ಉತ್ತಮ ನಾಯಕನ ಆಯ್ಕೆಗೆ ಮತದಾನ ಅಗತ್ಯ: ನ್ಯಾಯಾಧೀಶೆ ಕೆ.ಜಿ.ಶಾಂತಿ
ಬಳ್ಳಾರಿ 25: ದೇಶದ ಪ್ರಗತಿಯಾಗಬೇಕಾದರೆ, ಉತ್ತಮ ನಾಯಕನ ಆಯ್ಕೆ ಅಗತ್ಯ. ಹಾಗಾಗಿ ಪ್ರತಿಯೊಬ್ಬರೂ ಯಾವುದೇ ಆಮೀಷಕ್ಕೆ ಒಳಗಾಗದೇ ವಿವೇಚನೆಯಿಂದ ತಪ್ಪದೇ ಮತದಾನ ಮಾಡಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರೂ ಆದ ಕೆ.ಜಿ.ಶಾಂತಿ ಅವರು ಹೇಳಿದರು.
ಭಾರತ ಚುನಾವಣಾ ಆಯೋಗ, ಬಳ್ಳಾರಿ ಜಿಲ್ಲಾ ಚುನಾವಣಾಧಿಕಾರಿಗಳ ಕಾರ್ಯಾಲಯ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಇವರ ಸಂಯುಕ್ತಾಶ್ರಯದಲ್ಲಿ ನಗರದ ಅನಂತಪುರ ರಸ್ತೆಯ ನೂತನ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಶನಿವಾರ ಏರಿ್ಡಸಿದ್ದ ‘ರಾಷ್ಟ್ರೀಯ ಮತದಾರರ ದಿನ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದ ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಲು ಉತ್ತೇಜಿಸುವ ದೃಷ್ಟಿಯಿಂದ 1950 ರಲ್ಲಿ ಸ್ಥಾಪನೆಯಾದ ಭಾರತದ ಚುನಾವಣಾ ಆಯೋಗದ ಸಂಸ್ಥಾಪನ ದಿನದ ಸವಿನೆನಪಿಗಾಗಿ 2011 ರಲ್ಲಿ ಮೊದಲ ಬಾರಿಗೆ ಜ.25 ರಂದು ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಲಾಯಿತು. ರಾಷ್ಟ್ರದ ಅಭಿವೃದ್ಧಿ, ಏಳಿಗೆಯ ಕಡೆಗೆ ನಾಗರಿಕರ ಜವಾಬ್ದಾರಿ, ಕರ್ತವ್ಯವನ್ನು ನೆನಪಿಸುವ ಉದ್ದೇಶದಿಂದ ಪ್ರತಿವರ್ಷ ಜನವರಿ 25 ರಂದು ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಲಾಗುತ್ತದೆ ಎಂದು ತಿಳಿಸಿದರು.
ಎಲ್ಲಾ ದಾನಕ್ಕಿಂತ ಶ್ರೇಷ್ಠದಾನ ಮತದಾನವೂ ಒಂದು. 18 ವರ್ಷ ತುಂಬಿದ ಯುವಕ-ಯುವತಿಯರು ಮತದಾನರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು. ಶೇಕಡವಾರು ಮತದಾನದ ಪ್ರಮಾಣ ಹೆಚ್ಚಿಸಲು ತಪ್ಪದೇ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಅವರು ಹೇಳಿದರು.
ಹಿಂದಿನ ಕಾಲದ ಮತಪತ್ರ (ಬ್ಯಾಲೆಟ್ ಪೇಪರ್)ದ ಚುನಾವಣೆಗಳಲ್ಲಿ ಹಿರಿಯರೆಲ್ಲರೂ ಹಬ್ಬದಂತೆ ಮತದಾನದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಮತದಾನ ಪ್ರಮಾಣ ಹೆಚ್ಚಳಕ್ಕೆ ಪೂರಕವಾಗಿರುತ್ತಿದ್ದರು. ಆದರೆ ಈಗ ಬಟನ್ ಒತ್ತುವ ಮಾದರಿ ಬಂದರೂ ಸಹ ಈಗಿನ ಸಂದರ್ಭದಲ್ಲಿ ವಿದ್ಯಾವಂತರೂ ಸೇರಿದಂತೆ ಸೋಮಾರಿತನದಿಂದ ಮತದಾನದಿಂದ ಹೊರಗುಳಿಯುತ್ತಿದ್ದಾರೆ ಎಂದರು.
ಚುನಾವಣೆಗಳು ಹಬ್ಬಗಳಿದ್ದಂತೆ. ಎಲ್ಲರೂ ತಪ್ಪದೇ ಭಾಗವಹಿಸಬೇಕು. ಪ್ರಜಾಪ್ರಭುತ್ವದಲ್ಲಿ ಸ್ವತಂತ್ರದಿಂದ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಸಂವಿಧಾನವು ಮತದಾನ ಹಕ್ಕು ನೀಡಿದೆ. ಇದರಿಂದ ಯಾರೂ ಹೊರಗುಳಿಯಬಾರದು ಎಂದು ನ್ಯಾಯಾಧೀಶರು ತಿಳಿಸಿದರು.
ಜಿಲ್ಲಾ ಚುನಾವಣಾಧಿಕಾರಿಗಳಾದ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, 18 ವರ್ಷ ತುಂಬಿದ ಪ್ರತಿಯೊಬ್ಬರೂ ತಮ್ಮ ಮತದಾನ ಹಕ್ಕು ಚಲಾಯಿಸಬೇಕು. ವಿದ್ಯಾವಂತರು ತಮ್ಮ ಗೆಳೆಯರಿಗೆ, ಮನೆಗಳಲ್ಲಿ ಮತ್ತು ತಮ್ಮ ಅಕ್ಕ-ಪಕ್ಕದವರಿಗೆ ತಪ್ಪದೇ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ಮುಖ್ಯವಾಗಿ ಈಗಿನ ಸಂದರ್ಭದಲ್ಲಿ ಮತದಾನ ಏಕೆ ಮಾಡಬೇಕು ಎಂಬುದರ ಕುರಿತು ಸಾಕಷ್ಟು ಅರಿವು ಮೂಡಿಸುವ ಕಾರ್ಯವಾಗಬೇಕಿದೆ ಎಂದರಲ್ಲದೇ ಪ್ರತಿ ವರ್ಷದ ಥೀಮ್ ಅನ್ನು ಮತದಾರಿಗೆ ಅರ್ಿಸಲಾಗುತ್ತದೆ. ಎನ್‌ವಿಡಿ 2025ರ ಥೀಮ್ ‘ಮತದಾನಕ್ಕಿಂತ ಇನ್ನೊಂದಿಲ್ಲ, ನಾನು ಖಚಿತವಾಗಿ ಮತ ಮಾಡುವೆ’ ಎಂಬುದಾಗಿದೆ ಎಂದು ತಿಳಿಸಿದರು.
ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷರೂ ಆಗಿರುವ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರ ಅವರು ಮಾತನಾಡಿ, ಸಂವಿಧಾನ ರಚನೆ ಸಂದರ್ಭದಲ್ಲಿ ಮತದಾನ ಹಕ್ಕು ಅಳವಡಿಸುವ ಕುರಿತು ಸಾಕಷ್ಟು ಚರ್ಚೆಯಾದವು. ಬಳಿಕ ಪ್ರತಿಯೊಬ್ಬರಿಗೂ ಮತದಾನ ಕೊಡಲೇಬೇಕು ಎಂದು ತೀರ್ಮಾನಿಸಲಾಯಿತು ಎಂದು ಅವರು ತಿಳಿಸಿದರು.
ನಮ್ಮ ದೇಶವು ಸದೃಢವಾಗಿರುವುದಕ್ಕೆ ಕಾರಣ ಭಾರತ ದೇಶದ ಚುನಾವಣಾ ಆಯೋಗದ ಆಡಳಿತ ಕಾರ್ಯವೈಖರಿಯಾಗಿದೆ. ದೇಶದಲ್ಲಿ ಅತಿಹೆಚ್ಚು ಯುವ ಮತದಾರರಿದ್ದಾರೆ. ಹಾಗಾಗಿ ತಪ್ಪದೇ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿ ಒಳ್ಳೆಯ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು ಎಂದರು.
ಇದೇ ಸಂದರ್ಭದಲ್ಲಿ ‘ಮತದಾರರ ಪ್ರತಿಜ್ಞಾ ವಿಧಿ’ ಭೋದಿಸಿದರು.
ಕಾರ್ಯಕ್ರಮದಲ್ಲಿ ಸಾರ್ವತ್ರಿಕ ಲೋಕಸಭೆ ಚುನಾವಣೆ-2024 ರ ಸ್ವೀಪ್ ಕಾರ್ಯಕ್ರಮದ ಚಟುವಟಿಕೆಗಳ ಕುರಿತು ‘ಬ್ಯೂಟಿಫುಲ್ ಬಳ್ಳಾರಿ’ ಎಂಬ ಶೀರ್ಷಿಕೆಯಡಿ ಮುದ್ರಿಸಲಾದ ‘ಕಾಫೀ ಟೇಬಲ್ ಬುಕ್’ ಗಳನ್ನು ಗಣ್ಯರು ಅನಾವರಣಗೊಳಿಸಿದರು.
ಬಳಿಕ ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಮತದಾನ ಜಾಗೃತಿ ಕುರಿತು ಶಾಲಾ-ಕಾಲೇಜುಗಳಲ್ಲಿ ಏರಿ್ಡಸಿದ್ದ ಪ್ರಬಂಧ, ಭಿತ್ತಿಚಿತ್ರ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ಮತ್ತು ಪ್ರಶಸ್ತಿ ಪತ್ರ ವಿತರಿಸಲಾಯಿತು. 18 ವರ್ಷ ತುಂಬಿ ಹೊಸದಾಗಿ ನೋಂದಾಯಿಸಿಕೊಂಡ ಯುವ ಮತದಾರರಿಗೆ ಸಂಕೇತಿಕವಾಗಿ ಮತದಾರರ ಚೀಟಿ ವಿತರಿಸಲಾಯಿತು.
ಈ ವೇಳೆ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ರಾಜೇಶ್ ಎನ್.ಹೊಸಮನೆ, ಅಪರ ಜಿಲ್ಲಾಧಿಕಾರಿ ಮಹಮ್ಮದ್ ಝುಬೇರ್, ಸಹಾಯಕ ಆಯುಕ್ತ ಪ್ರಮೋದ್.ಪಿ., ತಹಶೀಲ್ದಾರ ಗುರುರಾಜ ಸೇರಿದಂತೆ ಜಿಲ್ಲಾ ಚುನಾವಣಾಧಿಕಾರಿ ಕಚೇರಿಯ ಅಧಿಕಾರಿ ಮತ್ತು ಸಿಬ್ಬಂದಿ ವರ್ಗ, ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಇತರರು ಉಪಸ್ಥಿತರಿದ್ದರು.