ಪರಿಸರ ಜಾಗೃತಿ ಕಾರ್ಯಕ್ರಮ.
ಕಾರವಾರ 25 :- ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಪ್ರಾದೇಶಿಕ ಕಛೇರಿ ವತಿಯಿಂದ ಕಾರವಾರ ನಗರಸಭೆಯ ಸಭಾಭವನದಲ್ಲಿ “ರಾಷ್ಟ್ರಿಯ ಐಕ್ಯತಾ ಸಪ್ತಾಹ” ಅಂಗವಾಗಿ ಪರಿಸರ ರಕ್ಷಣಾ ದಿನದ ಪ್ರಯುಕ್ತ ಸೋಮವಾರ ಪರಿಸರ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಪರಿಸರ ಅಧಿಕಾರಿ ಬಿ.ಕೆ. ಸಂತೋಷ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಪರಿಸರ ರಕ್ಷಣೆ ಎಲ್ಲರ ಕರ್ತವ್ಯವಾಗಿದ್ದು, ಘನತ್ಯಾಜ್ಯ , ನಿಷೇಧಿತ ಏಕ ಬಳಕೆಯ ಪ್ಲಾಸ್ಟಿಕ್, ಕಟ್ಟಡ ತ್ಯಾಜ್ಯ, ಇ-ತ್ಯಾಜ್ಯ, ಬ್ಯಾಟರಿ ತ್ಯಾಜ್ಯ, ಜೀವ ವೈದ್ಯಕೀಯ ತ್ಯಾಜ್ಯಗಳ ನಿರ್ವಹಣೆಯ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.
ಮನುಷ್ಯ ಪರಿಸರದ ಮೇಲೆ ನಿರಂತರ ದಾಳಿ ನಡೆಸಿದ್ದು, ಇದು ಹೀಗೆ ಮುಂದುವರೆದರೆ ನಮ್ಮ ಮಾನವನ ಸರ್ವನಾಶ ಆಗಲಿದೆ. ಇಂದಿನಿಂದಲೇ ಪರಿಸರದ ಸಂರಕ್ಷಣೆ ಬಗ್ಗೆ ಕಾಳಜಿ ವಹಿಸುವುದು ಮುಖ್ಯವಾಗಿದ್ದು, ಪರಿಸರ ಸಂರಕ್ಷಣೆಗಾಗಿ ನಮ್ಮ ದೈನಂದಿನ ಜೀವನದಲ್ಲಿ ಕೆಲವೊಂದು ಕ್ರಮಗಳನ್ನು ಅನುಸರಿಸಿದರೆ ಅದೇ ಪರಿಸರದ ಉಳಿವಿಗೆ ಸಹಾಯಕವಾಗುತ್ತದೆ ಎಂದು ತಿಳಿಸಿದರು.
ಕಾರವಾರ ನಗರಸಭೆ ಪೌರಾಯುಕ್ತ ಜಗದೀಶ ಬಾಬು ಹುಲಗೇಜ್ಜಿ ಮಾತನಾಡಿ ಪರಿಸರ ಸಂರಕ್ಷಣೆಯಲ್ಲಿ ಸ್ಥಳೀಯ ಸಂಸ್ಥೆಗಳ ಪಾತ್ರದ ಬಗ್ಗೆ ತಿಳಿಸಿ, ಘನತ್ಯಾಜ್ಯ, ಪ್ಲಾಸ್ಟಿಕ್ ತ್ಯಾಜ್ಯಗಳ ವೈಜ್ಞಾನಿಕ ವಿಲೇವಾರಿ ಬಗ್ಗೆ ಗಮನಹರಿಬೇಕಿದೆ ಎಂದರು.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಉಪ ಪರಿಸರ ಅಧಿಕಾರಿ ಡಾ. ಗಣಪತಿ ವಿಶೇಷ ಉಪನ್ಯಾಸ ಮ ನೀಡಿ ಮಾತನಾಡಿ, ರಾಷ್ಟ್ರಿಯ ಜಲ ಮಿಷನ್, ಜಲ ಶಕ್ತಿ ಮಂತ್ರಾಲಯ ಇವರ ಜಲ ಶಕ್ತಿ ಅಭಿಯಾನ ಬಗ್ಗೆ ಮಾತನಾಡುತ್ತ, ಜಲಶಕ್ತಿ ಅಭಿಯಾನವು ದೇಶದ ನೀರಿನ ಸಂರಕ್ಷಣೆ ಮತ್ತು ನೀರಿನ ಸುರಕ್ಷತೆಯ ಅಭಿಯಾನವಾಗಿದೆ. ನೀರಿನ ಸಂರಕ್ಷಣೆಯ ಅಗತ್ಯ ಮಹತ್ವ ಮತ್ತು ಜೀವ ಜಲದ ಪ್ರಾಮುಖ್ಯತೆಯ ಬಗ್ಗೆ ವಿವರಿಸಿದರು.
ನಗರಸಭೆ ಅದ್ಯಕ್ಷ ರವಿರಾಜ್ ಅಂಕೋಲೆಕರ್ ಅಧ್ಯಕ್ಷತೆ ವಹಿಸಿದ್ದರು. ಡಾ. ಅಮೃತಾ ಶೇಟ್, ಮಂಡಳಿಯ ಯೋಜನಾ ಸಹಾಯಕಿ ಪ್ರಾರ್ಥಿಸಿದರು, ಲೆಕ್ಕಪಾಲಕ ಮಂಜುನಾಥ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ನಗರಸಭೆಯ, ಹಿರಿಯ ಆರೋಗ್ಯ ನೀರೀಕ್ಷಕ ಯಾಕುಬ ಶೇಖ, ಕಿರಿಯ ಆರೋಗ್ಯ ನೀರೀಕ್ಷಕಿ ದೀಪಾ ಎಮ್. ಶೆಟ್ಟಿ ಹಾಗೂ ಕಾರವಾರ ನಗರಸಭೆಯ ಇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.