ಮುಂಬೈ 16: ಮಾಡೆಲ್ ಓರ್ವಳನ್ನು ಯುವಕನೊಬ್ಬ ಬರ್ಬರವಾಗಿ ಹತ್ಯೆ ಮಾಡಿ ಶವವನ್ನು ಸೂಟ್‌ಕೇಸ್‌ನಲ್ಲಿ ತುಂಬಿ ತೆಗೆದುಕೊಂಡು ಹೋಗಿ ಬಿಸಾಡಿದ ಪ್ರಕರಣವೊಂದು ಮುಂಬೈನಲ್ಲಿ ನಡೆದಿದೆ.
ಕೊಲೆಯಾದ ಮಾಡೆಲ್ 20 ವರ್ಷದ ಮಾನ್ಸಿ ದೀಕ್ಷಿತ್ ಎಂದು ತಿಳಿದುಬಂದಿದೆ. 20 ವರ್ಷದ ವಿದ್ಯಾರ್ಥಿ ಮುಜಾಮಿಲ್ ಸೈಯಿದ್ ಮಾಡೆಲ್ ಹತ್ಯೆ ಮಾಡಿ ಅಂಧೇರಿಯಿಂದ ಮಲಾಡ್ ಗೆ ಶವವನ್ನು ಸೂಟ್ ಕೇಸ್ ನಲ್ಲಿ ತೆಗೆದುಕೊಂಡು ಹೋಗಿ ಬಿಸಾಕಿದ್ದಾನೆ.
ರಾಜಸ್ತಾನದ ಮಾನ್ಸಿ ದೀಕ್ಷಿತ್ ಮಾಡೆಲ್ ಆಗುವ ಕನಸು ಹೊತ್ತು ಮುಂಬೈಗೆ ಬಂದಿದ್ದಳು. ಈ ಮಧ್ಯೆ ಫೇಸ್ ಬುಕ್ ನಲ್ಲಿ ಮಾನ್ಸಿ ದೀಕ್ಷಿತ್ ಹಾಗೂ ಸೈಯಿದ್ ಪರಿಚಯವಾಗಿದೆ. ಸೋಮವಾರ ಮಧ್ಯಾಹ್ನ ಅಂಧೇರಿಯಲ್ಲಿ ಸೈಯಿದ್ ವಾಸವಿರುವ ಅಪಾರ್ಟ್ ಮೆಂಟ್ ನಲ್ಲಿ ಭೇಟಿಯಾಗಿದ್ದಾಳೆ. ಈ ವೇಳೆ ಇಬ್ಬರ ಮಧ್ಯೆ ಜಗಳ ನಡೆದು ಸೈಯಿದ್ ಕೈಗೆ ಸಿಕ್ಕ ವಸ್ತುವಿನಿಂದ ಹಲ್ಲೆ ಮಾಡಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಮಾನ್ಸಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.
ಬಳಿಕ ಸೈಯದ್, ಶವವನ್ನು ಕ್ಯಾಬ್ ನಲ್ಲಿ ಅಂಧೇರಿಯಿಂದ ಮಲಾಡ್ ಗೆ ಸೂಟ್‌ಕೇಸ್‌ನಲ್ಲಿ ಸಾಗಿಸಿದ್ದಾನೆ. ನಂತರ ಮಲಾಡ್ ನ ನಿರ್ಜನ ಪ್ರದೇಶದಲ್ಲಿ ಶವ ಬಿಸಾಡಿ ಆಟೋ ದಲ್ಲಿ ಹೊರಟಿದ್ದಾನೆ. ಇದೆಲ್ಲವನ್ನು ಗಮನಿಸಿದ ಕ್ಯಾಬ್ ಚಾಲಕ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.
ಸ್ಥಳಕ್ಕೆ ಬಂದ ಪೊಲೀಸರು ಸೂಟ್‌ಕೇಸ್ ತೆರೆದು ನೋಡಿದಾಗ ಮಾಡೆಲ್ ಶವ ಪತ್ತೆಯಾಗಿದೆ. ಈ ಸಂಬಂಧ ಸೈಯಿದ್ ನನ್ನು ಪೊಲೀಸರು ಬಂಧಿಸಿದ್ದಾರೆ.