ಕಾಲಕ್ಕೆ ಅನುಗುಣವಾಗಿ ಶಿಕ್ಷಣ ವ್ಯವಸ್ಥೆ ಬದಲಾಗಬೇಕು: ಅಜೀತ ಹನಮಕ್ಕನವರ

Education system should change with times: Ajita Hanamakkanavara

ಕಾಲಕ್ಕೆ ಅನುಗುಣವಾಗಿ ಶಿಕ್ಷಣ ವ್ಯವಸ್ಥೆ ಬದಲಾಗಬೇಕು: ಅಜೀತ ಹನಮಕ್ಕನವರ 

ಬೆಳಗಾವಿ: ಜ.6: ಮುಂದಿನ 20 ವರ್ಷಗಳ ಕಾಲದಲ್ಲಿ ಅನೇಕ ಬದಲಾವಣೆಗಳಾಗಬಹುದು. ಈ ಬದಲಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಮುಂದಿನ 20 ವರ್ಷಕ್ಕೆ ಅವಶ್ಯಕತೆವಾಗಿರುವ ಶಿಕ್ಷಣ ನೀಡಬೇಕಾಗಿದೆ. ಈ ನಿಟ್ಟಿನಲ್ಲಿ ಕಾಲಕ್ಕೆ ಅನುಗುಣವಾಗಿ ನಮ್ಮ ಶಿಕ್ಷಣ ವ್ಯವಸ್ಥೆ ಬದಲಾಗಬೇಕೆಂದು  ಏಷ್ಯಾನೆಟ್ ಸುವರ್ಣ ನ್ಯೂಸ್ ಸುದ್ದಿ ವಾಹಿನಿಯ ಸಂಪಾದಕ ಅಜೀತ ಹನಮಕ್ಕನವರ ಅವರು ಅಭಿಪ್ರಾಯಪಟ್ಟರು.  

ರವಿವಾರ ಸಾಯಂಕಾಲ ಬೆಳಗಾವಿ ತಾಲೂಕಿನ ಶಿಂದೊಳ್ಳಿ ಗ್ರಾಮದಲ್ಲಿರುವ ದೇವೇಂದ್ರ ಜಿನಗೌಡ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಯ 25 ನೇ ವಾರ್ಷಿಕ ರಜತ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಇಂದಿನ ಶಿಕ್ಷಣ ವ್ಯವಸ್ಥೆಯನ್ನು ಗಮನಿಸಿದರೆ ಇಂದು ಶಾಲೆಯಲ್ಲಿ ಕಲಿತ ಪಠ್ಯಕ್ರಮ ಮುಂದಿನ 20 ವರ್ಷಗಳ ನಂತರ  ಅಷ್ಟೊಂದು ಪರಿಣಾಮಕಾರಿಯಾಗುವುದಿಲ್ಲ. ಮುಂದಿನ 20 ವರ್ಷಗಳ ನಂತರ ಆಗಲಿರುವ ಬದಲಾವಣೆಗಳ ಬಗ್ಗೆ ಅಧ್ಯಯನ ನಡೆಯಬೇಕು ಮತ್ತು ಈ ಅಧ್ಯಯನಕ್ಕೆ ಅನುಗುಣವಾಗಿ ಶಿಕ್ಷಣ ವ್ಯವಸ್ಥೆ ಬದಲಾಗಬೇಕೆಂದು ಅವರು ತಿಳಿಸಿದರು.  

ಶಾಲಾ ಪಠ್ಯಕ್ರಮಗಳು ಪ್ರತಿ ಐದು ವರ್ಷಕ್ಕೊಮ್ಮೆ ಬದಲಾವಣೆಯಾಗೇಕು. ಇಂದಿನ ಆರ್ಟಿಫೀಷಲ್ ಇಂಟಲಜೇನ್ಸಿ ಮತ್ತು ಇನ್ನಿತರ ತಂತ್ರಜ್ಞಾನಗಳ ಬೆಳವಣಿಗೆಗಳನ್ನು ಗಮನಿಸಿದರೆ ಮುಂದಿನ 20 ವರ್ಷಗಳಲ್ಲಿ ಸಾಕಷ್ಟು ಬದಲಾವಣೆಗಳಾಗಲಿವೆ. ಶೈಕ್ಷಣಿಕ ಸಂಸ್ಥೆಗಳು ತಮ್ಮ ನಿಯಮಿತ ಕಲಿಕಾ ವಿಧಾನದಲ್ಲಿ ಬದಲಾವಣೆ ತಂದು ತಮ್ಮ ಶಿಕ್ಷಣ ಪದ್ದತಿಯನ್ನು ಬದಲಾಯಿಸಕೊಳ್ಳಬೇಕು. ಈ ಬಗ್ಗೆ ಈಗಿನಿಂದಲೇ ಚಿಂತನೆ ನಡೆಸಬೇಕೆಂದು ಅವರು ತಿಳಿಸಿದರು.  

ಇಂದು ಗೋಪಾಲ ಜಿನಗೌಡ ಅವರ ಶಾಲೆಗೆ ಬಂದು ಇಲ್ಲಿನ ವಾತಾವರಣವನ್ನು  ಕಂಡು ಪುಳಕಿತನಾಗಿದ್ದೇನೆ. ಇಂದಿನ ಡೋನೆಷನ ಹಾವಳಿಯ ಶಿಕ್ಷಣ ವ್ಯವಸ್ಥೆಯಲ್ಲಿ ಗೋಪಾಲ ಜಿನಗೌಡ ಸಂಸ್ಥೆಯು ಯಾವುದೇ ಡೊನೆಷನ ಪಡೆಯದೇ ಶೀಕ್ಷಣ ನೀಡುತ್ತಿರುವುದು ಹೆಮ್ಮೆಯ  ಸಂಗತಿಯಾಗಿದ್ದು,  ಈ ಸಂಸ್ಥೆಯು ದೇಶಕ್ಕೆ ಮಾದರಿಯಾಗಿದೆ ಎಂದು ಅವರು  ಹೇಳಿದರು.   

ಸಮಾರಂಭಕ್ಕೆ ಆಗಮಿಸಿದ ಗೌರವ ಅತಿಥಿ ಕೆ.ಎಲ್‌.ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಅವರು ಮಾತನಾಡಿ, ಕೆ.ಎಲ್‌.ಇ, ಸಂಸ್ಥೆಯ ಸಪ್ತರ್ಷಿಗಳಲ್ಲಿ ಒಬ್ಬರಾದ ಶಿರಸಂಗಿ ಲಿಂಗರಾಜರು ತಮ್ಮ  ಎಲ್ಲ ಆಸ್ತಿಯನ್ನು  ಎಲ್ಲ ಸಮಾಜದ ಬಡಮಕ್ಕಳ ಶಿಕ್ಷಣಕ್ಕಾಗಿ ಧಾರೆ ಎರೆದು ಮಹಾನ ದಾನಿ ಎಂದು ಗುರುತಿಸಿಕೊಂಡಿದ್ದಾರೆ. ಅದೇ ಮಾದರಿಯಲ್ಲಿ ಇಂದು ಗೋಪಾಲ ಜಿನಗೌಡ ಅವರು ಸಹ ಎಲ್ಲ ಸ್ವಂತ ಹಣದಿಂದ ಇಂತಹ ಒಂದು ಸಂಸ್ಥೆಯನ್ನು ಹುಟ್ಟು ಹಾಕಿ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದಾರೆ. ಕೆ.ಎಲ್‌.ಇ. ಸಂಸ್ಥೆಯ ಸಪ್ತರ್ಷಿಗಳಲ್ಲಿ ಇನ್ನೊಬ್ಬ ಹಿರಿಯರಾದ ಮಮದಾಪೂರ ಅವರು ತಮ್ಮ ಇಡೀ ಜೀವನವನ್ನು ಬಡ ಮಕ್ಕಳಿಗೆ ಶಿಕ್ಷಣಕ್ಕಾಗಿ  ಧಾರೆ ಎರೆಯಲು ಹೋರಾಟ ಮಾಡಿದವರು.  ಅವರು ಸಪ್ತರ್ಷಿಗಳನ್ನು ಕರೆ ತಂದು ಕೆ.ಎಲ್‌.ಇ.ಸಂಸ್ಥೆಯನ್ನು ಪ್ರಾರಂಭಿಸಿದವರು. ಇಂತಹ ಮಹಾನ ಚೇತನ ವ್ಯಕ್ತಿಗಳನ್ನು ನಾವು ಕಂಡಿಲ್ಲವಾದರೂ. ಸಹ ಇಂದು ಗೋಪಾಲ ಜಿನಗೌಡ ಅವರಂತ ದಾನಿಗಳನ್ನು ಮತ್ತು ಸಮಾಜ ಚಿಂತಕರನ್ನು ನಮ್ಮದೊಂದಿಗೆ ಇರುವುದು ನಮ್ಮಲ್ಲರ ಭಾಗ್ಯ ಎಂದು ಅವರು ತಿಳಿಸಿದರು.  

ಮಾಜಿ ಶಾಸಕ ಸಂಜಯ ಪಾಟೀಲ, ಗೋಪಾಲ ಜಿನಗೌಡ ಅವರ ಜೀವನ ಇಂದಿನ ಯುವಕರಿಗೆ ಸ್ಪೂರ್ತಿ ನೀಡುವಂತಹ ಜೀವನವಾಗಿದೆ.ಅವರ ಸಾಮಾಜಿಕ ಕಳಕಳಿ , ಅವರ ಸಾಮಾಜಿಕ ಸೇವೆಯನ್ನು ನೋಡಿ ನಾವು ಸಹ ಅವರಿಂದ ಒಳ್ಳೆಯತನವನ್ನು ಕಲಿಯಬೇಕಾಗಿದೆ. ಜಿನಗೌಡ ಅವರ ಕಾರ್ಯ ನಿಜಕ್ಕೂ ಶ್ಲಾಘನೀಯ  ಎಂದು ಅವರು ಹೇಳಿದರು.  

ಭರತೇಶ ಶಿಕ್ಷಣ ಸಂಸ್ಥೆಯ  ಕಾರ್ಯದರ್ಶಿ ವಿನೋದ ದೊಡ್ಡಣ್ಣವರ ಅವರು ಮಾತನಾಡಿ, ಗೋಪಾಲ ಜಿನಗೌಡ ಮತ್ತು ಭರತೇಶ ಶಿಕ್ಷಣ ಸಂಸ್ಥೆ ಅವಿನಾಭಾವ ಸಂಬಂಧಗಳನ್ನು ಹೊಂದಿದೆ. ಗೋಪಾಲ ಜಿನಗೌಡ ಅವರು ಪ್ರಾಮಾಣಿಕತೆ, ಕಠಿಣ ಪರಿಶ್ರಮ, ಸಮಯ ಪ್ರಜ್ಞೆ ಇವೆಲ್ಲವನ್ನು ನಾವು ಅವರಿಂದ ಕಲಿಯಬೇಕಾಗಿದೆ. ಇಂತಹ ವ್ಯಕ್ತಿತ್ವ ಇಂದಿನ ಯುವಪಿಳಿಗೆಗೆ ಮಾದರಿಯಾಗಿದೆ ಎಂದು ಅವರು ಹೇಳಿದರು.  

ಸಮಾರಂಭದಲ್ಲಿ ಆರ್‌.ಎಸ್‌.ಎಸ್‌. ಉತ್ತರ ಪ್ರಾಂತ ಕಾರ್ಯಕಾರಣಿ ಸದಸ್ಯ ಅರವಿಂದರಾವ ದೇಶಪಾಂಡೆ ಅವರು ಮಾತನಾಡಿ ,ಗೋಪಾಲ ಜಿನಗೌಡ ಅವರ ಶಾಲೆಯಲ್ಲಿ ಆಂಗ್ಲ ಮಾಧ್ಯಮ ಶಾಲೆಯಿದ್ದರೂ ಸಹ ಎಲ್ಲಯೂ ಪಾಶ್ಚಿಮಾತ್ಯ ಸಂಸ್ಕೃತಿ ಕಂಡು ಬರಲಿಲ್ಲ. ಅಪ್ಪಟ  ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ಕಾರ್ಯಕ್ರಮಗಳನ್ನು ಕಂಡು ಹರ್ಷವಾಗುತ್ತದೆ. ಈ ಸಂಸ್ಥೆಯು ಇದೇ ರೀತಿ ರಾಷ್ಟ್ರೀಯತೆಯನ್ನು  ಪರಿಚಯಿಸುತ್ತ ಇನ್ನೂ ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸಿದರು.  

ಸಮಾರಂಭದಲ್ಲಿ ರಾಷ್ಟ್ರೀಯ ಅಲ್ಪಸಂಖ್ಯಾತರರ ಆಯೋಗದ ಸದಸ್ಯ ಧನ್ಯಕುಮಾರ ಗುಂಡೆ, ಎಸಿಪಿಆರ್ ಕಾರ್ಯದರ್ಶಿ ಮಾರುತಿ ಝಿರಲಿ, ವಿದ್ಯಾ ಭಾರತಿ ಸಂಸ್ಥೆಯ ಅಧ್ಯಕ್ಷ ಪರಮೇಶ್ವರ ಹೆಗಡೆ , ಅವರು ಮಾತನಾಡಿದರು.  ಅಧ್ಯಕ್ಷತೆ ವಹಿಸಿ ಮಾತನಾಡಿದ ಗೋಪಾಲ ಜಿನಗೌಡ ಎಜ್ಯುಕೇಶನ ಟ್ರಸ್ಟ ಅಧ್ಯಕ್ಷ ಗೋಪಾಲ ಜಿನಗೌಡ ಅವರು ತಮ್ಮ ಜೀವನದ ಅನುಭವಗಳನ್ನು ಹಂಚಿಕೊಂಡರು.  

ಸಮಾರಂಭದ ವೇದಿಕೆ ಮೇಲೆ, ಕೆ.ಪಿ.ಸಿ.ಸಿ. ರಾಜ್ಯ ಪ್ರಧಾನ ಕಾರ್ಯದರ್ಶಿ ಸುನಿಲ ಹನಮಣ್ಣವರ, ಹಿರಿಯ ನ್ಯಾಯವಾದಿ ರವಿರಾಜ ಪಾಟೀಲ ಹುಕ್ಕೇರಿಯ ಮಹಾವೀರ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮಹಾವೀರ ನಿಲಜಗಿ, ರಾಯಬಾಗ ಲಕ್ಷ್ಮೀಸೇನ ಎಜ್ಯುಕೇಶನ ಸೋಸ್ಶೆಟಿಯ ಅಧ್ಯಕ್ಷ ದಶರಥ ಶೆಟ್ಟಿ, ಮತ್ತು ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.  

ದೇವೇಂದ್ರ ಜಿನಗೌಡ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಯ ಪ್ರಾಚಾರ್ಯ ವಿಜಯಲಕ್ಷ್ಮೀ ಪಾಟೀಲ ಅವರು ಅತಿಥಿಗಳನ್ನು ಸ್ವಾಗತಿಸಿದರು.