ಅಧಿಕಾರಿಗಳ ನಿರ್ಲಕ್ಷದಿಂದ ಮನೆಗಳನ್ನು ಪೂರ್ಣಗೊಳಿಸಲು ಸಾಧ್ಯವಾಗದೆ ಕಷ್ಟ ಅನುಭವಿಸುತ್ತಿದ್ದಾರೆ : ಯಾಸೀರಖಾನ ಪಠಾಣ
ಶಿಗ್ಗಾವಿ 04: 2020 ರಿಂದ 2024ರ ವರಗಿನ ವಸತಿ ಯೋಜನೆಯ ಸಂಪೂರ್ಣ ಲಾಭ ಮುಟ್ಟದೆ, ಅಧಿಕಾರಿಗಳ ನಿರ್ಲಕ್ಷದಿಂದ ಕ್ಷೇತ್ರದ ಸಾವಿರಕ್ಕು ಹೆಚ್ಚು ಫಲಾನುಭವಿ ಕುಟುಂಬಗಳಿಗೆ ನಿರ್ಮಿಸಿಕೊಳ್ಳುತ್ತಿರುವ ಮನೆಗಳನ್ನು ಪೂರ್ಣಗೊಳಿಸಲು ಸಾಧ್ಯವಾಗದೆ ಕಷ್ಟ ಅನುಭವಿಸುವಂತಾಗಿದೆ ಎಂದು ಶಾಸಕ ಯಾಸೀರಖಾನ ಪಠಾಣ ಬೇಸರ ವ್ಯಕ್ತಪಡೆಸಿದರು.
ಪಟ್ಟಣದಲ್ಲಿ ಆಯೋಜಿಸಿದ್ದ ತಾಲೂಕು ಪಂಚಾಯತಿ ಮತ್ತು ತಹಶೀಲ್ದಾರ ಕಚೇರಿಯ ಅಧಿಕಾರಿಗಳ ಜಂಟಿ ಸಭೆಯಲ್ಲಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ಅಡ್ಡಾಡುವಾಗ ಬಹಳಷ್ಟು ಫಲಾನುಭವಿ ಕುಟುಂಬಗಳು ವಸತಿ ಯೋಜನೆಯ ಮನೆಗಳ ಕಂತು ಬಾಕಿ ಇರುವುದಾಗಿ ತಿಳಿಸಿದ ಹಿನ್ನೆಲೆಯಲ್ಲಿ ಸಂಬಂಧಿಸಿದ ಇಲಾಖೆಗಳಿಂದ ಮಾಹಿತಿ ಕೇಳಲಾಗಿತ್ತು. ತಾಪಂ ಅಧಿಕಾರಿಗಳು ಕೇವಲ 112 ಮನೆಗಳ ಕಂತಿನ ಹಣ ಬಿಡುಗಡೆ ಬಾಕಿ ಇರುವುದಾಗಿ ತಿಳಿಸಿದರೆ, ತಹಶೀಲ್ದಾರ ಅವರು ಸುಮಾರು 780 ಮನೆಗಳ ಕಂತು ಬಾಕಿ ಇರುವುದಾಗಿ ತಿಳಿಸಿದ್ದಾರೆ. ಇಲಾಖೆಯ ಅಧಿಕಾರಿಗಳ ಮಧ್ಯದ ಸಮನ್ವಯತೆಯ ಕೊರತೆಯಿಂದ ಫಲಾನುಭವಿಗಳು ಪತ್ರಗಳನ್ನು ಹಿಡಿದು ಕಚೇರಿಗಳಿಗೆ ಅಲೆದಾಡುವಂತಾಗಿದೆ.
ಸುಮಾರು 200 ಫಲಾನುಭವಿಗಳಿಗೆ ಮನೆಗಳನ್ನು ಕಟ್ಟಲು ವರ್ಕ ಆರ್ಡರ ನೀಡಲಾಗಿದೆ, ವರ್ಷಗಳೆ ಕಳೆದಿದ್ದರೂ ಒಂದೇ ಒಂದು ರೂಪಾಯಿ ಹಣವನ್ನು ಎನ್‌ಡಿಆರ್‌ಎಪ್ ಫಂಡದಿಂದ ಬಿಡುಗಡೆ ಮಾಡದೆ ಸತಾಯಿಸಲಾಗುತ್ತಿದೆ. ಸುಮಾರು 800 ಫಲಾನುಭವಿಗಳ ಕುಟುಂಬಗಳಿಗೆ ಕೊನೆಯ ಕೆಲವು ಕಂತುಗಳನ್ನು ಭಾಕಿ ಇರಿಸಲಾಗಿದೆ. ಇದಕ್ಕೆಲ್ಲಾ ಅಧಿಕಾರಿಗಳ ನಿರ್ಲಕ್ಷ ಕಾರಣವಾಗಿದ್ದು ಅಧಿಕಾರಿಗಳಿಗೆ 24 ತಾಸುಗಳ ಗಡುವು ನೀಡಲಾಗಿದೆ. ಈ ಎರುಡೂ ಇಲಾಖೆಗಳ ಪಿಡಿಓ ಮತ್ತು ತಲಾಟಿಗಳು ಜಂಟಿ ಕಾರ್ಯ ಮಾಡಿ ಬಾಕಿ ಇರುವ ಕಂತುಗಳನ್ನು ಫಲಾನುಭವಿಗಳಿಗೆ ಹಾಕಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಅಧಿಕಾರಿಗಳ ನಿರ್ಲಕ್ಷವನ್ನು ಸಹಿಸಲಾಗುವುದಿಲ್ಲ. ತಪ್ಪಗಳು ಮರುಕಳಿಸಿದರೆ ಅಧಿಕಾರಿಗಳ ವಿರರುದ್ಧ ಕಠಿಣ ಕ್ರಮ ಜರುಗಿಸಲಾಗುತ್ತದೆ ಎಂದರು.
ಸಭೆಯಲ್ಲಿ ವಿಭಾಗಾಧಿಕಾರಿ ಮಹ್ಮದ ಖಿಜರ, ಶಿಗ್ಗಾವಿ ಮತ್ತು ಸವಣೂರ ತಾಲೂಕುಗಳ ತಹಶೀಲ್ದಾರರು, ಇಓಗಳು, ಗ್ಯಾರಂಟಿ ಸಮಿತಿಯ ಅಧ್ಯಕ್ಷರುಗಳು ಸೇರಿದಂತೆ ಪಿಡಿಓಗಳು, ತಲಾಟಿಗಳು ಸೇರಿದಂತೆ ಇತರ ಅಧಿಕಾರಿಗಳು ಇದ್ದರು.
ಭಾಕ್ಷ ಸುದ್ದಿ 1 : ಬನ್ನೂರ ಗ್ರಾಪಂ ವ್ಯಾಪ್ತಿಯಲ್ಲಿ ಮನೆ ಹಂಚಿಕೆ ವಿಚಾರವಾಗಿ ಆದ ಸೈಬರ್ ಕ್ರೈಂ ಕುರಿತಾಗಿ ಶಾಸಕ ಯಾಸೀರಖಾನ ಪಠಾಣ ಅವರು ಸಂಪೂರ್ಣ ಮಾಹಿತಿ ಪಡೆದುಕೊಂಡು, ಅಧಿಕಾರಿಗಳು ಮಾಡಿದ ತಪ್ಪಿಗೆ ಸುಮಾರು 10ಕ್ಕು ಅಧಿಕ ಫಲಾನುಭವಿ ಕುಟುಂಬಗಳು ಸೌಲಭ್ಯ ವಂಚಿತರಾಗಿದ್ದಾರೆ. ಕಾನೂನು ಸಲಹೆ ಪಡೆದು ಫಲಾನುಭವಿಗಳಿಗೆ ನ್ಯಾಯ ಒದಗಿಸಿಕೊಡುವಂತೆ ಉಪಸ್ಥಿತರಿದ್ದ ಹಿರಿಯ ಅಧಿಕಾರಿಗಳಲ್ಲಿ ಮನವಿ ಮಾಡಿದರು.
ಕೋಟ್1: ಕ್ಷೇತ್ರದ ನಿರಾಶ್ರಿತ ಫಲಾನುಭವಿಗಳಿಗೆ ಹಿಂದಿನ ಸರ್ಕಾರದ ಅವಧಿಯಲ್ಲಿ ಸಾಕಷ್ಟು ಮನೆಗಳು ಮಂಜುರಾಗಿದ್ದು ಸಂತೋಷದ ವಿಷಯವಾಗಿದ್ದರೂ, ಅಧಿಕಾರಿಗಳ ಇಚ್ಚಾಶಕ್ತಿಯ ಕೊರತೆಯಿಂದ ಅರ್ಹ ಫಲಾನುಭವಿಗಳಿಗೆ ಸರಿಯಾಗಿ ಹಣ ಬಿಡುಗಡೆಯಾಗಿಲ್ಲಾ. ಜಿಲ್ಲಾಧಿಕಾರಿಗಳ ಎನ್‌ಡಿಆರ್‌ಎಪ್ ಫಂಡಿನಲ್ಲಿ ಸಾಕಷ್ಟು ಹಣ ಮೀಸಲಿರುವುದಾಗಿ ವಸತಿ ಸಚಿವರು ತಿಳಿಸಿದ್ದು, ಅಧಿಕಾರಿಗಳು ಸರಿಯಾಗಿ ಕೆಲಸ ಮಾಡಿ ಫಲಾನುಭವಿಗಳಿಗೆ ಕಂತಿನ ಹಣ ಬಿಡುಗಡೆ ಮಾಡಿಸಿಕೊಡಬೇಕು.
ಯಾಸೀರಖಾನ ಪಠಾಣ: ಶಿಗ್ಗಾವಿ ಶಾಸಕ