ನೌಕರರ ಸಂಘದ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಮೂರು ನಾಮಪತ್ರ ಸಲ್ಲಿಕೆ ರಂಗೇರುತ್ತಿರುವ ಜಿಲ್ಲಾಧ್ಯಕ್ಷ ಸ್ಥಾನದ ಚುನಾವಣೆ
ಚಿಕ್ಕೋಡಿ 27: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಚಿಕ್ಕೋಡಿ ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಡಿ.4 ರಂದು ನಡೆಯುವ ಚುನಾವಣೆಗೆ ನಾಮಪತ್ರ ಸಲ್ಲಿಸಲು ಬುಧವಾರ ಕೊನೆದಿನದಂದು ಮೂರು ನಾಮಪತ್ರಗಳು ಸಲ್ಲಿಕೆಯಾಗಿವೆ.
ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಪ್ರೌಢ ಶಾಲಾ ವಿಭಾಗದಿಂದ ಎಸ್.ಎಂ.ಹುಲ್ಲೋಳಿ, ಆರೋಗ್ಯ ಇಲಾಖೆಯಿಂದ ಬಿ.ಎ.ಕುಂಬಾರ, ಕಂದಾಯ ಇಲಾಖೆಯಿಂದ ಡಿ.ಎಸ್.ವಟಗುಡೆ ನಾಮಪತ್ರ ಸಲ್ಲಿಸಿದರು. ಖಜಾಂಚಿ ಸ್ಥಾನಕ್ಕೆ ರಾಜು ಚನ್ನವರ, ಎಸ್.ಎಸ್.ಬೆಳಗಾವಿ ನಾಮಪತ್ರ ಸಲ್ಲಿಸಿದರು. ರಾಜ್ಯ ಪರಿಷತ್ ಸ್ಥಾನಕ್ಕೆ ಡಾ,ಅರುಣ ಸಾಂಗ್ರೋಳೆ, ಎ.ಬಿ.ಬಸ್ತವಾಡೆ, ಎಸ್.ಎಸ್.ಹಂಪಣ್ಣವರ ನಾಮಪತ್ರ ಸಲ್ಲಿಸಿದರು.
ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಬಹುತೇಕ ಎರಡು ಪೆನಲ್‌ಗಳಾಗಿ ರಂಗೇರುವ ಸಾಧ್ಯತೆ ಹೆಚ್ಚಿದೆ. ಆರೋಗ್ಯ ಇಲಾಖೆಯ ಬಿ.ಎ.ಕುಂಬಾರ ಮತ್ತು ಎಸ್.ಎನ್.ಬೆಳಗಾವಿ ನೇತೃತ್ವದ ಒಂದು ಪೆನಲ್ ಆದರೆ ಪ್ರೌಢ ಶಾಲೆಯ ವಿಭಾಗದ ಎಸ್.ಎಂ.ಹುಲ್ಲೋಳಿ ಮತ್ತು ಕಂದಾಯ ಇಲಾಖೆಯ ಡಿ.ಎಸ್.ವಟಗುಡೆ ನೇತೃತ್ವದ ಮತ್ತೊಂದು ಪೆನಲ್ ಆಗಿರುವುದು ಸದ್ಯ ಮೇಲ್ನೋಟಕ್ಕೆ ಕಂಡು ಬಂದಿದೆ.
ಜಿಲ್ಲಾ ಅಧ್ಯಕ್ಷ, ಖಜಾಂಚಿ ಮತ್ತು ರಾಜ್ಯ ಪರಿಷತ್ ಸ್ಥಾನದ ಆಯ್ಕೆಗೆ ಬುಧವಾರ ಕೊನೆದಿನವಾಗಿದ್ದರಿಂದ ಎರಡು ಪೆನಲ್ ಗುಂಪುಗಳು ಪ್ರತ್ಯೇಕವಾಗಿ ಬೆಂಬಲಿಗರೊಂದಿಗೆ ತೆರಳಿ ನಾಮಪತ್ರ ಸಲ್ಲಿಸಿರುವುದು ವಿಶೇಷವಾಗಿತ್ತು. ನೌಕರರ ಸಂಘದ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಎಸ್.ಎಂ.ಹುಲ್ಲೋಳಿ ಮತ್ತು ಡಿ.ಎಸ್.ವಟಗುಡೆ ನಾಮಪತ್ರ ಸಲ್ಲಿಸಿದರು.