಿಂದ ಕನಕದಾಸ ಬಡಾವಣೆ, ಅಲ್ಲಾಪುರ ಓಣಿ ಮಾರ್ಗವಾಗಿ ಭಕ್ತರ ಮನೆಗಳಿಗೆ ಭೇಟಿ ಕೊಡುತ್ತ ಪವಾಡ ಬಸವೇಶ್ವರ ದೇವರ ಭೇಟಿಗೆ ತೆರಳಿತು. ಅನಂತರ ರೇಲ್ವೆ ಸ್ಟೇಷನ್ ಮುಂದಿರುವ ಕರ್ನಾಟಕ ಜಿನ್ನಿಂಗ್ ಫ್ಯಾಕ್ಟರಿ ಎದುರಿಗೆ ನಂದಬಸವೇಶ್ವರ ಹಾಗೂ ಪವಾಡಬಸವೇಶ್ವರ ದೇವರ ಎದುರುಗೊಳ್ಳುವ ಕಾರ್ಯಕ್ರಮ ನಡೆಯಿತು. ಅಲ್ಲಿಂದ ಮರಳಿ ನಂದಿಕೋಲ ಮೆರವಣಿಗೆ ತಡರಾತ್ರಿ ಇಬ್ರಾಹಿಂಪುರ ನಂದಬಸವೇಶ್ವರ ದೇವಸ್ಥಾನಕ್ಕೆ ಬಂದು ಸಂಪನ್ನಗೊಂಡಿತು. ಇಬ್ರಾಹಿಂಪುರ ಬಡಾವಣೆಯ ಹಿರಿಯರಾದ ಗಿರಮಲ್ಲಪ್ಪ ನುಚ್ಚಿ, ರೇವಣ್ಣ ನುಚ್ಚಿ, ಶಿವಸಂಗಪ್ಪ ಹಳ್ಳಿ, ಸೂರ್ಯಕಾಂತ ಗಡಗಿ, ಶಿವಪ್ಪ ಕೋವಳ್ಳಿ, ಮಹಾನಗರ ಪಾಲಿಕೆ ಸದಸ್ಯ ಕುಮಾರ ಗಡಗಿ, ಯುವ ಮುಖಂಡರಾದ ಸುನೀಲ ನುಚ್ಚಿ, ಸಂಪತ್ತಕುಮಾರ ಕೋವಳ್ಳಿ, ಗೀರೀಶ ಕವಟಗಿ, ಬಸವರಾಜ ಹಳ್ಳಿ, ಶಾಂತು ಗಲಗಲಿ, ಶಿವಾನಂದ ನುಚ್ಚಿ, ರೇವಣ್ಣ ಬಗಲಿ, ಸಂಗು ಹಳ್ಳಿ, ಪ್ರಕಾಶ ಗಡಗಿ, ಮಲ್ಲು ಗಡಗಿ, ಶಿವಾನಂದ ಗಡಗಿ, ಪ್ರವೀಣ ಹಳ್ಳಿ, ನಂದು ಹಳ್ಳಿ, ಮಲ್ಲು ಗಡಗಿ, ಪ್ರವೀಣ ಹಳ್ಳಿ, ರಮೇಶ ಬಗಲಿ ಸೇರಿದಂತೆ ಅನೇಕರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.