ಬಳ್ಳಾರಿ ಜಿಲ್ಲೆಯಲ್ಲಿ ಒಣಮೆಣಸಿನಕಾಯಿ ಮಾರುಕಟ್ಟೆ
ಬೆಳಗಾವಿ 18: ಬಳ್ಳಾರಿ ಜಿಲ್ಲೆಯ ಆಲದಹಳ್ಳಿಯಲ್ಲಿ ನಬಾರ್ಡ್, ಎಚ್‌ಕೆಡಿಬಿ ನೆರವಿನೊಂದಿಗೆ ಒಣಮೆಣಸಿನಕಾಯಿ ಮಾರುಕಟ್ಟೆ ಮತ್ತು ಶೀತಲಗೃಹ ನಿರ್ಮಿಸಲು ಪ್ರಯತ್ನಿಸಲಾಗುವುದು ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಬುಧವಾರ ವಿಧಾನಪರಿಷತ್ತಿಗೆ ತಿಳಿಸಿದರು.
ಪ್ರಶ್ನೋತ್ತರ ವೇಳೆಯಲ್ಲಿ ವೈ.ಎಂ. ಸತೀಶ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಒಣಮೆಣಸಿನಕಾಯಿ ಮಾರುಕಟ್ಟೆ ನಿರ್ಮಿಸಲು 25 ಕೋಟಿ ರೂ. ವೆಚ್ಚದ ಪ್ರಸ್ತಾವನೆಗೆ ನಬಾರ್ಡ್ ಅನುಮೋದನೆ ನೀಡಿದೆ.
ಬಳ್ಳಾರಿ ಎಪಿಎಂಸಿ ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿದ್ದು, ಎಪಿಎಂಸಿಯಿಂದಲೂ ಸ್ವಲ್ಪ ನೆರವು ನೀಡಲಾಗುವುದು. ಎಚ್‌ಕೆಡಿಬಿಯಿಂದಲೂ ಅನುದಾನ ಪಡೆದು ಒಣಮೆಣಸಿನಕಾಯಿ ಮಾರುಕಟ್ಟೆ ಮತ್ತು ಶೀತಲ ಗೃಹ ನಿರ್ಮಿಸಲಾಗುವುದು ಎಂದು ಹೇಳಿದರು.ಬಳ್ಳಾರಿ ಜಿಲ್ಲೆಯಲ್ಲಿ ಸುಮಾರು 45 ಸಾವಿರ ಎಕರೆ ಪ್ರದೇಶದಲ್ಲಿ ಒಣಮೆಣಸಿನಕಾಯಿ ಬೆಳೆಯಲಾಗುತ್ತಿದೆ. ಮಾರುಕಟ್ಟೆ ಮತ್ತು ಶೀತಲಗೃಹ ಒಂದೇ ಕಡೆ ಇದ್ದರೆ ರೈತರಿಗೆ ಅನುಕೂಲವಾಗಲಿದೆ. ಈ ದೃಷ್ಟಿಯಲ್ಲಿ ಯೋಜನೆ ರೂಪಿಸಲಾಗುತ್ತಿದೆ ಎಂದರು.ಬಳ್ಳಾರಿ ಎಪಿಎಂಸಿಯಿಂದ ಅಲದಹಳ್ಳಿಯಲ್ಲಿ ಸುಮಾರು 23 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದ್ದು, ಈ ಜಾಗದಲ್ಲಿ ಒಣಮೆಣಸಿನಕಾಯಿ ಮಾರುಕಟ್ಟೆಯನ್ನು ಪಿಪಿಪಿ ಮಾಡೆಲ್‌ನಲ್ಲಿ ನಿರ್ಮಿಸಲು ಎರಡು ಬಾರಿ ಟೆಂಡರ್ ಕರೆದಿದ್ದರೂ ಯಾರೂ ಭಾಗವಹಿಸಿಲ್ಲ ಎಂದು ಪರಿಷತ್ತಿಗೆ ತಿಳಿಸಿದರು.ಬಳ್ಳಾರಿ ಜಿಲ್ಲೆಯ ರೈತರು ಒಣಮೆಣಸಿನಕಾಯಿ ಮಾರಾಟ ಮಾಡಲು ಬ್ಯಾಡಗಿ ಮಾರುಕಟ್ಟೆಗೆ ಹೋಗಬೇಕಿದೆ. ಮಧ್ಯವರ್ತಿಗಳಿಂದಲೂ ಮೋಸಕ್ಕೀಡಾಗುತ್ತಿದ್ದಾರೆ. ಹಾಗಾಗಿ ಆಲದಹಳ್ಳಿಯಲ್ಲಿ ಮೆಣಸಿನಕಾಯಿ ಮಾರುಕಟ್ಟೆ ನಿರ್ಮಾಣವಾಗುವವರೆಗೆ ತಾತ್ಕಾಲಿಕವಾಗಿ ಬಳ್ಳಾರಿ ಎಪಿಎಂಸಿಯಲ್ಲೇ ಒಂದು ಮೆಣಸಿನಕಾಯಿ ಮಾರುಕಟ್ಟೆ ನಿರ್ಮಿಸಬೇಕು ಎಂದು ವೈ.ಎಂ.ಸತೀಶ್ ಸಚಿವರಿಗೆ ಮನವಿ ಮಾಡಿದರು.