ತುರ್ತು ಕಾಲುವೆಯಲ್ಲಿ ತುಂಬಿದ ಹೂಳು, ಜಲಸಸ್ಯ : ರೈತರ ಜಮೀನುಗಳಿಗೆ ಹರಿಯದ ನೀರು : ಅಧಿಕಾರಿಗಳ ನಿರ್ಲಕ್ಷ್ಯದ ಆರೋಪ
ಕಂಪ್ಲಿ 11: ಬುಕ್ಕಸಾಗರ ಗ್ರಾಮದಲ್ಲಿ ಹಾದು ಹೋಗಿರುವ ತುರ್ತು ಕಾಲುವೆಯಲ್ಲಿ ಹೂಳು ತುಂಬಿ, ಜಲಸಸ್ಯ ಆವರಿಸಿಕೊಂಡ ಪರಿಣಾಮ ಕೆಳ ಹಂತದ ರೈತರ ಹೊಲಗದ್ದೆಗಳಿಗೆ ನೀರು ತಲುಪುತ್ತಿಲ್ಲ. ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕಾಲುವೆ ಅಭಿವೃದ್ಧಿ ಕುಂಠಿತವಾಗಿದೆ. ಕೂಡಲೇ ಎಚ್ಚರವಹಿಸಿ ಜಲಸಸ್ಯ ತೆರವುಗೊಳಿಸಿ, ಕಾಲುವೆ ಅಭಿವೃದ್ಧಿಗೊಳಿಸಿ, ರೈತರಿಗೆ ನೀರಿನ ಅನುಕೂಲ ಮಾಡಿಕೊಡಬೇಕೆಂದು ಕರ್ನಾಟಕ ರಾಜ್ಯ ರೈತರ ಸಂಘ ಹಾಗೂ ಹಸಿರು ಸೇನೆ(ಜೆ.ಕಾರ್ತಿಕ್) ವಿಜಯನಗರ ಜಿಲ್ಲಾ ಘಟಕ ಮತ್ತು ಕಂಪ್ಲಿ ತಾಲೂಕು ಘಟಕದ ನೇತೃತ್ವದಲ್ಲಿ ರೈತರು ಹಕ್ಕೋತ್ತಾಯ ಮಾಡಿದರು. ಇಲ್ಲಿನ ಕಾಲುವೆ ಭಾಗದಲ್ಲಿ 400-500 ಎಕರೆಯಷ್ಟು ರೈತರ ಜಮೀನುಗಳಿದ್ದು, ಇಲ್ಲಿನ ರೈತರ ಹೊಲಗಳಿಗೆ ನೀರು ಸರಾಗವಾಗಿ ಹರಿಯುತ್ತಿಲ್ಲ.
ಇದರಿಂದ ರೈತರು ಸಂಕಷ್ಟಕೀಡಾಗಿದ್ದಾರೆ. ನೀರಿಲ್ಲದೇ ಸರಿಯಾಗಿ ಬೆಳೆಗಳ ಫಸಲುಗಳನ್ನು ತೆಗೆದುಕೊಳ್ಳಲು ಇನ್ನಿಲ್ಲದ ಕಸರತ್ತು ಮಾಡಬೇಕಾಗಿದೆ. ಕಾಲುವೆಯಲ್ಲಿ ಜಲಸಸ್ಯ ಹಾಗೂ ಹೂಳು ತುಂಬಿಕೊಂಡು, ಕಾಲುವೆ ಮುಚ್ಚುವ ಹಂತಕ್ಕೆ ಬಂದು ನಿಂತಿದೆ. ಇದರಿಂದ ನೀರು ಮುಂದಕ್ಕೆ ಹರಿಯದೇ, ನಿಂತಲ್ಲೇ ನಿಂತುಕೊಳ್ಳುವಂತಾಗಿದೆ. ಇಲ್ಲಿನ ಕಾಲುವೆಯ 102ಮತ್ತು103 ತೂಬ್‌ಗಳ ತೈಲ್ಯಾಂಡ್‌ನ ರೈತರ ಗೋಳು ಕೇಳುವವರು ಇಲ್ಲದಂತಾಗಿದೆ. ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ, ನಿರ್ಲಕ್ಷ್ಯ ಧೋರಣೆಗೆ ಕಾಲುವೆ ಅಭಿವೃದ್ಧಿ ಕುಂಠಿತವಾಗಿದೆ. ಇತ್ತೀಚೆಗೆ ಮೇಲ್ಭಾಗದಲ್ಲಿ ನಡೆದ ಕಾಮಗಾರಿಯಿಂದಾಗಿ 20 ತೂಬ್‌ಗಳಿಗೆ ಮಾತ್ರ ನೀರು ಹೋಗುತ್ತಿದ್ದು, ಕೆಳ ಭಾಗದ ರೈತರ ಜಮೀನುಗಳಿಗೆ ನೀರು ಹರಿಯುತ್ತಿಲ್ಲ. ಇಲ್ಲಿನ ಕಾಲುವೆ ಅಭಿವೃದ್ಧಿಗೆ ಚಾಲನೆ ನೀಡಿದರೂ, ಇನ್ನೂ ಕಾಮಗಾರಿ ಆರಂಭಗೊಂಡಿಲ್ಲ.
ಆದ್ದರಿಂದ ಕೂಡಲೇ ಇಲ್ಲಿನ ಕಾಲುವೆಯ ಜಲಸಸ್ಯ ಹಾಗೂ ಹೂಳು ತೆರವುಗೊಳಿಸಿ, 2025ರ ಮೇ ಕೊನೆ ವಾರದಿಂದ ಕಾಲುವೆ ಅಭಿವೃದ್ಧಿಗೊಳಿಸಿ, ರೈತರ ಅಭಿಪ್ರಾಯದಂತೆ ಕಾಮಗಾರಿ ಮಾಡಿ, ಕೆಳ ಭಾಗದ ರೈತರ ಗದ್ದೆಗಳಿಗೆ ನೀರು ಸರಾಗವಾಗಿ ಹರಿಯುವಂತೆ ಸೂಕ್ತಕ್ರಮಕೈಗೊಳ್ಳಬೇಕೆಂದು ರೈತ ಮುಖಂಡರಾದ ಕೆ.ಮೆಹಬೂಬ್ ಭಾಷಾ ಕೆ, ವಾಜೀದ್ ಭಾಷಾ, ಜೆ.ಮಂಜುನಾಥ, ಸಲೀಮ್, ಪೀರಸಾಬ್, ಮಿಲ್ಟ್ರಿ ಕುಂಟಪ್ಪ, ಕೊರವರ ಚಿದಾನಂದಪ್ಪ, ದಾಸರ ಹನುಮಂತಪ್ಪ, ಕೆ.ಹಸನ್‌ಸಾಬ್ ಒತ್ತಾಯಿಸಿದರು. ಕರ್ನಾಟಕ ರಾಜ್ಯ ರೈತರ ಸಂಘ ಹಾಗೂ ಹಸಿರು ಸೇನೆಯ ವಿಜಯನಗರ ಜಿಲ್ಲಾ ಮುಖಂಡ ಎಲ್.ಎಸ್.ರುದ್ರ್ಪ ಹಾಗೂ ಕಂಪ್ಲಿ ತಾಲೂಕು ಅಧ್ಯಕ್ಷ ಸಿ.ಎ.ಚನ್ನಪ್ಪ ಮಾತನಾಡಿ, ಜಂಗಲ್ ಕಟ್ ಮಾಡುವ ಜತೆಗೆ ಹೂಳು ತೆಗೆಸಿ, ಸರಾಗವಾಗಿ ಕಾಲುವೆಯ 102, 103 ತೂಬ್‌ಗಳಿಗೆ ನೀರು ಹರಿಸಿ, 400 ಎಕರೆ ಜಮೀನುಗಳ ರೈತರಿಗೆ ಅನುಕೂಲ ಮಾಡಿಕೊಡಬೇಕು. 2025ರ ಏಫ್ರೇಲ್ ಕೊನೆವರೆಗೆ ನೀರು ಕೊಟ್ಟು, ಮೇ ತಿಂಗಳಲ್ಲಿ ಕಾಮಗಾರಿ ಆರಂಭಿಸಬೇಕೆಂದು ಆಗ್ರಹಿಸಿದರು. ಎಇಇ ಬಸಪ್ಪ ಜಾನ್ಕರ್ ಮಾತನಾಡಿ, ಎಡಿಬಿ ಅನುದಾನದಲ್ಲಿ ಸುಮಾರು 35 ಕೋಟಿ ವೆಚ್ಚದಲ್ಲಿ 18 ಕಿ.ಮೀವರೆಗೆ ಬುಕ್ಕಸಾಗರದ ಕಾಲುವೆ ಕಾಮಗಾರಿ ಮಾಡಲಾಗುತ್ತಿದೆ. ಗೌರಿ ಮಾಗಾಣಿಯಲ್ಲಿ ಕೆಲಸ ಮಾಡಲು ಕೆಲವರು ಬಿಡುತ್ತಿಲ್ಲ. ಇದರಿಂದ ಸಮಸ್ಯೆಯಾಗುತ್ತಿದೆ. ರೈತರ ಆಧ್ಯತೆಯಂತೆ ಕಾಲುವೆಯಲ್ಲಿ ಹೂಳು ತೆಗೆಯೋಣ. ಮತ್ತು ಕೆಲವರು ಅತಿಕ್ರಮಣ ಮಾಡಿಕೊಂಡಿರುವುದನ್ನು ತೆರವುಗೊಳಿಸಬೇಕಾಗಿದೆ. ಅಂದಾಗ ಮಾತ್ರ ಕಾಲುವೆ ಅಭಿವೃದ್ಧಿಗೆ ಅನುಕೂಲವಾಗುತ್ತದೆ ಎಂದರು. ಸೈಟ್ ಮ್ಯಾನೇಜರ್ ಅನಿಲ್ ಕುಮಾರ್ ಮಾತನಾಡಿ, ರೈತರ ಆಧ್ಯತೆ ಮೇರೆಗೆ ಕಾಮಗಾರಿ ಮಾಡಲಾಗವುದು, 2025ರ ಜನವರಿಯಲ್ಲಿ ಕಾಮಗಾರಿ ಆರಂಭಿಸಲಾಗುವುದು ಎಂದರು.
ಡಿ.001: ಮತ್ತು 01ಎ: ಕಂಪ್ಲಿ ಸಮೀಪದ ಬುಕ್ಕಸಾಗರದ ತುರ್ತು ಕಾಲುವೆಯಲ್ಲಿ ತುಂಬಿಕೊಂಡಿರುವ ಹೂಳು, ಜಲಸಸ್ಯ.