ಐಟಿ ದಾಳಿಯಿಂದ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ: ಸಿದ್ದರಾಮಯ್ಯ
ಬೆಂಗಳೂರು 29:ಐಟಿ ದಾಳಿಯ ಮೂಲಕ ಚುನಾವಣೆ ಗೆಲ್ಲಬಹುದು ಎಂದು ಪ್ರಧಾನಿ ಮೋದಿ ಮತ್ತು ಬಿಜೆಪಿ ನಾಯಕರು ಲೆಕ್ಕ ಹಾಕಿದ್ದರೆ, ಭಾವಿಸಿದ್ದರೆ ಅದು ಅವರ ಭ್ರಮೆ ಹಾಗೂ ಮೂರ್ಖತನ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಮೈಸೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಚುನಾವಣೆ ಘೋಷಣೆಯಾದ ಮೇಲೆ ಏಕೆ ಐಟಿ ದಾಳಿ ಮಾಡಲಾಗುತ್ತಿದೆ. ಜನವರಿ ಮತ್ತು ಫೆಬ್ರವರಿ ತಿಂಗಳಲ್ಲಿ ಏಕೆ ದಾಳಿ ಮಾಡಲಿಲ್ಲ ಎಂದು ಪ್ರಶ್ನಿಸಿದರು. ಐಟಿ ದಾಳಿಯಿಂದ ರಾಜಕಿಯ ಲಾಭ ಪಡೆಯಲು ಸಹಕರಿಯಾಗಲಿದೆ ಎಂಬುದು ಸ್ವಲ್ಪಮಟ್ಟಿಗೆ ನಿಜ . ನಮ್ಮ ಕಾರ್ಯಕರ್ತರನ್ನು ಹೆದರಿಸುವುದರಿಂದ ನಮಗೆ ಸಹಾಯ ಮಾಡಲು ಮುಂದೆ ಬರುವವರು ಹೆದರುತ್ತಾರೆ ಎಂದರು. ದಾಳಿ ಬಗ್ಗೆ ನಮ್ಮ ವಿರೋಧವಿಲ್ಲ. ಅದರೆ ಚುನಾವಣೆ ಘೋಷಣೆಯಾದ ನಂತರ ಮಾಡುತ್ತಿರುವುದನ್ನು ನೋಡಿದರೆ ರಾಜಕೀಯ ಸೇಡಿನ ಮನೋಭಾವ ಇದರಲ್ಲಿ ಇದೆ ಎಂಬುದು ಗೋಚರವಾಗುತ್ತಿದೆ ಎಂದರು.
ಬಿಜೆಪಿ ನಾಯಕರಾದ ಯಡಿಯೂರಪ್ಪ ಮತ್ತು ಈಶ್ವರಪ್ಪ ಬಳಿ ಹಣವಿಲ್ಲವೇ ಎಂದು ಪ್ರಶ್ನಿಸಿದ ಅವರು, ಅವರ ಮನೆಯ ಮೇಲೆ ಏಕೆ ದಾಳಿ ಮಾಡಿಲ್ಲ . ಕಳೆದ ವಿಧಾನಸಭಾ ಚುನಾವಣೆ ವೇಳೆ ನನಗೆ ಬೆಂಬಲವಾಗಿ ನಿಂತಿದ್ದ ನಾಲ್ವರ ಮೇಲೆ ಐಟಿ ದಾಳಿ ಮಾಡಲಾಗಿದೆ. ಆದರೆ ಶ್ರೀರಾಮುಲು ಪರವಾಗಿ ಇದ್ದರವರ ಮೇಲೆ ಏಕೆ ದಾಳಿ ಮಾಡಲಿಲ್ಲ ಎಂದರು. ರಾಜ್ಯದ 28 ಲೊಕಸಭಾ ಕ್ಷೇತ್ರಗಳಿಗೂ ಪ್ರಚಾರಕ್ಕೆ ಹೋಗಲಿದ್ದೇನೆ. ಮೈಸೂರಿನಲ್ಲಿ ನಮ್ಮ ಅಭ್ಯಥರ್ಿ ವಿಜಯಶಂಕರ್ ಗೆಲ್ಲುತ್ತಾರೆ. ಜೆಡಿಎಸ್ ಕಾರ್ಯಕರ್ತರು ನಮ್ಮ ಗೆಲವಿಗೆ ಸಹಕರಿಸುತ್ತಾರೆ.
ನಾವು ದಳದವರ ಮೇಲೆ ಅನುಮಾನ ಪಡುವ ಅಗತ್ಯವಿಲ್ಲ ಎಂದರು. ತುಮಕೂರಿನಲ್ಲಿ ಕಾಂಗ್ರೆಸ್ ಬಂಡಾಯ ಅಭ್ಯಥರ್ಿಯಾಗಿರುವ ಮುದ್ದಹನುಮೇಗೌಡರು ನಾಮಪತ್ರ ವಾಪಸ್ ಪಡೆಯಲಿದ್ದಾರೆ ಎಂಬ ವಿಶ್ವಾಸವನ್ನು ಸಿದ್ದರಾಮಯ್ಯ ವ್ಯಕ್ತಪಡಿಸಿದರು.