‘20 ಕೋಟಿ ರೂ. ಮೌಲ್ಯದ ಒತ್ತುವರಿ ಸರ್ಕಾರಿ ಜಮೀನು ವಶಕ್ಕೆ’
ವಿಜಯಪುರ 22: ಜಿಲ್ಲೆಯ ತಿಕೋಟಾ ತಾಲೂಕಿನ ಇಟ್ಟಂಗಿಹಾಳ ಗ್ರಾಮದ ವ್ಯಾಪ್ತಿಯಲ್ಲಿ ಒತ್ತುವರಿಯಾಗಿರುವ ಅಂದಾಜು 20 ಕೋಟಿ ರೂ. ಮೌಲ್ಯದ ಸರ್ಕಾರಿ ಜಮೀನನ್ನು ಒತ್ತುವರಿ ತೆರವುಗೊಳಿಸಿ ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ತಿಳಿಸಿದ್ದಾರೆ.
ಇಟ್ಟಂಗಿಹಾಳ ಗ್ರಾಮದ ವ್ಯಾಪ್ತಿಯ ಅಂದಾಜು 20 ಕೋಟಿ ರೂ. ಮೌಲ್ಯದ ಸರ್ಕಾರಿ ಜಮೀನನ್ನು ಕೆಲವರು ಅತಿಕ್ರಮಣ ಮಾಡಿಕೊಂಡು ಸದರಿ ಸರ್ಕಾರಿ ಜಮೀನನ್ನು ಮೋಸ ಮಾಡಿ ಮಾರಾಟ ಮಾಡುತ್ತಿರುವ ಬಗ್ಗೆ ತಿಳಿದು ಬಂದ ಹಿನ್ನಲೆಯಲ್ಲಿ ಮಾ.22ರಂದು ವಿಜಯಪುರ ಉಪವಿಭಾಗಾಧಿಕಾರಿಗಳು, ತಿಕೋಟಾ ತಹಶೀಲ್ದಾರರನ್ನೊಳಗೊಂಡು ಕಂದಾಯ ಇಲಾಖೆ, ಪೊಲೀಸ್ ಇಲಾಖೆಯೊಂದಿಗೆ ಅತಿಕ್ರಮಣ ಕಾರ್ಯಾಚರಣೆ ಕೈಗೊಂಡು ಒತ್ತುವರಿಯಾದ ಜಾಗವನ್ನು ತೆರವುಗೊಳಿಸಿ ಸರ್ಕಾರಿ ಜಾಗವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಸರ್ಕಾರಿ ಜಮೀನನ್ನು ಯಾರೂ ಅತಿಕ್ರಮಣ ಮಾಡಬಾರದು. ಸಾರ್ವಜನಿಕರು ಸಹ ಜಮೀನು-ಆಸ್ತಿ ಖರೀದಿಸುವಾಗ ಎಚ್ಚರಿಕೆ ವಹಿಸಬೇಕು. ಯಾರಾದರೂ ಮೋಸ ಹೋದಲ್ಲಿ ದೂರು ಸಲ್ಲಿಸಬೇಕು. ಜಮೀನು ಒತ್ತುವರಿ ಮಾಡಿಕೊಂಡಿರುವವರ ಮೇಲೆ ಕಾನೂನು ರಿತ್ಯ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.